ಬಾಲಿವುಡ್ ಪ್ರವೇಶ ಕುರಿತು ನಿಜಾಂಶ ತೆರೆದಿಟ್ಟ ದುಲ್ಕರ್

Update: 2019-09-21 13:59 GMT

ಮಲಯಾಳಂ ಸಿನೆಮಾ ರಂಗದಲ್ಲಿ ಈಗಾಗಲೇ ನಾಯಕ ನಟನಾಗಿ ಛಾಪು ಮೂಡಿಸಿರುವ ದುಲ್ಕರ್ ಸಲ್ಮಾನ್ ರೆಯಾ ಫ್ಯಾಕ್ಟರ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇದೇ ಸೆಪ್ಟಂಬರ್ 20ರಂದು ಬಿಡುಗಡೆಯಾಗಲಿರುವ ಈ ಸಿನೆಮಾನ ಅನುಜ್ ಚೌಹಾಣ್ 2008ರ ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಈ ಚಿತ್ರದಲ್ಲಿ ದುಲ್ಕರ್ ಓರ್ವ ಕ್ರಿಕೆಟಿಗನಾಗಿ ನಟಿಸುತ್ತಿದ್ದರೆ ಸೋನಮ್ ಕಪೂರ್ ಜಾಹೀರಾತು ಸಂಸ್ಥೆಯ ಉದ್ಯೋಗಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಸಂಜಯ್ ಕಪೂರ್ ಮತ್ತು ಅಂಗದ್ ಬೇಡಿ ಕೂಡಾ ಉತ್ತಮ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ದುಲ್ಕರ್ ಕಳೆದ ವರ್ಷ ಇರ್ಫಾನ್ ಖಾನ್ ಮತ್ತು ಮಿಥಿಲ ಪಲ್ಕರ್ ಮುಖ್ಯ ಪಾತ್ರದಲ್ಲಿದ್ದ ಕಾರವಾನ್ ಸಿನೆಮಾದ ಮೂಲಕ ಹಿಂದಿ ಸಿನೆಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಾಲಿವುಡ್ ಪಾದಾರ್ಪಣೆ ಕುರಿತು ಮನದ ಮಾತನ್ನು ತೆರದಿಟ್ಟ ದುಲ್ಕರ್, ನಾನು ಹಿಂದಿ ಭಾಷೆಯನ್ನು ಸಮರ್ಥವಾಗಿ ಮಾತನಾಡುವುದೇ ನನ್ನ ಪ್ರಮುಖ ಪ್ಲಸ್ ಪಾಯಿಂಟ್. ಹಿಂದಿ ಮಾತನಾಡುವಾಗ ನಾನು ಮಲಯಾಳಂ ಶೈಲಿಯಲ್ಲಿ ಮಾತನಾಡುವುದಿಲ್ಲ. ಯಾವುದೇ ಭಾಷೆಯಲ್ಲಿ ನಟಿಸಬಲ್ಲ ಸಾಮರ್ಥ್ಯ ನನಗಿದೆ ಎಂದು ನನಗನಿಸುತ್ತದೆ. ಕಾರವಾನ್ ಸಿನೆಮಾದ ಕತೆ ಕೇಳಿದಾಗ ಅದು ನನಗೆ ಬಹಳ ಇಷ್ಟವಾಯಿತು. ಹಾಗಾಗಿ ನಾನು ಆ ಚಿತ್ರ ಮಾಡಲು ಒಪ್ಪಿದೆ. ಎಲ್ಲರೂ ನಿನ್ನ ಮೊದಲ ಹಿಂದಿ ಸಿನೆಮಾ ಸಂಪೂರ್ಣ ಕಮರ್ಷಿಯಲ್ ಆಗಿರಬೇಕಿತ್ತು ಎಂದು ಹೇಳುತ್ತಾರೆ. ಆದರೆ ಅದನ್ನು ನಾನು ಒಪ್ಪುವುದಿಲ್ಲ. ರೆಯಾ ಫ್ಯಾಕ್ಟರ್‌ನಲ್ಲಿ ನಟಿಸುವ ಮೂಲಕ ಅವಿನಾಶ್ ಪಾತ್ರ ನಿಭಾಯಿಸಿದ್ದ ಈ ಹುಡುಗ ನಿಖಿಲ್ ಪಾತ್ರವನ್ನೂ ನಿಭಾಯಿಸಬಲ್ಲ ಎಂದು ಪ್ರೇಕ್ಷಕರು ಹೇಳಲು ನಾನು ಬಯಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರೆಯಾ ಫ್ಯಾಕ್ಟರ್‌ಗೆ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಕಾತರದಿಂದ ಕಾಯುತ್ತಿರುವ ದುಲ್ಕರ್, ಇದೊಂದು ಪಕ್ಕಾ ಮನರಂಜನಾತ್ಮಕ ಸಿನೆಮಾ ಆಗಿದ್ದು ನೋಡುಗರು ಇಷ್ಟಪಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News