ಚಂದ್ರಯಾನ ವೆಫಲ್ಯಕ್ಕೆ ನೆಹರೂ ಕುಟುಂಬ ಕಾರಣ!

Update: 2019-09-21 18:33 GMT

 ಕನ್ನಡದ ಖೋಟಾಧಿಪತಿಗೆ ಈ ಬಾರಿ ಕ್ಯಾತ ಪುತ್ರಕರ್ತರೂ, ಕೊಂಕಣಕಾರರು, ಪ್ರಲಾಪ ವೀರರು ಆಗಿರುವ ಪ್ರಲಾಪ ಸಿಂಹ ಮತ್ತು ನೆರೆ ಪರಿಹಾರ ಪ್ರವೀಣರೂ ಆಗಿರುವ ಆರೆಸ್ಸೆಸ್‌ನ ಮುದ್ದಿನ ಪುತ್ರ ಥೂಜಸ್ವಿ ಶೂರ್ಯ ಭಾಗವಹಿಸಿರುವುದರಿಂದ ಕನ್ನಡ ಕುಲಕೋಟಿ ಜನರು ಟಿವಿಯ ಮುಂದೆ ನೆರೆದರು. ಖೋಟಾಧಿಪತಿ ಕಾರ್ಯಕ್ರಮ ನಡೆಸುತ್ತಿರುವ ಕುಖ್ಯಾತ ಆರ್ಥಿಕ ತಜ್ಞ, ಸಕಲ ಕಲಾ ವಲ್ಲಭ, ಪ್ರಾಚೀನ ವಿಜ್ಞಾನಿ ವಕ್ರವರ್ತಿ ಸುಳ್ಳಿನಬೆಲೆ ಎಂದಿನಂತೆಯೇ ತಮ್ಮ ಖೋಟಾ ನಗುವನ್ನು ನಗುತ್ತಾ ಕಂಪ್ಯೂಟರ್ ಮುಂದೆ ಕುಳಿತಿದ್ದರು. ಕರ್ನಾಟಕ ರಾಜಕಾರಣದ ಪ್ರಪ್ರಥಮ ಸಯಾಮಿ ಶಿಶುಗಳಾಗಿರುವ ಥೂಜಸ್ವಿ ಶೂರ್ಯ ಮತ್ತು ಪ್ರಲಾಪ ಸಿಂಹ ಸಯಾಮಿ ಶಿಶುಗಳಂತೆ ಸುಳ್ಳಿನಬೆಲೆಯ ಮುಂದೆ ಒಂದೇ ಕುರ್ಚಿಯಲ್ಲಿ ಕುಳಿತಿದ್ದರು.

ಸುಳ್ಳಿನ ಬೆಳೆ ಶುರು ಹಚ್ಚಿದರು ‘‘ಈಗ ಪ್ರಶ್ನೆ ಕೇಳುತ್ತೇನೆ. ನಿಮ್ಮ ದೇಹ ಎರಡು ಮತ್ತು ಎರಡು ತಲೆ ಒಂದೇ ಆಗಿರುವುದರಿಂದ ದೇಹಗಳು ಪ್ರತ್ಯೇಕವಾಗಿ ಉತ್ತರಿಸಬೇಕಾಗಿಲ್ಲ. ಮುಖ್ಯವಾಗಿ ಪ್ರಲಾಪ ಸಿಂಹರನ್ನು ದೇಹವಾಗಿಯೂ ಥೂಜಸ್ವಿ ಅವರು ವಿಷ್ಣುವಿನ ತಲೆಯಿಂದ ಹುಟ್ಟಿದ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಅವರನ್ನು ಇಲ್ಲಿ ತಲೆಯಾಗಿಯೂ ಪರಿಗಣಿಸಲಾಗುವುದು. ಪ್ರತಿ ಪ್ರಶ್ನೆಗಳಿಗೆ ಒಂದು ಸಾವಿರ ಖೋಟಾ ನೋಟುಗಳನ್ನು ನೀಡಲಾಗುವುದು. ಬಹುಮಾನಗಳು ಜಿಎಸ್‌ಟಿ ವ್ಯಾಪ್ತಿಯಲ್ಲಿ ಬರುವುದರಿಂದ ತೆರಿಗೆಗಳು ಅನ್ವಯಿಸುತ್ತವೆ....ಈಗ ಮೊದಲ ಪ್ರಶ್ನೆಯನ್ನು ಕೇಳುವುದಕ್ಕೆ ಹೊರಟಿದ್ದೇನೆ.... ನೀವು ಸಿದ್ಧವೆ...?’’

