ಎನ್‍ಆರ್ ಸಿಯಿಂದ ಕೈಬಿಟ್ಟರೂ ಒಬ್ಬನೇ ಒಬ್ಬ ಹಿಂದು ದೇಶ ಬಿಡಬೇಕಾಗಿಲ್ಲ ಎಂದ ಮೋಹನ್ ಭಾಗವತ್

Update: 2019-09-23 10:08 GMT

ಹೊಸದಿಲ್ಲಿ, ಸೆ.23: ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಝನ್ಸ್ ‍ನಲ್ಲಿ ತಮ್ಮ ಹೆಸರಿಲ್ಲದೇ ಇದ್ದರೂ ಯಾವುದೇ ಹಿಂದೂಗಳು ದೇಶ ಬಿಟ್ಟು ಹೋಗುವ ಬಗ್ಗೆ ಯೋಚಿಸಬೇಕಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಉಲುಬೇರಿಯಾದಲ್ಲಿ ಬಿಜೆಪಿ ಸಹಿತ ಆರೆಸ್ಸೆಸ್ ಸಂಯೋಜಿತ ಸಂಘಟನೆಗಳ ಪ್ರತಿನಿಧಿಗಳ ಜತೆಗೆ ಭಾಗವತ್ ನಡೆಸಿದ ರಹಸ್ಯ ಚರ್ಚೆಗಳ ನಂತರ ಅವರಿಂದ ಈ ಹೇಳಿಕೆ ಬಂದಿದೆ.

ಅಸ್ಸಾಂ ಎನ್‍ಆರ್‍ ಸಿಯಿಂದ ಕೈಬಿಡಲಾಗಿರುವ 19 ಲಕ್ಷ ಮಂದಿಯ ಪೈಕಿ ಮುಸ್ಲಿಮರಿಗಿಂತ ಹೆಚ್ಚಾಗಿ ಹಿಂದುಗಳಿದ್ದಾರೆಂಬ ವರದಿಗಳ ನಡುವೆ ಭಾಗವತ್ ಈ ಮಾತುಗಳನ್ನು ಹೇಳಿದ್ದಾರೆ.

“ಒಬ್ಬನೇ ಒಬ್ಬ ಹಿಂದು ಈ ದೇಶ ಬಿಡಬೇಕಾಗಿಲ್ಲ ಎಂದು ಮೋಹನ್ ಭಾಗವತ್ ಜೀ ಸ್ಪಷ್ಟವಾಗಿ ಹೇಳಿದ್ದಾರೆ. ಇತರ ದೇಶಗಳಲ್ಲಿ ಹಿಂಸೆ ಹಾಗೂ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ಬಂದ ಹಿಂದುಗಳು ಇಲ್ಲಿಯೇ ಉಳಿಯುತ್ತಾರೆ ಎಂದು ಅವರು ಹೇಳಿದರು'' ಎಂದು ಆರೆಸ್ಸೆಸ್ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

ಎನ್‍ಆರ್‍ ಸಿಯಲ್ಲಿ ಹೆಸರಿರದ ಹಿಂದುಗಳು ಭಯ ಪಡಬೇಕಿಲ್ಲ, ಆರೆಸ್ಸೆಸ್ ಅವರ ಜತೆಗಿರುವುದು ಎಂದು ಭಾಗವತ್ ಸಭೆಯಲ್ಲಿ ಹೇಳಿದ್ದಾರೆನ್ನಲಾಗಿದೆ.

ದೇಶವ್ಯಾಪಿ ಎನ್‍ಆರ್‍ ಸಿ ಜಾರಿಗೊಳಿಸಬೇಕೆಂದು ಬಿಜೆಪಿ ಮತ್ತದರ ಉನ್ನತ ನಾಯಕರು ಆಗ್ರಹಿಸುತ್ತಿರುವ ಸಂದರ್ಭ ಭಾಗವತ್ ಅವರ ಈ ಹೇಳಿಕೆ ಮಹತ್ವ ಪಡೆದಿದೆ.

ಬಿಜೆಪಿ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ಕೂಡ ಎನ್‍ಆರ್‍ ಸಿಯಿಂದ ಕೈಬಿಡಲಾಗಿರುವ ಹಿಂದುಗಳಿಗೆ ಮೇಲಿನಂತೆಯೇ ಭರವಸೆ ನೀಡಬೇಕೆಂದು ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಬಿಜೆಪಿ ನಾಯಕರೊಬ್ಬರೂ ಆಗ್ರಹಿಸಿದ್ದಾರೆನ್ನಲಾಗಿದೆ.

ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News