ನಟ ಮೋಹನ್ ಲಾಲ್ ವಿರುದ್ಧ 7 ವರ್ಷಗಳ ಬಳಿಕ ಚಾರ್ಜ್ ಶೀಟ್

Update: 2019-09-21 16:59 GMT

ನಾಲ್ಕು ಆನೆ ದಂತಗಳನ್ನು ತನ್ನ ಬಳಿ ಇರಿಸಿಕೊಂಡ ಆರೋಪದಲ್ಲಿ ಬಹುಭಾಷಾ ನಟ ಮೋಹನ್ ಲಾಲ್ ವಿರುದ್ಧ ಕೇರಳ ಅರಣ್ಯ ಇಲಾಖೆ 7 ವರ್ಷಗಳ ಬಳಿಕ ಚಾರ್ಜ್ ಶೀಟ್ ದಾಖಲಿಸಿದೆ.

ಆದಾಯ ತೆರಿಗೆ ಇಲಾಖೆ 2012ರಲ್ಲಿ ಮೋಹನ್ ಲಾಲ್ ಮನೆ ಮೇಲೆ ದಾಳಿ ನಡೆಸಿದ್ದ ಸಂದರ್ಭ 4 ದಂತಗಳು ಪತ್ತೆಯಾಗಿದ್ದವು. ದಂತಗಳನ್ನು ಇರಿಸಿಕೊಳ್ಳಲು ಬೇಕಾಗಿರುವ ವಿಶೇಷ ಲೈಸೆನ್ಸ್ ಮೋಹನ್ ಲಾಲ್ ಬದಲಾಗಿ ಬೇರೆಯವರ ಹೆಸರಿನಲ್ಲಿತ್ತು. 2010ರಲ್ಲಿ ಕೆ. ಕೃಷ್ಣ ಕುಮಾರ್ ಎಂಬವರಿಂದ ಒಂದು ದಂತವನ್ನು 65 ಸಾವಿರ ರೂ.ಗೆ ಖರೀದಿಸಿದ್ದೆ ಎಂದು ಮೋಹನ್ ಲಾಲ್ ತಿಳಿಸಿದ್ದರು.

ದಂತವನ್ನು ಇರಿಸಿಕೊಳ್ಳುವುದು, ಸಾಗಾಟ ಮಾಡುವುದು ವನ್ಯಜೀವಿ ರಕ್ಷಣಾ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಿದೆ.

ಆದುದರಿಂದ ರಾಜ್ಯ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿತ್ತು. ಅನಂತರ ಹಿಂದೆ ತೆಗೆದಿತ್ತು. ಅಸ್ತಿತ್ವದಲ್ಲಿದ್ದ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಆನೆದಂತವನ್ನು ವಶದಲ್ಲಿ ಇರಿಸಿಕೊಳ್ಳಲು ರಾಜ್ಯ ಸರಕಾರ ಮೋಹನ್ ಲಾಲ್‌ಗೆ ಅನುಮತಿ ನೀಡಿತ್ತು. ಅರಣ್ಯ ಸಂರಕ್ಷಣೆಯ ಮುಖ್ಯಾಧಿಕಾರಿ ಮೋಹನ್ ಲಾಲ್ ಅವರಿಗೆ ಆನೆದಂತದ ಮಾಲಕತ್ವ ಹೊಂದಲು ನೀಡಿದ ಆದೇಶ ಪ್ರಶ್ನಿಸಿ ಹೋರಾಟಗಾರರೊಬ್ಬರು ಕೇರಳ ಹೈಕೋರ್ಟ್‌ನ ಮೆಟ್ಟಿಲೇರಿದ್ದರು.

ಮನವಿ ಆಲಿಸಿದ ಉಚ್ಚ ನ್ಯಾಯಾಲಯ ವನ್ಯಜೀವಿ ರಕ್ಷಣಾ ಕಾಯ್ದೆಯ ಕಲಂ 39 (3)ರ ಅಡಿಯಲ್ಲಿ ಮೋಹನ್ ಲಾಲ್ ವಿರುದ್ಧ ಆರೋಪ ದಾಖಲಿಸಬಹುದು ಎಂದು ಸೂಚಿಸಿತ್ತು. ಅಲ್ಲದೆ, ಆರೋಪ ಪಟ್ಟಿ ಸಲ್ಲಿಸಲು ವಿಳಂಬಿಸಿರುವುದಕ್ಕೆ ಅರಣ್ಯ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News