ವಿವೇಚನಾ ರಹಿತ ಕ್ರಮ

Update: 2019-09-21 18:34 GMT

ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ ಅಕಾಡಮಿ/ರಂಗಾಯಣಗಳಂತಹ ಸಾಂಸ್ಕೃತಿಕ ಸಂಸ್ಥೆಗಳ ಅಧ್ಯಕ್ಷರು/ಸದಸ್ಯರ ನೇಮಕ ರಾಜಕೀಯ ನೇಮಕವಾಗಬಾರದು. ಆಯಾ ಕ್ಷೇತ್ರದ ತಜ್ಞರನ್ನೇ ನೇಮಕಮಾಡಬೇಕು. ನೇಮಕದ ಮಾನದಂಡ ಪರಿಣತಿ, ಸಾಧನೆ ಮತ್ತು ಅನುಭವಗಳೇ ಆಗಬೇಕು ವಿನಃ ಅಭ್ಯರ್ಥಿಗಳ ರಾಜಕೀಯ ಸದಸ್ಯತ್ವ ಅಥವಾ ನಂಟಲ್ಲ.


ಭಾ  ರತದ ಪ್ರಾಚೀನವಾದ ಸಾಹಿತ್ಯ ಕಲೆಗಳಿಗೆ ನವಚೇತನ ತಂದುಕೊಟ್ಟು, ಅವುಗಳ ಬೆಳವಣಿಗೆಗೆ ಅಗತ್ಯವಾದ ಪರಿಸರವನ್ನು ನಿರ್ಮಿಸುವ ಘನ ಉದ್ದೇಶದಿಂದ ಸ್ವಾತಂತ್ರ್ಯಾನಂತರ ಕೇಂದ್ರ ಸಾಹಿತ್ಯ ಅಕಾಡಮಿ ಮತ್ತು ಸಂಗೀತ ನಾಟಕ ಅಕಾಡಮಿಗಳನ್ನು ಸ್ಥಾಪಿಸಲಾಯಿತು. ರಾಜ್ಯ ಸರಕಾರಗಳೂ ಇದೇ ಆದರ್ಶವನ್ನಿಟ್ಟುಕೊಂಡು ರಾಜ್ಯ ಮಟ್ಟದಲ್ಲಿ ಅಕಾಡಮಿಗಳನ್ನು ಸ್ಥಾಪಿಸಿದವು. ಕರ್ನಾಟಕವೂ ಹಿಂದೆ ಬೀಳಲಿಲ್ಲ. ಕರ್ನಾಟಕದಲ್ಲಿ ಈಗ ಸಾಹಿತ್ಯ, ನಾಟಕ, ಸಂಗೀತ, ಲಲಿತ ಕಲೆ ಸೇರಿದಂತೆ ಹಲವಾರು ಅಕಾಡಮಿಗಳಿವೆ. ಬೇರೆ ರಾಜ್ಯಗಳಲ್ಲಿ ಇಷ್ಟೊಂದು ಅಕಾಡಮಿಗಳು ಇರಲಿಕ್ಕಿಲ್ಲ. ಇವೆಲ್ಲ ಸ್ವಾಯತ್ತ ಸಂಸ್ಥೆಗಳು.ಆದಾಗ್ಯೂ ಹಣಕಾಸು ಮತ್ತು ಆಡಳಿತಾತ್ಮಕವಾಗಿ ಈ ಅಕಾಡಮಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಒಳಪಟ್ಟಿವೆ. ಪತ್ರಿಕಾ ಅಕಾಡಮಿ ವಾರ್ತಾ ಮತ್ತು ಪ್ರಚಾರ ಇಲಾಖೆಗೊಳಪಟ್ಟಿದೆ. ಇವುಗಳ ರಚನೆಯ ಸ್ವರೂಪವೂ ಒಂದೇ ಬಗೆಯದಾಗಿದೆ. ಪ್ರತಿಯೊಂದು ಅಕಾಡಮಿಯಲ್ಲೂ ಸುಮಾರು ಇಪ್ಪತ್ತೈದು ಸದಸ್ಯರಿರುತ್ತಾರೆ. ಇವರಲ್ಲಿ ಐವರನ್ನು ಅಕಾಡಮಿ ಅಧ್ಯಕ್ಷರು ತಮ್ಮ ವಿವೇಕ-ವಿವೇಚನಾಧಿಕಾರಗಳನ್ನು ಬಳಸಿ ಸಹ ಆಯ್ಕೆಯ ಸದಸ್ಯರನ್ನಾಗಿ ಸೇರಿಸಿಕೊಳ್ಳುತ್ತಾರೆ. ಅಧ್ಯಕ್ಷರನ್ನೊಳಗೊಂಡಂತೆ ಮಿಕ್ಕ ಎಲ್ಲ ಸದಸ್ಯರನ್ನೂ ಸರಕಾರವೇ ನಾಮಕರಣ ಮಾಡುತ್ತದೆ. ಇವರ ಅಧಿಕಾರಾವಧಿ ಮೂರು ವರ್ಷ.