ಸಯಾಮಿ ಶಿಶುಗಳಲ್ಲಿ ಒಂದು ತಲೆಯಾಡಿಸಿದರೆ ಮತ್ತೊಂದು ಕಾಲನ್ನಾಡಿಸಿತು.

 ‘‘ಸರಿ, ಮೊದಲ ಪ್ರಶ್ನೆ....ಇಸ್ರೋ ಚಂದ್ರಯಾನ ವೈಫಲ್ಯಕ್ಕೆ ಕಾರಣವೇನು? ಉತ್ತರ: ಎ. ಕೆಲವು ನಾಸ್ತಿಕ ವಿಜ್ಞಾನಿಗಳು ಬಿ. ಪಾಕಿಸ್ತಾನದ ಉಗ್ರರು. ಸಿ. ನೆಹರೂ ಕುಟುಂಬ. ಡಿ. ಚಂದ್ರಗ್ರಹಣ.’’

ತಕ್ಷಣ ಸಯಾಮಿ ಶಿಶುಗಳು ನಾನು ಹೇಳುತ್ತೇನೆ ನಾನು ಹೇಳುತ್ತೇನೆ ಎಂದು ಜಗಳಕ್ಕೆ ನಿಂತವು. ಸುಳ್ಳಿನ ಬೆಳೆೆ ಜಗಳ ಪರಿಹರಿಸಿದರು ‘‘ತಲೆಯಿಂದ ಹುಟ್ಟಿರುವ ಥೂಜಸ್ವಿ ಶೂರ್ಯರಿಗೆ ಅವಕಾಶ....ಹೇಳಿ...’’

‘‘ನೆಹರೂ!’’ ಉತ್ತರ ಬಾಣದಂತೆ ಬಂತು.

‘‘ಲಾಕ್ ಮಾಡ್ಲಾ...’’

‘‘ಮಾಡಿ...’’ ಈಗ ಸುಳ್ಳಿನ ಬೆಳೆ ಪ್ರಲಾಪ ಸಿಂಹನ ತಲೆಯತ್ತ ನೋಡಿತು....ಪ್ರಲಾಪ ಸಿಂಹವೂ ‘‘ನೆಹರೂ’’ ಎಂದಾಕ್ಷಣ ಲಾಕ್ ಮಾಡಲಾಯಿತು.

 ‘‘ಸರಿ ಉತ್ತರ. ನೆಹರೂ ಕುಟುಂಬ ಇಸ್ರೋವನ್ನು ನಿರ್ಮಾಣ ಮಾಡಿರುವುದರಿಂದಲೇ, ಚಂದ್ರಯಾನ ಯೋಜನೆ ಹಮ್ಮಿಕೊಳ್ಳಲು ಸಾಧ್ಯವಾಯಿತು. ಇಸ್ರೋ ಇಲ್ಲದೇ ಇದ್ದಿದ್ದರೆ ಯೋಜನೆಯೂ ಇಲ್ಲ, ವೈಫಲ್ಯವೂ ಇರುತ್ತಿರಲಿಲ್ಲ. ನಿಮಗೆ ಒಂದು ಸಾವಿರ ಖೋಟಾನೋಟುಗಳನ್ನು ಪಾಕಿಸ್ತಾನದಿಂದ ತರಿಸಿ ನೀಡಲಾಗುತ್ತದೆ. ಯಾಕೆಂದರೆ ನೋಟು ನಿಷೇಧದ ಬಳಿಕ ದೇಶದಲ್ಲಿ ಕಪ್ಪು ಹಣ ಮತ್ತು ಖೋಟಾ ನೋಟುಗಳು ಸಂಪೂರ್ಣ ಇಲ್ಲವಾಗಿವೆ. ಇದೀಗ ಮುಂದಿನ ಪ್ರಶ್ನೆಗೆ ಹೋಗೋಣ...’’

ಸಯಾಮಿ ಶಿಶುಗಳು ತಲೆಯಾಡಿಸಿದವು.

‘‘ದೇಶಕ್ಕೆ ಸಂಪೂರ್ಣ ಸ್ವಾತಂತ್ರ ದೊರಕಿಸಿ ಕೊಟ್ಟವರು ಯಾರು? ಎ. ಮಹಾತ್ಮಾಗಾಂಧೀಜಿ. ಬಿ. ನಾಥೂರಾಂ ಗೋಡ್ಸೆ. ಸಿ. ನರೇಂದ್ರ ಮೋದಿ. ಡಿ. ನೆಹರೂ’

ಸಯಾಮಿ ಶಿಶುಗಳು ಜೊತೆಯಾಗಿ, ಜೋರಾಗಿ ‘‘ನರೇಂದ್ರ ಮೋದಿ’’ ಎಂದು ದಿಲ್ಲಿಯವರೆಗೆ ಕೇಳುವಂತೆ ಚೀರಿದವು.

