ದಿ ಝೋಯಾ ಫ್ಯಾಕ್ಟರ್: ಪ್ರತಿಭೆಯ ಕೈ ಹಿಡಿದೀತೇ ಅದೃಷ್ಟ?

Update: 2019-09-22 12:52 GMT

ಹಾಸ್ಯ ಲವಲವಿಕೆಯ ಚಿತ್ರಗಳಿಗಾಗಿ ಅಭಿಷೇಕ್ ಶರ್ಮಾ ಹೆಸರಾದವರು. ತೇರೆ ಬಿನ್ ಲಾದೆನ್, ತೇರೆ ಬಿನ್ ಲಾದೆನ್ ಡೆಡ್ ಆರ್ ಅಲೈವ್, ದಿ ಶೌಕೀನ್ಸ್ ಚಿತ್ರಗಳು ಹಾಸ್ಯದ ಮೂಲಕ ವಿಭಿನ್ನ ಸಂದೇಶಗಳನ್ನು ತಲುಪಿಸಲು ಪ್ರಯತ್ನಿಸಿದವರು. ಅವರ ಮೊತ್ತ ಮೊದಲ ತೇರೆ ಬಿನ್ ಲಾದೆನ್ ಚಿತ್ರವು ಪಾಕಿಸ್ತಾನದ ವರ್ತಮಾನವನ್ನು ವ್ಯಂಗ್ಯ ಮಾಡುತ್ತಲೇ, ವಿಶ್ವಕ್ಕೆ ಶಾಂತಿ ಸಂದೇಶವನ್ನು ಲಾದೆನ್ ಬಾಯಿಯಿಂದ ಕರೆಕೊಡಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಮೂರು ಚಿತ್ರಗಳ ಬಳಿಕ ‘ಪರಮಾಣು’ ಎನ್ನುವ ಗಂಭೀರ ಥ್ರಿಲ್ಲರ್ ಚಿತ್ರವನ್ನು ನಿರ್ದೇಶಿಸ ಹೊರಟು ವಿಫಲರಾದರು. ಈ ಚಿತ್ರ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಪರಿಣಾಮವಾಗಿ ಮತ್ತೆ ಹಾಸ್ಯ, ಲವಲವಿಕೆಯ ಚಿತ್ರದ ಮೂಲಕವೇ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಮುಂದಾಗಿದ್ದಾರೆ.

‘ದಿ ಝೋಯಾ ಫ್ಯಾಕ್ಟರ್’ ಅದೃಷ್ಟ ಮತ್ತು ಆತ್ಮಬಲದ ನಡುವಿನ ತಾಕಲಾಟಕ್ಕೆ ಸಂಬಂಧಿಸಿದ ಚಿತ್ರ. ಈ ಚಿತ್ರದ ಇನ್ನೊಂದು ಹೆಗ್ಗಳಿಕೆ ದುಲ್ಖರ್ ಸಲ್ಮಾನ್. ‘ಕಾರವಾನ್’ ಚಿತ್ರದಲ್ಲಿ ಬಾಲಿವುಡ್‌ಗೆ ಕಾಲಿಟ್ಟು ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ವಿಫಲರಾದ ಮಲಯಾಳದ ಖ್ಯಾತ ನಟ ದುಲ್ಖರ್, ‘ದಿ ರೆಯಾ ಫ್ಯಾಕ್ಟರ್’ ತನ್ನ ಕೈ ಹಿಡಿದೀತೆನ್ನುವ ನಂಬುಗೆಯಲ್ಲಿದ್ದಾರೆ. ಕ್ರಿಕೆಟ್ ಅದೃಷ್ಟದಾಟವೋ, ಪ್ರತಿಭೆಯ ಆಟವೋ ಅಥವಾ ಜೂಜಾಟವೋ ಎನ್ನುವುದರ ಕುರಿತಂತೆ ಇನ್ನೂ ಗೊಂದಲಗಳಿವೆ. ಭಾರತೀಯ ತಂಡ 1983ರ ವಿಶ್ವಕಪ್ ಕ್ರಿಕೆಟ್ ಟ್ರೋಫಿ ಗೆದ್ದ ದಿನವೇ ಜನಿಸಿದ ರೆಯಾ ಅತ್ಯಂತ ಲಕ್ಕಿ ಎಂದೇ ಅವಳ ಕುಟುಂಬದವರು ಭಾವಿಸಿದ್ದರು. ಆಕೆಯ ‘ಅದೃಷ್ಟ’ವೇ ಚಿತ್ರದ ಕೇಂದ್ರ ವಸ್ತು. ಪ್ರತಿಭೆ, ಆತ್ಮಬಲದ ಮೇಲೆ ನಂಬಿಕೆಯಿರುವ ಕ್ರಿಕೆಟ್ ನಾಯಕ, ಇದೇ ಸಂದರ್ಭದಲ್ಲಿ ರೆಯಾ ಅವರ ಅದೃಷ್ಟದ ಮೇಲೆ ನಂಬಿಕೆ ಹೊಂದಿರುವ ಕ್ರಿಕೆಟ್ ತಂಡದ ಆಡಳಿತ ವರ್ಗ ಇವುಗಳ ನಡುವೆ ಸಿಕ್ಕಿ ಒದ್ದಾಡುವ ನಾಯಕ-ನಾಯಕಿಯರ ಪ್ರೇಮ. ಇಷ್ಟನ್ನು ಇಟ್ಟುಕೊಂಡು ಒಂದು ಸದಭಿರುಚಿಯ ಹಾಸ್ಯ ಚಿತ್ರವನ್ನು ಸಿದ್ಧಪಡಿಸುವಲ್ಲಿ ನಿರ್ದೇಶಕ ಶರ್ಮಾ ಯಶಸ್ವಿಯಾಗಿದ್ದಾರೆ.

