ಭಾರತದ ಇಂಧನ ಭದ್ರತೆ ಅಗತ್ಯಗಳನ್ನು ಪೂರೈಸಲು ಬದ್ಧ: ಸೌದಿ ಅರೇಬಿಯ

Update: 2019-09-22 15:31 GMT

ಹೊಸದಿಲ್ಲಿ,ಸೆ.22: ತನ್ನ ತೈಲ ಘಟಕದ ಮೇಲೆ ನಡೆದಿರುವ ಅತೀದೊಡ್ಡ ದಾಳಿಯಿಂದ ಸದ್ಯ ಚೇತರಿಸಿಕೊಳ್ಳುತ್ತಿರುವ ಸೌದಿ ಅರೇಬಿಯ, ಭಾರತದ ಇಂಧನ ಭದ್ರತೆ ಅಗತ್ಯಗಳನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ ಮತ್ತು ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಇತರ ತೈಲ ಉತ್ಪಾದಕರ ಜೊತೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದೆ.

ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸಲು ಮತ್ತು ದಾಳಿಯ ಬಗ್ಗೆ ತನಿಖೆಯಲ್ಲಿ ಭಾಗಿಯಾಗಲು ವಿಶ್ವಸಂಸ್ಥೆ ಮತ್ತು ಅಂತರ್‌ರಾಷ್ಟ್ರೀಯ ತಜ್ಞರನ್ನು ನಾವು ಆಹ್ವಾನಿಸಲಿದ್ದೇವೆ ಎಂದು ಸೌದಿ ರಾಯಬಾರಿ ಡಾ. ಸೌದ್ ಬಿನ್ ಮುಹಮ್ಮದ್ ಅಲ್ ಸತಿ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇಂತಹ ಆಕ್ರಮಣಗಳನ್ನು ಎದುರಿಸುವ ಮತ್ತು ತನ್ನನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಮತ್ತು ಶಕ್ತಿ ಸೌದಿ ಅರೇಬಿಯಕ್ಕೆ ಇದೆ ಎಂದು ತಿಳಿಸಿದ ಅವರು, ಅಂತರ್‌ರಾಷ್ಟ್ರೀಯ ಸಮುದಾಯದ ವಿರುದ್ಧ ನಡೆದ ಈ ದಾಳಿಯ ಸಂದರ್ಭದಲ್ಲಿ ಸೌದಿ ಬೆಂಬಲಕ್ಕೆ ನಿಂತ ಭಾರತದ ಕ್ರಮವನ್ನು ಶ್ಲಾಘಿಸಿದರು. ಸೆಪ್ಟಂಬರ್ 14ರಂದು ಸೌದಿ ಅರೇಬಿಯದ ಅರಮ್ಕಾ ತೈಲ ಕಂಪೆನಿಯ ಮೇಲೆ ನಡೆದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಸೌದಿಯ ದೈನಂದಿನ ತೈಲೋತ್ಪಾದನೆಯ ಅರ್ಧದಷ್ಟನ್ನು ನಾಶಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News