ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶೆ ವಿಜಯಾ ರಾಜೀನಾಮೆ ಅಂಗೀಕಾರ

Update: 2019-09-21 17:31 GMT

ಚೆನ್ನೈ, ಸೆ.21: ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶೆ ವಿಜಯಾ ಕೆ ತಾಹಿಲ್ರಮಣಿ ಸಲ್ಲಿಸಿರುವ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಸರಕಾರ ತಿಳಿಸಿದೆ.

ಸೆ.6ರಿಂದ ಅನ್ವಯಿಸುವಂತೆ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದು ನ್ಯಾ. ವಿ ಕೊಠಾರಿಯನ್ನು ಮದ್ರಾಸ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ ಎಂದು ಸರಕಾರದ ಅಧಿಸೂಚನೆ ತಿಳಿಸಿದೆ.

ನ್ಯಾ. ವಿಜಯಾ ತಾಹಿಲ್ರಮಣಿಯನ್ನು ಮೇಘಾಲಯ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು. ವರ್ಗಾವಣೆ ಆದೇಶ ರದ್ದುಗೊಳಿಸುವಂತೆ ಅವರು ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಕೊಲಿಜಿಯಂ ತಳ್ಳಿಹಾಕಿತ್ತು. ಈ ಹಿನ್ನೆಲೆಯಲ್ಲಿ ನ್ಯಾ. ವಿಜಯಾ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

ನ್ಯಾ. ವಿಜಯಾರ ವರ್ಗಾವಣೆ ವಿಷಯ ಭಾರೀ ವಿವಾದಕ್ಕೆ ಕಾರಣವಾಗಿದ್ದು ಚೆನ್ನೈ ಹಾಗೂ ವಿಜಯಾರ ತವರು ರಾಜ್ಯ ಮಹಾರಾಷ್ಟ್ರದಲ್ಲಿ ವಕೀಲರು ಪ್ರತಿಭಟನೆ ನಡೆಸಿದ್ದರು. ಆದರೆ ವಿವಿಧ ಕೋರ್ಟ್‌ಗಳ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಾಧೀಶರ ವರ್ಗಾವಣೆಗೆ ಸಮರ್ಪಕ ಕಾರಣವಿರುತ್ತದೆ ಎಂದು ಸುಪ್ರೀಂಕೋರ್ಟ್ ತಿಳಿಸಿತ್ತು. ಈ ಕಾರಣಗಳನ್ನು ಅಗತ್ಯಬಿದ್ದರೆ ಮಾತ್ರ ಬಹಿರಂಗಗೊಳಿಸುವುದಾಗಿ ಸುಪ್ರೀಂಕೋರ್ಟ್‌ನ ಪ್ರಧಾನ ಕಾರ್ಯದರ್ಶಿ ಸಂಜೀವ್ ಎಸ್ ಕಲ್ಗಾಂವ್‌ಕರ್ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News