ಜಾಹೀರಾತು ಕಂಪೆನಿಯ ಜ್ಯೂನಿಯರ್ ಕಾಪಿರೈಟರ್ ಆಗಿ ಕೆಲಸ ಮಾಡುತ್ತಿರುವ ರೆಯಾ (ಸೋನಮ್ ಕಪೂರ್)ಳನ್ನು ಭಾರತೀಯ ಕ್ರಿಕೆಟ್ ತಂಡದೊಂದಿಗೆ ಫೋಟೊ ಶೂಟ್‌ಗೆ ಕಳಿಸಲಾಗುತ್ತದೆ. ಅಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ನಿಖಿಲ್ ಖೋಡಾ(ದುಲ್ಖರ್ ಸಲ್ಮಾನ್)ನೊಂದಿಗೆ ಪ್ರೀತಿ ಮೂಡುತ್ತದೆ. ಒಮ್ಮೆ ತಂಡದ ಜೊತೆ ಊಟ ಮಾಡುವ ಸಮಯದಲ್ಲಿ ಆಕೆ ತನಗಿರುವ ‘ಅದೃಷ್ಟದ ಮೋಡಿ’ಯ ಬಗ್ಗೆ ತಂಡದ ಆಟಗಾರರಿಗೆ ತಿಳಿಸಿದಾಗ ಇಡೀ ತಂಡವೇ ಆಕೆಯ ಪ್ರಭಾವಕ್ಕೊಳಗಾಗುತ್ತದೆ. ಪರಿಣಾಮವಾಗಿ, ಕಳಪೆ ನಿರ್ವಹಣೆ ತೋರುತ್ತಿದ್ದ ತಂಡ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲುತ್ತದೆ. ನಿಜಕ್ಕೂ ತಂಡ ಅದೃಷ್ಟದಿಂದ ಗೆದ್ದಿರುವುದೇ ಅಥವಾ ಆತ್ಮಬಲದಿಂದಲೇ ಎನ್ನುವುದು ಇದೀಗ ನಾಯಕ ಮತ್ತು ಆತನ ತಂಡದ ನಡುವೆ ತಿಕ್ಕಾಟದ ವಿಷಯವಾಗುತ್ತದೆ. ಯಾಕೆಂದರೆ ನಾಯಕ ಕಠಿಣ ಪರಿಶ್ರಮ ಮತ್ತು ಸ್ವನಂಬಿಕೆಯ ಮೇಲೆ ವಿಶ್ವಾಸ ಹೊಂದಿದಾತ. ಕೊನೆಯ ಪಂದ್ಯದಲ್ಲಿ ರೆಯಾ ಜೊತೆಗಿರಬೇಕು ಎಂದು ತಂಡ ಬಯಸುತ್ತದೆ. ಆದರೆ ಇದಕ್ಕೆ ನಾಯಕನ ಆಕ್ಷೇಪ. ಅಂತಿಮವಾಗಿ ಯಾವುದು ಗೆಲ್ಲುತ್ತದೆ ಎನ್ನುವುದು ಕ್ಲೈಮಾಕ್ಸ್