 ಈ ಅಕಾಡಮಿಗಳು ಸದ್ದುಗದ್ದಲವಿಲ್ಲದೆ ತಮ್ಮ ಕ್ಷೇತ್ರಗಳಲ್ಲಿ ಕೆಲಸಮಾಡಿಕೊಂಡು ಹೋಗುತ್ತವೆ. ಆದರೆ ವರ್ಷಕ್ಕೊಮ್ಮೆ ಮತ್ತು ಮೂರು ವರ್ಷಗಳಿಗೊಮ್ಮೆ ಅವು ಕಲರವ ಮಾಡುತ್ತಿರುತ್ತವೆ. ಪ್ರತಿ ವರ್ಷ ವಾರ್ಷಿಕ ಪ್ರಶಸ್ತಿಗಳ ಋತು ಆರಂಭವಾದಾಗ ಸುದ್ದಿಯಲ್ಲಿರುತ್ತವೆ. ಮೂರು ವರ್ಷಗಳಿಗೊಮ್ಮೆ ಹೊಸ ಅಧ್ಯಕ್ಷರು ಮತ್ತು ಸದಸ್ಯರ ನೇಮಕದ ಸಂದರ್ಭದಲ್ಲಿ ಸ್ವಲ್ಪಸದ್ದು ಮಾಡುತ್ತವೆ. ಆಗ ಸಾಹಿತಿ ಕಲಾವಿದರು ಚುರುಕಾಗುತ್ತಾರೆ. ಅಧ್ಯಕ್ಷ ಸ್ಥಾನ ಮತ್ತು ಸದಸ್ಯ ಸ್ಥಾನಕ್ಕಾಗಿ ಬಗೆಬಗೆಯ ಪ್ರಭಾವಗಳು, ನಾನಾ ಹಿತಾಸಕ್ತಿಗಳು ಕೆಲಸಮಾಡಲಾರಂಭಿಸುತ್ತವೆ. ಈಚಿನ ವರ್ಷಗಳಲ್ಲಂತೂ ಶಾಸಕರ ಭವನ, ವಿಧಾನ ಸೌಧದ ಮೆಟ್ಟಿಲೇರದವರಿಗೆ, ಜಾತಿ-ಮತ, ಮಠಗಳ ಪ್ರಭಾವ ಇಲ್ಲದವರಿಗೆ, ಅವರೆಷ್ಟೇ ಅರ್ಹರಾಗಿದ್ದರೂ ಅವಕಾಶಗಳು ದೊರೆಯುವುದಿಲ್ಲ. ಇರಲಿ. ಹೇಗೋ ಭಾಷೆ, ಸಂಸ್ಕೃತಿಯ ಕೆಲಸ ಒಂದಿಷ್ಟಾಗುತ್ತಿದೆಯಲ್ಲ ಎಂದು ಸಮಾಧಾನ ಪಡಬಹುದು. ಆದರೆ ಈಗೀಗ ಇಂತಹ ಸಮಾಧಾನಕ್ಕೂ ಸಂಚಕಾರ ಬರುವಂತಹ ವಿದ್ಯಮಾನಗಳು ನಡೆಯುತ್ತಿವೆ. ಮಂತ್ರಿಗಳ ಕುರ್ಚಿಗಳಂತೆ ಅಕಾಡಮಿಗಳ ಅಧ್ಯಕ್ಷರ ಕುರ್ಚಿಗಳೂ ಅಭದ್ರವಾಗುತ್ತಿವೆ. ಒಂದು ಪಕ್ಷದ ಸರಕಾರ ಹೋಗಿ ಮತ್ತೊಂದು ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಅಧ್ಯಕ್ಷ ಮತ್ತು ಸದಸ್ಯರನ್ನು ಅವರ ಅಧಿಕಾರಾವಧಿ ಮುುಗಿಯುವುದಕ್ಕೂ ಮೊದಲೇ ವಜಾ ಮಾಡುವ ದುರದೃಷ್ಟಕರ ಬೆಳವಣಿಗೆ. ಕಾಂಗ್ರೆಸ್-ಜನತಾದಳ ಸರಕಾರ ಬಹುಮತ ಕಳೆದುಕೊಂಡ ನಂತರ ಬಂದ ಯಡಿಯೂರಪ್ಪನಾಯಕತ್ವದ ಬಿಜೆಪಿ ಸರಕಾರ ಎಲ್ಲ ಅಕಾಡಮಿಗಳ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ಯಾವ ಶಿಷ್ಟಾಚಾರಗಳನ್ನೂ ಪಾಲಿಸದೆ ವಜಾಮಾಡಿದೆ.

