ಬಿರುಗಾಳಿಗೆ ಸಿಲುಕಿದ ಏರ್‌ ಇಂಡಿಯಾ ವಿಮಾನ; ಸಿಬ್ಬಂದಿಗೆ ಗಾಯ

Update: 2019-09-22 03:55 GMT
ಚಿತ್ರ ಕೃಪೆ: ANI

ಹೊಸದಿಲ್ಲಿ, ಸೆ.22: ಏರ್ ಇಂಡಿಯಾದ ಎರಡು ವಿಮಾನಗಳು ಒಂದೇ ವಾರದಲ್ಲಿ ಪ್ರಕ್ಷುಬ್ಧ ಹವಾಮಾನದಲ್ಲಿ ಸಿಲುಕಿಕೊಂಡು ಪ್ರಯಾಣಿಕರು ಆತಂಕದ ಕ್ಷಣಗಳನ್ನು ಎದುರಿಸಬೇಕಾಯಿತು. ಈ ಪ್ರಕ್ಷುಬ್ಧತೆಯಿಂದಾಗಿ ವಿಮಾನ ಭಾಗಶಃ ಹಾನಿಗೀಡಾಗಿದ್ದು ಕೆಲ ಸಿಬ್ಬಂದಿ ಗಾಯಗೊಂಡಿದ್ದಾರೆ. ದೆಹಲಿಯಿಂದ ಕೊಚ್ಚಿನ್ ಮಾರ್ಗವಾಗಿ ತಿರುವನಂತಪುರಕ್ಕೆ ಬರುತ್ತಿದ್ದ ವಿಮಾನ ಶುಕ್ರವಾರ ಬಿರುಗಾಳಿಯ ಹೊಡೆತಕ್ಕೆ ಸಿಲುಕಿದೆ ಎಂದು ತಿಳಿದುಬಂದಿದೆ.

ಆದರೆ ವಿಮಾನವನ್ನು ಸುರಕ್ಷಿತವಾಗಿ ಕೆಳಕ್ಕೆ ಇಳಿಸಲಾಗಿದ್ದು, ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ವಿಮಾನ ಮಾತ್ರ ಹಾನಿಗೀಡಾಗಿದೆ. ಏರ್‌ ಇಂಡಿಯಾದ ಸುರಕ್ಷಾ ವಿಭಾಗಕ್ಕೆ ಈ ಘಟನೆಯ ಬಗ್ಗೆ ವರದಿ ಮಾಡಲಾಗಿದ್ದು, ಸಮಗ್ರ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಕೊಚ್ಚಿನ್‌ನಿಂದ ತಿರುವನಂತಪುರಕ್ಕೆ ಹೋಗುತ್ತಿದ್ದಾಗ ಏರ್‌ ಇಂಡಿಯಾದ ಎಐ 048 ವಿಮಾನ ವಾಯುಮರ್ಗದಲ್ಲಿ ಪ್ರಕ್ಷುಬ್ಧತೆಗೆ ಸಿಕ್ಕಿ ಹಾಕಿಕೊಂಡಿತು. ಯಾರಿಗೂ ಗಾಯಗಳಾಗಿಲ್ಲವಾದರೂ, ಎ321 ವಿಮಾನಕ್ಕೆ ಸ್ವಲ್ಪಮಟ್ಟಿಗೆ ಹಾನಿಯಾಗಿದೆ. ತಕ್ಷಣ ವಿಮಾನವನ್ನು ತಪಾಸಣೆಗಾಗಿ ಕೆಳಕ್ಕೆ ಇಳಿಸಲಾಯಿತು. ಇದರಿಂದಾಗಿ ವಿಮಾನದ ಮರು ಪ್ರಯಾಣ ಸುಮಾರು ನಾಲ್ಕು ಗಂಟೆ ತಡವಾಯಿತು" ಎಂದು ಅಧಿಕಾರಿಗಳು ಹೇಳಿದ್ದಾರೆ.

ದೆಹಲಿಯಿಂದ ವಿಜಯವಾಡಕ್ಕೆ ಬರುತ್ತಿದ್ದ ಎ320 ವಿಮಾನ ಕೂಡಾ ಸೆಪ್ಟೆಂಬರ್ 17ರಂದು ಪ್ರತಿಕೂಲ ಹವಾಮಾನಕ್ಕೆ ಸಿಕ್ಕಿಹಾಕಿಕೊಂಡಿತ್ತು. ಈ ಘಟನೆಯಲ್ಲಿ ವಿಮಾನ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಿಮಾನಗಳಿಗೆ ಆಗಿರುವ ಹಾನಿ ಬಗೆಗಿನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News