ತನ್ನ ಎರಡನೇ ಚಿತ್ರದಲ್ಲಿ ದುಲ್ಖರ್ ಸಲ್ಮಾನ್ ತನ್ನ ಸಹಜ ನಟನೆಯಿಂದ ಮೋಡಿ ಮಾಡಿದ್ದಾರೆ. ಗಂಭೀರ ಪಾತ್ರಗಳ ಮುಖಭಾವವುಳ್ಳ ಸಲ್ಮಾನ್ ಹಾಸ್ಯಕ್ಕೂ ಸೈ ಎನಿಸಿಕೊಂಡಿದ್ದಾರೆ. ಜ್ಯೂನಿಯರ್ ಕಾಪಿರೈಟರ್ ಆಗಿ ಮುಗ್ಧ ಪಾತ್ರದಲ್ಲಿ ಸೋನಮ್ ಕಪೂರ್ ಈ ಸಿನೆಮಾದ ಮೂಲಕ ತನ್ನ ವಿಫಲ ಸಿನೆಮಾ ವೃತ್ತಿಜೀವನವನ್ನು ಮತ್ತೆ ಮೇಲೆತ್ತಲು ಪ್ರಯತ್ನಿಸಿದ್ದಾರೆ. ಅಲ್ಲದೆ ಸೋನಮ್ ಹಾಗೂ ದುಲ್ಖರ್ ಅವರ ಕೆಮಿಸ್ಟ್ರಿಯೂ ಅತ್ಯುತ್ತಮವಾಗಿದ್ದು ವೀಕ್ಷಕರ ಮನಸೆಳೆಯುತ್ತದೆ. ಅನುಜಾ ಚೌಹಾಣ್ ಅವರ ಇದೇ ಹೆಸರಿನ ಕಾದಂಬರಿಯನ್ನು ಲಘು ಹಾಸ್ಯದ ರೊಮ್ಯಾಂಟಿಕ್ ಸಿನೆಮಾವನ್ನಾಗಿಸಿದ್ದಾರೆ ನಿರ್ದೇಶಕ ಅಭಿಷೇಕ್ ಶರ್ಮಾ. ಸಿನೆಮಾದಲ್ಲಿ ಕೆಲವು ಅಸಂಭವ ಕ್ಷಣಗಳನ್ನೂ ವಿನೋದಮಯವಾಗಿ ಚಿತ್ರಿಸಿದ್ದಾರೆ. ಕೆಲ ಹೊತ್ತು ಕಾಣಿಸಿಕೊಳ್ಳುವ ಪಾತ್ರವಾದರೂ ಅನಿಲ್ ಕಪೂರ್ ತಮ್ಮ ಛಾಪನ್ನು ಒತ್ತಿದ್ದಾರೆ. ಝೋಯಾಳ ತಂದೆಯ ಪಾತ್ರದಲ್ಲಿ ಪೋಷಕ ಪಾತ್ರ ನಿರ್ವಹಿಸಿರುವ ಸಂಜಯ್ ಕಪೂರ್, ತಂಡದ ಓರ್ವ ಪ್ರಮುಖ ಆಟಗಾರ ರಾಬಿನ್‌ನ ಪಾತ್ರದಲ್ಲಿ ಅಂಗದ್ ಬೇಡಿ, ಝೋಯಾಳ ಸಹೋದರನಾಗಿ ಸಿಖಂದರ್ ಖೇರ್ ಗಮನ ಸೆಳೆಯುತ್ತಾರೆ. ಸಿನೆಮಾದಲ್ಲಿ ಲೈವ್ ವೀಕ್ಷಕ ವಿವರಣೆಯಂತೂ ಅದ್ಭುತವಾಗಿದೆ. ಶಂಕರ ಎಹ್ಸಾನ್ ಲಾಯ್ ಅವರ ಹಿನ್ನೆಲೆ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಶರ್ಮಾ ಮತ್ತು ದುಲ್ಖರ್ ಸಲ್ಮಾನ್ ಪ್ರತಿಭೆಗಳಿಗೆ ಪೂರಕವಾಗಿ ಅದೃಷ್ಟ ಸಹಕರಿಸುವುದೇ ಎನ್ನುವುದನ್ನು ಬಾಕ್ಸ್ ಆಫೀಸ್ ಹೇಳಬೇಕು.
------------------------------------

ತಾರಾಗಣ : ದುಲ್ಖರ್ ಸಲ್ಮಾನ್, ಸೋನಮ್ ಕಪೂರ್, ಸಂಜಯ್ ಕಪೂರ್
 ನಿರ್ದೇಶನ : ಅಭಿಷೇಕ್ ಶರ್ಮಾ
 ನಿರ್ಮಾಣ : ಪೂಜಾ ಶೆಟ್ಟಿ, ಆರತಿ ಶೆಟ್ಟಿ

Writer - ಮುಸಾಫಿರ್

contributor

Editor - ಮುಸಾಫಿರ್

contributor

Similar News