ಅಕಾಡಮಿಗಳ ಕೆಲಸಕಾರ್ಯಗಳ ಜವಾವ್ದಾರಿಯನ್ನು ವಾರ್ತಾ ಇಲಾಖೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರಿಗೊಪ್ಪಿಸಿದೆ. ಇದರ ಬೆನ್ನಿಗೇ ಅಧ್ಯಕ್ಷ /ಸದಸ್ಯ ಸ್ಥಾನಗಳ ಆಕಾಂಕ್ಷಿಗಳು ತಮ್ಮ ಪೂರ್ವಾಪರದ ಬಖೈರುಗಳನ್ನು ಬಗಲಲ್ಲಿಟ್ಟುಕೊಂಡು ಶಾಸಕರು/ಸಚಿವರ ಹಿಂದೆ ಬಿದ್ದಿದ್ದಾರೆಂಬ ವರದಿಗಳೂ ಪ್ರಕಟವಾಗಿವೆ. ಸಾಹಿತ್ಯ, ಕಲೆ, ಸಂಸ್ಕೃತಿ, ಭಾಷೆಗಳಿಗೆ ಸಂಬಂಧಿಸಿದ ಅಕಾಡಮಿಗಳು ಬಿ.ಡಿ.ಎ., ಕರಕುಶಲ ಮಂಡಳಿ, ಮದ್ಯಪಾನ ನಿರೋಧ ಮಂಡಳಿ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಮಂಡಳಿ, ಕೊಳಚೆ ಪ್ರದೇಶ ನಿರ್ಮೂಲನಾ ಮಂಡಳಿ ಇತ್ಯಾದಿಗಳಂತಲ್ಲ. ಈ ಬಗೆಯ ಮಂಡಳಿಗಳ ಅಧ್ಯಕ್ಷರಂತೆ ಅಕಾಡಮಿಗಳ ಅಧ್ಯಕ್ಷ/ಸದಸ್ಯತ್ವ ಸ್ಥಾನ ರಾಜಕೀಯ ನೇಮಕದ ಹುದ್ದೆಗಳಲ್ಲ. ಮಂಡಳಿಗಳ ಅಧ್ಯಕ್ಷ ಸ್ಥಾನದಂತೆ ಅಕಾಡಮಿಗಳ ಅಧ್ಯಕ್ಷ ಸ್ಥಾನಗಳನ್ನು ಅಲಂಕರಿಸಲು ರಾಜಕೀಯ ಪ್ರಭಾವ/ಅನುಭವಗಳ ಅಗತ್ಯವೂ ಇಲ್ಲ. ಮಂಡಳಿಗಳಂತೆ ಅಧಿಕಾರಾರೂಢ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳ ಅನುಷ್ಠಾನವೂ ಅಕಾಡಮಿಗಳ ಕೆಲಸವಲ್ಲ. ಅಕಾಡಮಿ ಅಧ್ಯಕ್ಷರನ್ನು ಆಯಾ ಕ್ಷೇತ್ರಗಳಲ್ಲಿ ಅವರು ಮಾಡಿರುವ ಸಾಧನೆಗಳು, ವಿಷಯ ಪರಿಣತಿ, ಅನುಭವ-ಅಭಿರುಚಿ ಇತ್ಯಾದಿ ಅರ್ಹತೆಗಳ ಆಧಾರದ ಮೇಲೆ ನೇಮಕಮಾಡಲಾಗುತ್ತದೆ ಎನ್ನುವುದು ಸಾಮಾನ್ಯ ನಂಬಿಕೆ.

