ಜಾಧವ್‌ಪುರ ವಿವಿ ಪ್ರಕರಣ: ಎಬಿವಿಪಿ, ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ

Update: 2019-09-22 18:06 GMT

ಹೊಸದಿಲ್ಲಿ, ಸೆ.22: ಕೋಲ್ಕತಾದ ಜಾಧವ್‌ಪುರ ವಿವಿಯಲ್ಲಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ನಡೆದ ತಳ್ನಾಡಿ ಘಟನೆಯನ್ನು ಖಂಡಿಸಿ ಎಬಿವಿಪಿ ಹಾಗೂ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಶನಿವಾರ ದಿಲ್ಲಿ ವಿವಿಯಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿವೆ.

ಹಿಂಸಾಚಾರ ಖಂಡಿಸಿ ನೀಡಿರುವ ಹೇಳಿಕೆಯಲ್ಲಿ ವಿದ್ಯಾರ್ಥಿ ಸಂಘಟನೆಗಳು ಪರಸ್ಪರ ದೋಷಾರೋಪಣೆ ಮಾಡಿಕೊಂಡಿವೆ. ವಿವಿಯಲ್ಲಿ ನಡೆದ ಹಿಂಸಾಚಾರ ಘಟನೆಗೆ ಎಡಪಂಥೀಯರು ಕಾರಣವಾಗಿದ್ದು, ಇದೊಂದು ಎಡಪಂಥೀಯ ಭಯೋತ್ಪಾದನೆ ಎಂದು ಆರೋಪಿಸಿದ ಎಬಿವಿಪಿ (ಆರೆಸ್ಸೆಸ್‌ನ ವಿದ್ಯಾರ್ಥಿ ಸಂಘಟನೆ) ಕಾರ್ಯಕರ್ತರು ಪ್ರತಿಕೃತಿ ದಹಿಸಿ ಘೋಷಣೆ ಕೂಗಿದರು. ಹಿಂಸಾಚಾರದ ಹಿಂದಿರುವ ವಾಸ್ತವತೆಯನ್ನು ವಿದ್ಯಾರ್ಥಿಗಳ ಮುಂದಿಡಬೇಕು. ದಿಲ್ಲಿ ವಿವಿಯಲ್ಲಿ ಈ ರೀತಿಯ ಸಂಸ್ಕೃತಿ ಬೆಳೆಯಲು ನಾವು ಅವಕಾಶ ನೀಡುವುದಿಲ್ಲ ಎಂದು ಎಬಿವಿಪಿ ದಿಲ್ಲಿ ಅಧ್ಯಕ್ಷ ಸಿದ್ದಾರ್ಥ ಯಾದವ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿಗಳ ಆಡಳಿತ ಜಾರಿಯಾಗಬೇಕೆಂದು ದಿಲ್ಲಿ ವಿವಿ ವಿದ್ಯಾರ್ಥಿ ಯೂನಿಯನ್‌ನ ನೂತನ ಅಧ್ಯಕ್ಷ ಅಕ್ಷಿತ್ ದಹಿಯಾ ಒತ್ತಾಯಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸಚಿವರಿಗೇ ಭದ್ರತೆ ಇಲ್ಲವೆಂದ ಮೇಲೆ ಸಾಮಾನ್ಯ ವಿದ್ಯಾರ್ಥಿಗಳ ಪಾಡೇನು ಎಂದು ಪ್ರಶ್ನಿಸಿರುವ ಅವರು, ಎಡಪಂಥೀಯ ಭಯೋತ್ಪಾದನೆಯ ವಿರುದ್ಧ ದೇಶದಾದ್ಯಂತ ಸೈದ್ಧಾಂತಿಕ ಸರ್ಜಿಕಲ್ ದಾಳಿ ನಡೆಯಬೇಕು ಎಂದವರು ಹೇಳಿದ್ದಾರೆ.

ಈ ಮಧ್ಯೆ, ಜಾದವ್‌ಪುರ ವಿವಿಯಲ್ಲಿ ನಡೆದ ಅಹಿತಕರ ಘಟನೆಗೆ ಬಿಜೆಪಿ ಹಾಗೂ ಎಬಿವಿಪಿ ಕಾರ್ಯಕರ್ತರ ಗೂಂಡಾಗಿರಿ ಕಾರಣ ಎಂದು ಆರೋಪಿಸಿ ಎಡಪಂಥೀಯ ವಿದ್ಯಾರ್ಥಿಗಳ ತಂಡ ಪ್ರತಿಭಟನೆ ನಡೆಸಿದೆ. ಜವಾಹರಲಾಲ್ ನೆಹರೂ ವಿವಿಯಿಂದ ದಿಲ್ಲಿ ವಿವಿಯವರೆಗೆ, ಎಲ್ಲಿ ಬಿಜೆಪಿಯ ಜನವಿರೋಧಿ, ವಿದ್ಯಾರ್ಥಿಗಳ ವಿರುದ್ಧದ ನೀತಿಯನ್ನು ವಿರೋಧಿಸಲಾಗುತ್ತದೆಯೋ ಅಲ್ಲಿ ಬಿಜೆಪಿ ಸರಕಾರ ಬಲಪ್ರಯೋಗಿಸಿ ಕ್ಯಾಂಪಸ್ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘ(ಎಐಎಸ್‌ಎ) ಹೇಳಿದೆ. ಕಾನೂನು ಮತ್ತು ಸುವ್ಯವಸ್ಥೆಯ ನೆಪಒಡ್ಡಿ ದಿಲ್ಲಿ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ನಿರ್ಮಿಸಿ ನಮ್ಮನ್ನು ತಡೆಯಲು ಯತ್ನಿಸಿದ್ದಾರೆ. ಆದರೆ ಎಬಿವಿಪಿ ಸದಸ್ಯರಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಎಐಎಸ್‌ಎ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News