ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ನ ಏಕ ಸದಸ್ಯ ಪೀಠದಿಂದ ಜಾಮೀನು ಅರ್ಜಿ ವಿಚಾರಣೆಗೆ ನಿರ್ಧಾರ

Update: 2019-09-21 17:28 GMT

ಹೊಸದಿಲ್ಲಿ, ಸೆ. 20: ಪ್ರಕರಣಗಳು ಬಾಕಿಯಾಗುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಬಾರಿಗೆ ಜಾಮೀನು ಹಾಗೂ ವರ್ಗಾವಣೆಯ ಪ್ರಕರಣಗಳ ವಿಚಾರಣೆಯನ್ನು ನಿಯಮಿತ ಏಕಸದಸ್ಯ ಪೀಠ ನಡೆಸಲಿದೆ.

 ಇದುವರೆಗೆ ಈ ವರ್ಗದ ಎಲ್ಲ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ರಚಿಸಲಾದ ಇಬ್ಬರು ನ್ಯಾಯಮೂರ್ತಿಗಳ (ವಿಭಾಗೀಯ ನ್ಯಾಯಪೀಠ) ಅಥವಾ ಹೆಚ್ಚು ಸಂಖ್ಯೆಯ ನ್ಯಾಯಮೂರ್ತಿಗಳಿದ್ದ ಪೀಠಗಳು ವಿಚಾರಣೆ ನಡೆಸುತ್ತಿತ್ತು. ರಜಾ ಕಾಲದಲ್ಲಿ ಮಾತ್ರ ಇಂತಹ ಪ್ರಕರಣಗಳನ್ನು ಏಕ ಸದಸ್ಯ ಪೀಠ ವಿಚಾರಣೆ ನಡೆಸುತ್ತಿತ್ತು.

ಆದರೆ, ಈಗ ಮುಖ್ಯ ನ್ಯಾಯಮೂರ್ತಿ ಅವರ ಸಲಹೆಯಂತೆ ಕೇಂದ್ರ ಸರಕಾರ 7 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸುವ ಅಪರಾಧಗಳ ಜಾಮೀನು ಹಾಗೂ ನಿರೀಕ್ಷಣಾ ಜಾಮೀನು ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಏಕ ಸದಸ್ಯ ಪೀಠ ನಡೆಸುವ ನೂತನ ನಿಯಮವನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ.

ಈಗ ಅಸ್ತಿತ್ವದಲ್ಲಿ ಇರುವ 2013ರ ಸುಪ್ರೀಂ ಕೋರ್ಟ್‌ನ ನಿಯಮದ ಅಡಿಯಲ್ಲಿ ಈ ನೂತನ ನಿಯಮ ಸೇರಿಸಲಾಗಿದೆ. ಈ ಪ್ರಕರಣಗಳ ವಿಚಾರಣೆ ನಡೆಸುವ ಏಕ ನ್ಯಾಯಾಧಿಶರನ್ನು ಮುಖ್ಯ ನ್ಯಾಯಮೂರ್ತಿ ಸೂಚಿಸಲಿದ್ದಾರೆ.

 ಸಿಆರ್‌ಪಿಸಿಯ ಕಲಂ 406ರ ಅಡಿಯಲ್ಲಿ ಬರುವ ಕ್ರಿಮಿನಲ್ ಪ್ರಕರಣಗಳನ್ನು ಒಂದು ನ್ಯಾಯಾಲಯದಿಂದ ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಯಿಸುವ ಮನವಿಯನ್ನು ಕೂಡ ಏಕ ಸದಸ್ಯ ಪೀಠ ವಿಚಾರಣೆ ನಡೆಸುವ ಅವಕಾಶವನ್ನು ಈ ಹೊಸ ನಿಯಮ ಒದಗಿಸುತ್ತದೆ.

ದಿನನಿತ್ಯ ಪ್ರಕರಣಗಳ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಏಕ ಸದಸ್ಯ ಪೀಠವನ್ನು ರೂಪಿಸುತ್ತಿರುವುದು ಇದೇ ಮೊದಲು. ಹಳೆಯ ನಿಯಮದ ಪ್ರಕಾರ ರಜಾಕಾಲದ ವೇಳೆಯಲ್ಲಿ ಮಾತ್ರ ಇಂತಹ ಪ್ರಕರಮಗಳನ್ನು ಏಕ ಸದಸ್ಯ ಪೀಠ ನಡೆಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News