ಎಂದೇ ಅಕಾಡಮಿ ಅಧ್ಯಕ್ಷರ ನೇಮಕ ರಾಜಕೀಯ ನೇಮಕವಲ್ಲ. ಹೀಗಿರುವಾಗ ಒಂದು ಪಕ್ಷದ ಸರಕಾರ ಹೋಗಿ ಮತ್ತೊಂದು ಪಕ್ಷ ಅಧಿಕಾರಕ್ಕೆ ಬಂದಾಕ್ಷಣ ಅಕಾಡಮಿ ಅಧ್ಯಕ್ಷರನ್ನು ಅವರ ಅಧಿಕಾರಾವಧಿ ಮುಗಿಯುವುದಕ್ಕೂ ಮೊದಲೇ ಬರ್ಖಾಸ್ತು ಮಾಡುವ ಕ್ರಮ ವಿವೇಚನಾರಹಿತ ನಡೆಯೇ ಸರಿ. ಯಡಿಯೂರಪ್ಪನವರ ಸರಕಾರ ಅಕಾಡಮಿಗಳ ಅಧ್ಯಕ್ಷರನ್ನು ವಜಾಮಾಡಿದ್ದಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸ್ವಾಯತ್ತ ಸಂಸ್ಥೆಗಳಾದ ರಂಗಾಯಣಗಳ ನಿರ್ದೇಶಕರನ್ನು ಅವರ ಅವಧಿ ಪೂರೈಕೆಗೆ ಮೊದಲೇ ವಜಾಮಾಡಿದೆ. ರಂಗಾಯಣಗಳ ಆಡಳಿತ ನಿರ್ವಹಣೆಗಾಗಿ ಸರಕಾರ ರಂಗ ಸಮಾಜವೆಂಬ ವ್ಯವಸ್ಥೆಯೊಂದನ್ನು ರೂಪಿಸಿದೆ. ಈ ವ್ಯವಸ್ಥೆ ರಂಗಾಯಣದ ನಟನಟಿಯರು ಮೊದಲಾದ ಸಿಬ್ಬಂದಿಯನ್ನು ನೇಮಿಸುತ್ತದೆ. ಈಗಿನ ಸರಕಾರ ರಂಗಾಯಣದ ನಿರ್ದೇಶಕರ ಜೊತೆ ರಂಗ ಸಮಾಜದ ಸದಸ್ಯರನ್ನೂ ವಜಾಮಾಡಿದೆ. ರಂಗಾಯಣದ ನಿರ್ದೇಶಕರು ಸರಕಾರಿ ನೌಕರರಲ್ಲ, ಸರಕಾರಕ್ಕೆ ಅವರನ್ನು ವಜಾಮಾಡುವ ಅಧಿಕಾರವಿಲ್ಲ ಎನ್ನುತ್ತಾರೆ ಬಾಧಿತ ನಿರ್ದೇಶಕರು. ಆದರೆ ಇವರ ನೇಮಕದ ಆಜ್ಞೆಯಲ್ಲೇ ಮೂರು ವರ್ಷಗಳ ಅವಧಿಗೆ ಅಥವಾ ಸರಕಾರ ‘ಮತ್ತೊಂದು ಆಜ್ಞೆಮಾಡುವವರೆಗೆ’ ನೇಮಕಮಾಡಲಾಗಿದೆ ಎಂದು ತಿಳಿಸಲಾಗುತ್ತದೆ.ಅಂದರೆ ಇವರ ಅಧಿಕಾರದ ಅವಧಿ ಸರಕಾರದ ಕೃಪಾಕಟಾಕ್ಷ ಇರುವವರೆಗೆ ಮಾತ್ರ ಎಂದಾಯಿತು.
 
ಯಡಿಯೂರಪ್ಪನವರ ಸರಕಾರ ಬಂದ ಕೂಡಲೇ ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷರು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣ ನೀಡಿ ರಾಜೀನಾಮೆ ಕೊಟ್ಟು ನಿರ್ಗಮಿಸಿದ್ದಾರೆ. ಉಳಿದ ಅಕಾಡಮಿಗಳ ಅಧ್ಯಕ್ಷರನ್ನು ಸರಕಾರವೇ ವಜಾಮಾಡಿದೆ. ನಾಟಕ ಅಕಾಡಮಿ ಅಧ್ಯಕ್ಷ ಜೆ.ಲೋಕೇಶ್ ಸರಕಾರದ ಆಜ್ಞೆಯ ಕ್ರಮಬದ್ಧತೆ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಲು ಏರಿದ್ದಾರೆ ಎಂದು ವರದಿಯಾಗಿದೆ. ಅಕಾಡಮಿಗಳ ರಚನೆಯಾಗಿರುವುದು ಸಾಹಿತ್ಯ-ಕಲೆ-ಭಾಷೆ-ಸಂಸ್ಕೃತಿಗಳ ಸಂವರ್ಧನೆಯ ಕೆಲಸ ಮಾಡಲು, ಆಯಾ ಕ್ಷೇತ್ರಗಳಲ್ಲಿ ನವಚೈತನ್ಯ ತುಂಬಿ ಅಗತ್ಯವಾದ ಪ್ರೋತ್ಸಾಹ ನೀಡಲು. ರಾಜಕೀಯ ಪಕ್ಷಗಳ ಪ್ರಣಾಳಿಕೆಗಳನ್ನು ಅನುಷ್ಠಾನಕ್ಕೆ ತರಲು ಅವುಗಳ ಸ್ಥಾಪನೆಯಾಗಿಲ್ಲ. ಹೀಗಿರುವಾಗ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಮೇಲೆ ರಾಜೀನಾಮೆ ನೀಡಿದ್ದೂ ಸರಿಯಾದ ಕ್ರಮವಲ್ಲ. ಅಧ್ಯಕ್ಷರು ಯಾವುದೇ ರಾಜಕೀಯ ಪಕ್ಷಗಳ ಸದಸ್ಯರಾಗಿರಬಾರದು ಹಾಗೂ ಅವರು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಕೆಲಸಮಾಡಿಕೊಂಡು ಹೋಗುವಷ್ಟು ಪ್ರಬುದ್ಧರೂ ಚತುರರೂ ಆಗಿರಬೇಕೆಂಬುದು ಅವರ ನೇಮಕದ ಅರ್ಹತೆಗಳಲ್ಲೊಂದು.
