100 ಕೋಟಿ ರೂ. ಕ್ಲಬ್ ಸೇರಿದ ಚಿಚೋರೆ

Update: 2019-09-21 14:01 GMT

ದಂಗಲ್ ಎಂಬ ಯಶಸ್ವಿ ಸಿನೆಮಾ ನಿರ್ದೇಶಿಸಿದ್ದ ನಿತೇಶ್ ತಿವಾರಿ ಮತ್ತೊಮ್ಮೆ ಗೆದ್ದಿದ್ದಾರೆ. ಈ ಬಾರಿ ಚಿಚೋರೆ ಎಂಬ ಚಿತ್ರದ ಮೂಲಕ ತಿವಾರಿ ತನ್ನ ನಿರ್ದೇಶನಾ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ದಂಗಲ್ ನಿರ್ದೇಶಕನ ಸಿನೆಮಾ ಎನ್ನುವುದು ಬಿಟ್ಟರೆ ಸುಶಾಂತ್ ಸಿಂಗ್ ರಾಜ್‌ಪೂತ್ ಮತ್ತು ಶ್ರದ್ಧಾ ಕಪೂರ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ಬಗ್ಗೆ ಅಷ್ಟೊಂದು ನಿರೀಕ್ಷೆಗಳು ಇರಲಿಲ್ಲ. ಆದರೆ ಹೊಸ ಜೋಡಿ ಮತ್ತು ಕೆಲವೊಂದು ಹೊಸ ಮುಖಗಳು ಪ್ರೇಕ್ಷಕರು ಈ ಚಿತ್ರವನ್ನು ಥಟ್ ಅಂತ ಇಷ್ಟಪಡಲು ನೆರವಾಗಿದೆ. ಚಿಚೋರೆಗೆ ಅಷ್ಟೊಂದು ಪ್ರಚಾರ ದೊರೆಯದಿದ್ದರೂ ಚಿತ್ರ ಬಿಡುಗಡೆಗೊಂಡ ನಂತರ ಪ್ರೇಕ್ಷಕರ ಉತ್ತಮ ವಿಮರ್ಶೆಗಳು ಮತ್ತು ಪ್ರಶಂಸೆಗಳಿಂದಾಗಿ ಬಿಡುಗಡೆಯಾದ ಒಂದೆರಡು ದಿನಗಳಲ್ಲೇ ಚಿತ್ರದ ಬಾಕ್ಸ್ ಆಫೀಸ್ ಓಟಕ್ಕೆ ಬಿರುಸು ದೊರಕಿತ್ತು. ಚಿಚೋರೆ ಸಿನೆಮಾ ಕಾಲೇಜು ಜೀವನ, ಪ್ರೀತಿ, ಗೆಳೆತನ, ವಿದ್ಯಾರ್ಥಿಗಳು ಮತ್ತು ಆತ್ಮಹತ್ಯೆಯ ಮಧ್ಯೆ ಗಿರಕಿ ಹೊಡೆಯುತ್ತದೆ. ಐವರು ಕಾಲೇಜು ಗೆಳೆಯರು ಜೀವನದಲ್ಲಿ ಯಾವ ರೀತಿ ತಮಗೆ ಎದುರಾದ ಕಷ್ಟಗಳನ್ನು ಜೊತೆಯಾಗಿ ಎದುರಿಸಿ ಗೆಲ್ಲುತ್ತಾರೆ ಎನ್ನುವುದೇ ಚಿತ್ರದ ಕತೆ. ಬಿಡುಗಡೆಗೊಂಡ ಮೊದಲ ವಾರದಲ್ಲೇ 68.83 ಕೋಟಿ ರೂ. ಸಂಗ್ರಹಿಸಿದ ಚಿಚೋರೆ ಎರಡನೇ ವಾರದಲ್ಲಿ ತನ್ನ ಗಳಿಕೆಯನ್ನು 98.08 ಕೋಟಿ ರೂ.ಗೆ ಏರಿಸಿತ್ತು. ಸದ್ಯ ಆಯುಷ್ಮಾನ್ ಖುರಾನ ಅಭಿನಯದ ವಿಭಿನ್ನ ಸಿನೆಮಾ ಡ್ರೀಮ್ ಗರ್ಲ್ ಚಿಚೋರೆಗೆ ತೀವ್ರ ಪೈಪೋಟಿ ಒಡ್ಡಿದರೂ ಎರಡೂ ಸಿನೆಮಾಗಳು ಗಲ್ಲಾ ಪೆಟ್ಟಿಗೆಯನ್ನು ದೋಚಿರುವುದು ವಿಶೇಷವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News