ಸುಳ್ಳಿನ ಬೆಳೆ ಹಸನ್ಮುಖರಾದರು ‘‘ಮತ್ತೆ ಸರಿ ಉತ್ತರ. ಈ ದೇಶಕ್ಕೆ ಸಂಪೂರ್ಣ ಸ್ವಾತಂತ್ರ ಇದೇ ವರ್ಷ ಆಗಸ್ಟ್ 5ಕ್ಕೆ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆಯುವ ಮೂಲಕ ಸಿಕ್ಕಿತು. ಆದುದರಿಂದ ದೇಶಕ್ಕೆ ಸಂಪೂರ್ಣ ಸ್ವಾತಂತ್ರ ಕೊಟ್ಟವರು ನರೇಂದ್ರ ಮೋದಿ...ಅಭಿನಂದನೆಗಳು. ಮುಂದಿನ ಚಂದ್ರಯಾನದ ಸಂದರ್ಭದಲ್ಲಿ ನಿಮಗಿಬ್ಬರಿಗೂ ಚಂದ್ರಲೋಕದಲ್ಲಿ ಸೈಟ್‌ಗಳನ್ನು ನೀಡಲಾಗುತ್ತದೆ. ಮುಂದಿನ ಪ್ರಶ್ನೆಗಳಿಗೆ ಹೋಗೋಣವೇ?’’

ಸಯಾಮಿ ಶಿಶುಗಳು ತಲೆಯಾಡಿಸಿದವು.

‘‘ಸರಿ ಹಾಗಾದರೆ....ಕಂಪ್ಯೂಟರ್‌ನಲ್ಲಿ ಪ್ರಯೋಗಿಸುವ ವೌಸ್‌ನ್ನು ವಿಶ್ವಕ್ಕೆ ಕೊಟ್ಟ ದೇಶ ಯಾವುದು? ಎ. ಅಮೆರಿಕ ಬಿ. ಭಾರತ ಸಿ. ಪಾಕಿಸ್ತಾನ ಡಿ. ಜಪಾನ್...’’

ಸಯಾಮಿ ಶಿಶುಗಳು ಒಂದಿಷ್ಟು ಯೋಚಿಸಿದಂತೆ ನೋಟಿಸಿ ‘‘ಭಾರತ’’ ಎಂದವು.

‘‘ಸರಿ ಉತ್ತರ. ಕಂಪ್ಯೂಟರ್‌ನ ವೌಸ್ ಮಾತ್ರವಲ್ಲ ಕಂಪ್ಯೂಟರ್‌ನ್ನು ಕೊಟ್ಟಿರುವುದು ಕೂಡ ಭಾರತವೇ ಆಗಿದೆ. ಕಂಪ್ಯೂಟರ್‌ನ್ನು ಗಣಕಯಂತ್ರ ಅಥವಾ ಗಣಪತಿ ಯಂತ್ರ ಎಂದು ಕರೆಯುತ್ತೇವೆ. ಅದರ ವಾಹನ ಇಲಿ ಅಥವಾ ವೌಸ್....ಮುಂದಿನ ದಿನಗಳಲ್ಲಿ ಈ ಇಲಿಗಳಿಗಾಗಿ ನಾನೊಂದು ಹೋರಾಟ ಆರಂಭಿಸಬೇಕೆಂದಿದ್ದೇನೆ. ವೌಸ್ ಮಾತ್ರವಲ್ಲ, ವಾಲ್ಟ್ ಡಿಸ್ನಿ ಅವರ ಮಿಕ್ಕಿ ವೌಸ್ ಉಗಮವೂ ಭಾರತದಲ್ಲೇ ಆಯಿತು. ಗಣಪತಿಯ ವೌಸ್‌ನ್ನು ಕದ್ದು ವಾಲ್ಟ್ ಡಿಸ್ನಿಯಿಂದ ಮಿಕ್ಕಿ ವೌಸ್ ಆಯಿತು...ಮಿಕ್ಕಿ ವೌಸ್‌ಗಾಗಿ ನಾವು ಹೋರಾಟ ಆರಂಭಿಸಬೇಕಾಗಿದೆ.....ಈ ಪ್ರಶ್ನೆಗೆ ಉತ್ತರಿಸಿದ್ದಕ್ಕಾಗಿ ನಿಮಗಿಬ್ಬರಿಗೂ ‘ರಾಜಾ ಇಲಿ’ ಎಂಬ ಬಿರುದನ್ನು ಮೋಸ ಬ್ರಿಗೇಡ್ ವತಿಯಿಂದ ನೀಡಲಾಗುವುದು....ಮುಂದಿನ ಪ್ರಶ್ನೆಗೆ ಹೋಗೋಣ...’’