ಅಕಾಡಮಿಗಳು ಇಂತಹ ಮುಜುಗರದ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ಇದೇ ಮೊದಲೇನಲ್ಲ. ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತರಾದಾಗ ಇಂಥದ್ದೇ ಪರಿಸ್ಥಿತಿ ಉದ್ಭವಿಸಿತ್ತು. ಆಗಿನ ಅಕಾಡಮಿ ಅಧ್ಯಕ್ಷರು ಇಂಥದ್ದೇ ಸಂದಿಗ್ಧ ಎದುರಿಸಿದ್ದರು. ಅರಸರು ಪದಚ್ಯುತರಾದಾಗ ಡಾ.ಹಾ.ಮಾ.ನಾಯಕರು ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷರಾಗಿದ್ದರು. ಆಗ ನಾಯಕರು ಅರಸರ ಸರಕಾರದಿಂದ ನೇಮಕಗೊಂಡ ತಾವು ರಾಜೀನಾಮೆ ಕೊಡುವುದು ವಿಹಿತವೆಂದು ಭಾವಿಸಿ ಸಂಸ್ಕೃತಿ ಇಲಾಖೆಯ ನಿರ್ದೆೇಶಕರಿಗೆ ಪತ್ರ ಬರೆಯುತ್ತಾರೆ. ಅದಕ್ಕೆ ಸಂಸ್ಕೃತಿ ಇಲಾಖೆ ನಿರ್ದೇಶಕರು ಅಂದಿನ ಮುಖ್ಯ ಕಾರ್ಯದರ್ಶಿಯವರನ್ನು ಸಂಪರ್ಕಿಸಿ ಈ ರೀತಿ ಉತ್ತರ ಬರೆಯುತ್ತಾರೆ: ‘‘ಇತರ ಮಂಡಳಿಗಳ ಹಾಗೆ ಅಕಾಡಮಿಗಳು ರಾಜಕೀಯ ಸಂಸ್ಥೆಗಳಲ್ಲ. ಯಾವ ಅಧ್ಯಕ್ಷರೂ ಹಾಗೆ ಭಾವಿಸಬಾರದು. ರಾಜಕೀಯ ಇಲ್ಲದ ಕಡೆ ರಾಜಕೀಯ ತರಬಾರದು. ಆದ್ದರಿಂದ ನಾಯಕರು ರಾಜೀನಾಮೆ ಕೊಡುವುದು ಸರಿಯಾದ ಕ್ರಮವಲ್ಲ’’ ಎಂದು ಮುಖ್ಯ ಕಾರ್ಯದರ್ಶಿಯವರು ಅಭಿಪ್ರಾಯ ಪಡುತ್ತಾರೆ. ನಾಯಕರು ಅಧ್ಯಕ್ಷಸ್ಥಾನದಲ್ಲಿ ಅಬಾಧಿತರಾಗಿ ಮುಂದುವರಿಯುತ್ತಾರೆ.
