ಬಾಬರಿ ಮಸೀದಿ ಪ್ರಕರಣ: ಬಿಜೆಪಿ ಮುಖಂಡ ಕಲ್ಯಾಣ್ ಸಿಂಗ್‌ಗೆ ಸಮನ್ಸ್

Update: 2019-09-22 18:08 GMT

ಹೊಸದಿಲ್ಲಿ. ಸೆ.22: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ತನ್ನೆದುರು ಸೆ.27ರಂದು ಹಾಜರಾಗುವಂತೆ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಕಲ್ಯಾಣ್ ಸಿಂಗ್‌ಗೆ ಸಿಬಿಐ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ. ಈ ಪ್ರಕರಣದಲ್ಲಿ ಕಲ್ಯಾಣ್ ಸಿಂಗ್ ಓರ್ವ ಆರೋಪಿಯಾಗಿದ್ದಾರೆ.

 ರಾಜಸ್ತಾನದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದ ಕಾರಣ ಕಲ್ಯಾಣ್ ಸಿಂಗ್‌ಗೆ ನ್ಯಾಯಾಲಯದ ಕಾನೂನುಕ್ರಮಗಳಿಂದ ವಿನಾಯಿತಿ ದೊರಕಿತ್ತು. ಆದರೆ ಅವರ ಅಧಿಕಾರಾವಧಿ ಈ ತಿಂಗಳ ಆರಂಭದಲ್ಲಿ ಕೊನೆಗೊಂಡ ಬಳಿಕ ಕಲ್ಯಾಣ್‌ಸಿಂಗ್ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅವರನ್ನು ವಿಚಾರಣೆಗೆ ಕರೆಯಬೇಕೆಂದು ಕೋರಿ ಅದೇ ದಿನ ಸಿಬಿಐ ಅರ್ಜಿ ಸಲ್ಲಿಸಿತ್ತು.

ರಾಜ್ಯಪಾಲರಾಗಿ ಸಿಂಗ್ ಅಧಿಕಾರಾವಧಿ ಮುಕ್ತಾಯಗೊಂಡಿರುವುದಕ್ಕೆ ಸೂಕ್ತ ದಾಖಲೆ ಒದಗಿಸುವಂತೆ ನ್ಯಾಯಾಲಯ ಸಿಬಿಐಗೆ ತಿಳಿಸಿತ್ತು. ಇದಕ್ಕೆ ಕಾಲಾವಕಾಶ ನೀಡುವಂತೆ ಸಿಬಿಐ ವಿನಂತಿಸಿತ್ತು. ಹಿಂದುತ್ವವಾದಿ ಕಾರ್ಯಕರ್ತರು 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸಗೊಳಿಸಿದಾಗ ಕಲ್ಯಾಣ್ ಸಿಂಗ್ ಉತ್ತರಪ್ರದೇಶಢ ಮುಖ್ಯಮಂತ್ರಿಯಾಗಿದ್ದರು. 1993ರಲ್ಲಿ ಸಲ್ಲಿಸಲಾಗಿದ್ದ ಆರೋಪಪಟ್ಟಿಯಲ್ಲಿ ಸಿಂಗ್ ಹೆಸರಿತ್ತು. ಬಾಬ್ರಿ ಮಸೀದಿ ನೆಲಸಮಗೊಳಿಸುವುದನ್ನು ತಡೆಯಲು ಕೇಂದ್ರ ಮೀಸಲು ಪಡೆ ನಿಯೋಜನೆಗೆ ಸಿಂಗ್ ಆದೇಶ ನೀಡಿರಲಿಲ್ಲ ಎಂಬುದು ಅವರ ಮೇಲಿನ ಆರೋಪವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News