ಸಯಾಮಿ ಶಿಶುಗಳು ತಲೆಯಾಡಿಸಿದವು

‘‘ಬ್ಯಾಂಕಿಂಗ್ ಪದ್ಧತಿಯ ಉಗಮ ಯಾವ ದೇಶದಲ್ಲಾ ಯಿತು? ಎ. ಅಮೆರಿಕ ಬಿ. ಚೀನಾ ಸಿ. ಜಪಾನ್ ಡಿ. ಭಾರತ’’

ಸಯಾಮಿ ಶಿಶುಗಳು ತಕ್ಷಣವೇ ‘‘ಭಾರತ’’ ಎಂದವು.

‘‘ಸರಿಯಾದ ಉತ್ತರ. ಪುರಾಣದಲ್ಲಿ ಕುಬೇರನು ವಿಷ್ಣು ಅಥವಾ ಶ್ರೀನಿವಾಸನ ಕಲ್ಯಾಣಕ್ಕಾಗಿ ಸಾಲ ಕೊಡುವ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ತೆರೆದನು. ಇಂದಿಗೂ ಆ ಸಾಲದ ಬಡ್ಡಿ ಮುಗಿದಿಲ್ಲ. ಆ ಸಾಲ ತೀರಿಸುವುದಕ್ಕಾಗಿಯೇ ಭಕ್ತರು ತಿರುಪತಿಗೆ ಕಾಣಿಕೆಗಳನ್ನು ನೀಡುತ್ತಿರುವುದು....ಸರಿ ಉತ್ತರ ಹೇಳಿದ್ದಕ್ಕಾಗಿ ನಿಮಗಿಬ್ಬರಿಗೂ ಎರಡೆರಡು ತಿರುಪತಿ ಲಡ್ಡುಗಳನ್ನು ನೀಡಲಾಗುತ್ತದೆ....ಈಗ ಕೊನೆಯ ಪ್ರಶ್ನೆ....ಭವಿಷ್ಯದಲ್ಲಿ ಕರ್ನಾಟಕದಿಂದ ಸಂಸದರಾಗಿ ಹೊರಹೊಮ್ಮುವ ಪ್ರಭಾವಿ ನಾಯಕ ಎ. ವಕ್ರತೀರ್ಥ ಸುಳ್ಳಿನ ಬೆಳೆ ಬಿ. ಪ್ರಲಾಪ ಸಿಂಹ ಸಿ. ಥೂಜಸ್ವಿ ಶೂರ್ಯ. ಡಿ. ಯಡಿಯೂರಪ್ಪ.....’’

ಪ್ರಶ್ನೆ ಪೂರ್ತಿಯಾಗುವ ಮೊದಲೇ ಸಯಾಮಿಗಳ ನಡುವೆ ತಿಕ್ಕಾಟ ಆರಂಭವಾಯಿತು. ಒಂದು ತಲೆ ಪ್ರಲಾಪ ಸಿಂಹ ಎಂದರೆ ಇನ್ನೊಂದು ತಲೆ ಥೂಜಸ್ವಿ ಶೂರ್ಯ ಎಂದು ಹೇಳಿತು.

‘‘ತಪ್ಪು ಉತ್ತರ....ಇದಕ್ಕೆ ಸರಿಯಾದ ಉತ್ತರ ವಕ್ರತೀರ್ಥ ಸುಳ್ಳಿನ ಬೆಳೆ’’ ಎನ್ನುತ್ತಿದ್ದಂತೆಯೇ ಕಂಪ್ಯೂಟರ್ ಮೇಲೆ ವೈರಸ್‌ಗಳು ಕಾಣಿಸಿಕೊಂಡವು.

ಸಯಾಮಿಗಳು ‘ಮೋಸ ಮೋಸ’’ ಎನ್ನುತ್ತಿದ್ದಂತೆಯೇ ಸುಳ್ಳಿನ ಬೆಳೆ ತನ್ನ ವಾನರ ಪಡೆಯ ಜೊತೆಗೆ ಗಂಗಾನದಿಯನ್ನು ಶುದ್ಧೀಕರಿಸುವುದಕ್ಕಾಗಿ ಹಣಸಂಗ್ರಹಿಸಲು ಬೆಂಗಳೂರಿನ ಬೀದಿಗಿಳಿದಾಗಿತ್ತು.

Writer - *ಚೇಳಯ್ಯ chelayya@gmail.com

contributor

Editor - *ಚೇಳಯ್ಯ chelayya@gmail.com

contributor

Similar News