  
1989ರಲ್ಲಿ ಟೆಲಿಫೋನ್ ಕದ್ದಾಲಿಕೆ ಹಗರಣದಿಂದಾಗಿ ರಾಮಕೃಷ್ಣ ಹೆಗಡೆಯವರು ರಾಜೀನಾಮೆ ನೀಡಿದಾಗ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂತು. ಆಗ ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷರಾಗಿದ್ದ ಬಿ.ವಿ.ವೈಕುಂಠರಾಜು ಅವರು ಸ್ವಯಂಪ್ರೇರಿತರಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆಗಿನ ರಾಜ್ಯಪಾಲರು ವೈಕುಂಠರಾಜು ಅವರ ರಾಜೀನಾಮೆಯನ್ನು ಅಂಗೀಕರಿಸಲೂ ಇಲ್ಲ, ಅವರ ರಾಜೀನಾಮೆ ಪತ್ರಕ್ಕೆ ಉತ್ತರವನ್ನೂ ಕೊಡಲಿಲ್ಲ. ಆಗಲೂ ಹಾ.ಮಾ.ನಾಯಕ ಮೊದಲಾದವರು ವೈಕುಂಠರಾಜು ಅವರು ರಾಜೀನಾಮೆ ನೀಡಬೇಕಾಗಿಲ್ಲ,ಅವರದು ರಾಜಕೀಯ ನೇಮಕವಲ್ಲ. ರಂಗತಜ್ಞರೆಂದು ಅವರನ್ನು ನೇಮಕಮಾಡಲಾಗಿದೆ ಎಂಬ ನಿಲುವು ತಾಳಿ, ವೈಕುಂಠರಾಜು ಅವರ ರಾಜೀನಾಮೆಯಿಂದ ಅಧ್ಯಕ್ಷಸ್ಥಾನವನ್ನು ರಾಜಕೀಯ ಸ್ಥಾನವನ್ನಾಗಿ ಮಾಡಲಾಯಿತು ಎಂದು ವಿರೋಧ ವ್ಯಕ್ತಪಡಿಸಿದರು.ರಾಜೀನಾಮೆಯಿಂದ ವೈಕುಂಠರಾಜು ಅವರು ಜನತಾ ದಳದ ಸದಸ್ಯರಾಗಿ ಗುರುತಿಸಿಕೊಂಡಂತಾಯಿತು ಎನ್ನುವ ಇಂಗಿತವೂ ಆಗ ವ್ಯಕ್ತವಾಗಿತ್ತು. ವೈಕುಂಠರಾಜು ಅವರು ಆಗ ರಾಮಕೃಷ್ಣಹೆಗಡೆಯವರು ಮತ್ತು ಅಕಾಡಮಿಗಳ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಎಂ.ಪಿ.ಪ್ರಕಾಶ್‌ಅವರೊಂದಿಗೆ ಒಳ್ಳೆಯ ಸ್ನೇಹ ಬಾಂಧವ್ಯ ಹೊಂದಿದ್ದರು. ಇವರಿಬ್ಬರ ಸಹಕಾರದಿಂದ ರಂಗಭೂಮಿಗೆ ಸಂಬಂಧಿಸಿದಂತೆ ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬಹುದು ಎಂದು ಅವರು ಭಾವಿಸಿದ್ದರು. ಕಲೆ-ಸಂಸ್ಕೃತಿಗಳ ಪುನರುಜ್ಜೀವನ ಕೆಲಸಗಳಿಗಾಗಿ ಅಕಾಡಮಿಗೆ ಅಗತ್ಯವಾದ ಹೆಚ್ಚಿನ ನೆರವು ತರುವುದರಲ್ಲಿ ಇಂಥ ಸ್ನೇಹ ಬಾಂಧವ್ಯಗಳು ಮತ್ತು ಸಮಾನಮನೋಭಾವದ ಚಿಂತನೆಗಳು ಕೆಲಸಮಾಡುತ್ತವೆ ಎನ್ನುವುದನ್ನು ಅಲ್ಲಗಳೆಯಲಾಗದು. ಆದ್ದರಿಂದ ತನ್ನ ಕೆಲಸಕಾರ್ಯಗಳಿಗೆ ಬೆಂಬಲವಾಗಿ ನಿಂತಿದ್ದ ಸರಕಾರ ಹೋದಾಗ ವೈಕುಂಠರಾಜು ಅವರಿಗೆ ರಾಜೀನಾಮೆ ನೀಡುವುದು ಅನಿವಾರ್ಯ ಎನ್ನಿಸಿರಬಹುದು.

