ಸಿಬಿಐ ಹೇಳಿಕೆ ಅಸಂಬದ್ಧ: ಪಿ ಚಿದಂಬರಂ

Update: 2019-09-23 15:02 GMT

ಹೊಸದಿಲ್ಲಿ, ಸೆ.23: ಪಿ ಚಿದಂಬರಂಗೆ ಜಾಮೀನು ನೀಡಿದರೆ ವಿದೇಶಕ್ಕೆ ಪರಾರಿಯಾಗಬಹುದು ಎಂಬ ಸಿಬಿಐ ಹೇಳಿಕೆ ಅಸಂಬದ್ಧ ಎಂದಿರುವ ಹಿರಿಯ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ, ತನ್ನ ವಿರುದ್ಧ ಲುಕೌಟ್ ಸರ್ಕ್ಯುಲರ್ ಈಗಾಗಲೇ ಜಾರಿಯಾಗಿರುವುದರಿಂದ ಕಾನೂನು ಪ್ರಕ್ರಿಯೆ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ ಎಂದು ಹೇಳಿದ್ದಾರೆ.

ನ್ಯಾಯಾಲಯದಲ್ಲಿ ಸಿಬಿಐ ಸಲ್ಲಿಸಿರುವ ಉತ್ತರಕ್ಕೆ ಪ್ರತಿಕ್ರಿಯಿಸಿರುವ ಚಿದಂಬರಂ ಅವರ ವಕೀಲರು, ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ವಿರುದ್ಧ ಇಂದ್ರಾಣಿ ಮುಖರ್ಜಿ ಹಾಗೂ ಅವರ ಪತಿ ಪೀಟರ್ ಮುಖರ್ಜಿ ನೀಡಿರುವ ಹೇಳಿಕೆ ವಿಶ್ವಾಸಾರ್ಹವಲ್ಲ. ಯಾಕೆಂದರೆ ಅವರಿಬ್ಬರು ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ ಎಂದು ಹೇಳಿದರು.

ಈ ಹಿಂದೆ ಕೇಂದ್ರ ಸರಕಾರದಲ್ಲಿ ಅರ್ಥ ಸಚಿವರಾಗಿದ್ದ ಸಂದರ್ಭ ಚಿದಂಬರಂ ತಮ್ಮ ಅಧಿಕಾರ ಮತ್ತು ಪ್ರಭಾವವನ್ನು ಸ್ವಹಿತಾಸಕ್ತಿಗಾಗಿ ಬಳಸಿಕೊಂಡಿದ್ದರು. ಅಲ್ಲದೆ ಇದರಿಂದ ಸರಕಾರದ ಬೊಕ್ಕಸಕ್ಕೆ ಅಪಾರ ನಷ್ಟವಾಗಿದೆ ಎಂಬ ಸಿಬಿಐ ಆರೋಪವನ್ನು ಚಿದಂಬರಂ ಅವರ ವಕೀಲರು ನಿರಾಕರಿಸಿದರು. ಜಾಮೀನು ಕೋರಿ ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ವಿರೋಧಿಸಿದ್ದ ಸಿಬಿಐ, ಚಿದಂಬರಂಗೆ ಜಾಮೀನು ನೀಡುವುದು ಭ್ರಷ್ಟಾಚಾರದ ವಿರುದ್ಧದ ಶೂನ್ಯ ಸಹಿಷ್ಣುತೆ ನೀತಿಗೆ ವಿರುದ್ಧವಾಗಿದೆಯಷ್ಟೇ ಅಲ್ಲ, ಇದರಿಂದ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಕೆಟ್ಟ ಪೂರ್ವನಿದರ್ಶನ ಹಾಕಿಕೊಟ್ಟಂತಾಗುತ್ತದೆ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News