ವಿಶ್ವಸಂಸ್ಥೆಯಲ್ಲಿ ‘ಗಾಂಧಿ ಸೋಲಾರ್ ಪಾರ್ಕ್’ ಉದ್ಘಾಟಿಸಲಿರುವ ಮೋದಿ

Update: 2019-09-20 17:27 GMT

ನ್ಯೂಯಾರ್ಕ್, ಸೆ. 20: ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ವಿಶ್ವಸಂಸ್ಥೆಗೆ ಭೇಟಿ ನೀಡುವ ವೇಳೆ, 50 ಕಿಲೋ ವಾಟ್ ಸಾಮರ್ಥ್ಯದ ‘ಗಾಂಧಿ ಸೌರ ಪಾಕ್’ ಉದ್ಘಾಟಿಸಲಿದ್ದಾರೆ.

ಸುಮಾರು ಒಂದು ಮಿಲಿಯ ಡಾಲರ್ (ಸುಮಾರು 7 ಕೋಟಿ ರೂಪಾಯಿ) ವೆಚ್ಚದಲ್ಲಿ ಭಾರತವು ಸೌರ ಫಲಕಗಳನ್ನು ದೇಣಿಗೆ ನೀಡಿದ್ದು, ಅವುಗಳನ್ನು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಮೇಲ್ಛಾವಣಿಯಲ್ಲಿ ಅಳವಡಿಸಲಾಗಿದೆ. ವಿಶ್ವಸಂಸ್ಥೆಯ 193 ಸದಸ್ಯ ದೇಶಗಳಿಗೆ ತಲ ಒಂದರಂತೆ ಭಾರತ ಸೌರ ಫಲಕಗಳನ್ನು ಒದಗಿಸಿದೆ.

 ಮಹಾತ್ಮಾ ಗಾಂಧೀಜಿಯ 150ನೇ ಜನ್ಮ ದಿನಾಚರಣೆ ಸಂಬಂಧ ಸೆಪ್ಟಂಬರ್ 24ರಂದು ಪ್ರಧಾನಿ ಮೋದಿ, ವಿಶ್ವಸಂಸ್ಥೆಯ ಪ್ರಧಾನಕೇಂದ್ರದಲ್ಲಿ ಸೌರ ಪಾರ್ಕ್ ಮತ್ತು ‘ಗಾಂಧಿ ಶಾಂತಿ ಉದ್ಯಾನವನ’ವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ, ಮಹಾತ್ಮಾ ಗಾಂಧೀಜಿಯ 150 ವರ್ಷಗಳನ್ನು ಸ್ಮರಿಸುವ ವಿಶ್ವಸಂಸ್ಥೆಯ ವಿಶೇಷ ಅಂಚೆ ಚೀಟಿಯೊಂದನ್ನೂ ಅವರು ಬಿಡುಗಡೆ ಮಾಡುವರು.

 ‘ಗಾಂಧಿ ಶಾಂತಿ ಉದ್ಯಾನವನ’ವು ವಿಶೇಷ ಕಲ್ಪನೆಯಾಗಿದ್ದು, ಅಲ್ಲಿ 150 ಮರಗಳನ್ನು ನೆಡುವುದಾಗಿ ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕೌನ್ಸುಲೇಟ್ ಜನರಲ್, ಲಾಂಗ್ ಐಲ್ಯಾಂಡ್ ದೇಶದ ಎನ್‌ಜಿಒ ‘ಶಾಂತಿ ಫಂಡ್’ ಮತ್ತು ಸ್ಟೇಟ್ ಯನಿವರ್ಸಿಟಿ ಆಫ್ ನ್ಯೂಯಾರ್ಕ್-ಓಲ್ಡ್ ವೆಸ್ಟ್‌ಬರಿ ಒಪ್ಪಂದವೊಂದಕ್ಕೆ ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News