ಅಧ್ಯಕ್ಷರಾದವರಿಗೆ ಇಂತಹ ರಾಜಕೀಯ ಬೆಂಬಲವಿಲ್ಲದಿದ್ದರೆ, ವಾರ್ಷಿಕ ಪ್ರಶಸ್ತಿ ಕೊಡುವುದಕ್ಕಿಂತ ಹೆಚ್ಚಿನದೇನನ್ನೂ ಮಾಡಲಾಗದು ಎಂಬ ಅಭಿಪ್ರಾಯವೂ ಉಂಟು. ಈ ಥರದ ಪರಿಸ್ಥಿತಿ ಇರಬಾರದು. ಇದು ಶೋಚನೀಯವಾದುದು. ಇಂತಹ ದೈನೇಸಿ ಸ್ಥಿತಿ ಯಾವ ಅಕಾಡಮಿಗೂ ಬರಬಾರದು. ತಮ್ಮ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ನೈತಿಕ ಬೆಂಬಲವಾಗಿ ನಿಲ್ಲುವ ಸರಕಾರ ಇಲ್ಲದಿದ್ದಾಗ ಅಥವಾ ತಮ್ಮ ಆಲೋಚನೆಗಳನ್ನು -ಯೋಜನೆಗಳನ್ನು ಪುರಸ್ಕರಿಸದಂತಹ ಭಿನ್ನ ಸಿದ್ಧಾಂತದ ಸರಕಾರ ಬಂದಾಗ ಏನೂ ಕೆಲಸಮಾಡಲಾಗದೆ ಕುರ್ಚಿಗೆ ಅಲಂಕಾರಪ್ರಾಯವಾಗಿ ಕುಳಿತಿರುವುದಕ್ಕಿಂತ ರಾಜೀನಾಮೆ ಕೊಡುವುದು ಲೇಸು ಎನ್ನುವ ನಿಲುವೂ ಸರಿ ಇದ್ದೀತು. ಇಲ್ಲಿ ಮುಖ್ಯ ಪ್ರಶ್ನೆಯೆಂದರೆ ಸರಕಾರಗಳು ಏಕೆ ನಮ್ಮ ಅಕಾಡಮಿಗಳನ್ನು ಇಂತಹ ಅಸಹಾಯಕತೆಗೆ ದೂಡುತ್ತವೆ ಎನ್ನುವುದು. ಅಕಾಡಮಿಗಳಿಗೆ, ರಂಗಾಯಣಗಳಿಗೆ ಅಧ್ಯಕ್ಷ/ನಿರ್ದೇಶಕರಾಗಿ ನೇಮಕಗೊಳ್ಳುವವವರು ಸಾಹಿತ್ಯ/ಕಲೆ/ರಂಗಭೂಮಿ/ಪತ್ರಿಕೋದ್ಯಮ ಮೊದಲಾದ ಕ್ಷೇತ್ರಗಳಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ತಮ್ಮದೇ ಆದ ಯೋಜನೆಗಳನ್ನು/ಕನಸುಗಳನ್ನು ಹೊಂದಿರುತ್ತಾರೆ. ಈ ಯೋಜನೆಗಳ ಅನುಷ್ಠಾನಕ್ಕೆ ಸರಕಾರದಿಂದ ಹೆಚ್ಚಿನ ಹಣ ತಂದು ಕೆಲಸ ಪ್ರಾರಂಭಿಸಬೇಕೆನ್ನುವ ವೇಳೆಗೆ ಅವರ ಅಧಿಕಾರವೇ ಹೋದರೆ ಹೇಗೆ? ಎಷ್ಟೋ ಯೋಜನೆಗಳನ್ನು ಕಾರ್ಯಗತಗೊಳಿಸಲು ಮೂರು ವರ್ಷಗಳ ಅಧಿಕಾರಾವಧಿ ಸಾಲದು. ಹಾಗಿರುವಾಗ ಹೊಸ ಸರಕಾರ ಈ ಅಧಿಕಾರವನ್ನೂ ಮೊಟಕುಗೊಳಿಸಿದರೆ... ಹೀಗಾಗಿಯೇ ಹಲವು ಯೋಜನೆಗಳು ಕಾಗದದ ಮೇಲೆಯೇ ಉಳಿದಿವೆ. ನಮ್ಮ ಸಾಹಿತ್ಯ, ಕಲೆ, ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ದಾಖಲೀಕರಣ (ಡಾಕ್ಯುಮೆಂಟೇಷನ್)ಕೆಲಸವೇ ಶಾಸ್ತ್ರೀಯವಾಗಿ ಆಗಿಲ್ಲ.

ಚಂದ್ರಶೇಖರ ಕಂಬಾರರು ಅಧ್ಯಕ್ಷರಾಗಿದ್ದ ಕಾಲದಿಂದಲೂ ನಾಟಕ ಅಕಾಡಮಿಯಲ್ಲಿ ಈ ಕಾರ್ಯ ನಡೆದೇ ಇದೆ.ಈಗ ಡಿಜಿಟಲೈಸೇಷನ್ ಕೆಲಸ ಅರ್ಧವಾಗಿರುವಾಗ ಅದರ ಅಧ್ಯಕ್ಷರನ್ನು ಮನೆಗೆ ಕಳುಹಿಸಲಾಗಿದೆ. ಸಾಹಿತ್ಯ ಅಕಾಡಮಿಯಲ್ಲೂ ಸಾಹಿತಿಗಳ ಮಾಹಿತಿ ಕೋಶ ಅರ್ಧಕ್ಕೇ ನಿಂತಿದೆ. ಹೊಸ ಬಗೆಯ ಸಾಹಿತ್ಯ ಸಮಾವೇಶ ರದ್ದಾಗಿದೆ. ಹೊಸದಾಗಿ ನೇಮಕಗೊಳ್ಳುವ ಅಧ್ಯಕ್ಷರ ಕನಸುಗಳು/ಆದ್ಯತೆಗಳು ಬೇರೆಯದೇ ಆಗಿರುತ್ತದೆಯಾದ್ದರಿಂದ ಹಿಂದಿನ ಅಧ್ಯಕ್ಷರ ಅವಧಿಯ ಯೋಜನೆಗಳು ಅರ್ಧಕ್ಕೇ ನಿಂತುಬಿಡುವುದು ಸಾಮಾನ್ಯ. ಯಡಿಯೂರಪ್ಪನವರ ಸರಕಾರದ ಈ ಕ್ರಮವನ್ನು ಪ್ರಸನ್ನ ‘ಅಪಾಯಕಾರಿಯಾದ ಮೇಲ್ಪಂಕ್ತಿ’ ಎಂದು ಕರೆದಿದ್ದಾರೆ. ಈ ರೀತಿ ಅಕಾಡಮಿಗಳ ಅಧ್ಯಕ್ಷರನ್ನು ಅಧಿಕಾರಾವಧಿ ಮುಗಿವ ಮೊದಲೇ ವಜಾಮಾಡುತ್ತಿರುವುದು ಇದೇ ಮೊದಲಲ್ಲ. ಕಾಂಗ್ರೆಸ್ ಸರಕಾರವೂ ಇಂತಹ ಕೆಲಸ ಮಾಡಿದೆ. ಯಾವುದೇ ಸರಕಾರ ಮಾಡಲಿ ಇದೊಂದು ಅನುಚಿತ ಕ್ರಮ. ಇದರ ಹಿಂದಿನ ಉದ್ದೇಶವೂ ರಹಸ್ಯವಾಗೇನೂ ಉಳಿದಿಲ್ಲ. ತಮ್ಮವರನ್ನು ನೇಮಿಸುವುದಷ್ಟೇ ಇದರ ಹಿಂದಿನ ಉದ್ದೇಶ. ಈಗಿನ ಬಿಜೆಪಿ ಸರಕಾರವೂ ಅಕಾಡಮಿಗಳಿಗೆ ಮತ್ತು ರಂಗಾಯಣಗಳಿಗೆ ಸಂಘನಿಷ್ಠರನ್ನು ನೇಮಿಸಬಹುದು. ಇದು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ರಂಗವನ್ನು ಅತಿಕ್ರಮಿಸುವ ಸಂಘಪರಿವಾರದ ರಾಷ್ಟ್ರವ್ಯಾಪಿ ಕಾರ್ಯಕ್ರಮಕ್ಕನುಗುಣವಾಗಿಯೇ ಇರಬಹುದು. ಇದು ಸರಿಯಲ್ಲ. ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ ಅಕಾಡಮಿ/ರಂಗಾಯಣಗಳಂತಹ ಸಾಂಸ್ಕೃತಿಕ ಸಂಸ್ಥೆಗಳ ಅಧ್ಯಕ್ಷರು/ಸದಸ್ಯರ ನೇಮಕ ರಾಜಕೀಯ ನೇಮಕವಾಗಬಾರದು. ಆಯಾ ಕ್ಷೇತ್ರದ ತಜ್ಞರನ್ನೇ ನೇಮಕಮಾಡಬೇಕು. ನೇಮಕದ ಮಾನದಂಡ ಪರಿಣತಿ, ಸಾಧನೆ ಮತ್ತು ಅನುಭವಗಳೇ ಆಗಬೇಕು ವಿನಃ ಅಭ್ಯರ್ಥಿಗಳ ರಾಜಕೀಯ ಸದಸ್ಯತ್ವ ಅಥವಾ ನಂಟಲ್ಲ.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News