ಪ.ಬಂಗಾಳದಲ್ಲಿ ಎನ್‌ಆರ್‌ಸಿ ಪ್ರಕ್ರಿಯೆಗೆ ಅವಕಾಶವಿಲ್ಲ: ಮಮತಾ ಬ್ಯಾನರ್ಜಿ

Update: 2019-09-23 15:06 GMT

 ಕೋಲ್ಕತಾ, ಸೆ.23: ಅಸ್ಸಾಂನಲ್ಲಿ ಪೌರತ್ವ ಪಟ್ಟಿಯ ಕಾರಣದಿಂದ ಬಿಜೆಪಿ ಜನರನ್ನು ದಿಗಿಲುಗೊಳಿಸಿದೆ ಎಂದು ದೂರಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದರಿಂದ ರಾಜ್ಯದಲ್ಲಿ ಆರು ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದಿದ್ದಾರೆ.

ಕೋಲ್ಕತಾದಲ್ಲಿ ನಡೆದ ಕಾರ್ಮಿಕರ ಯೂನಿಯನ್‌ನ ಸಭೆಯಲ್ಲಿ ಮಾತನಾಡಿದ ಅವರು, “ಜನತೆಯಲ್ಲಿ ಆತಂಕ ಮೂಡಿಸಿದ್ದಕ್ಕೆ ಬಿಜೆಪಿಗೆ ನಾಚಿಕೆಯಾಗಬೇಕು. ನನ್ನಲ್ಲಿ ವಿಶ್ವಾಸವಿಡಿ. ಎನ್‌ಆರ್‌ಸಿ ಪ್ರಕ್ರಿಯೆ ರಾಜ್ಯದಲ್ಲಿ ನಡೆಸಲು ನಾನು ಅವಕಾಶ ನೀಡುವುದಿಲ್ಲ . ಅಸ್ಸಾಂ ಒಪ್ಪಂದದಂತೆ ಎನ್‌ಆರ್‌ಸಿ ಪ್ರಕ್ರಿಯೆ ಆ ರಾಜ್ಯದಲ್ಲಿ ನಡೆದಿದೆ. ಆದರೆ ಪಶ್ಚಿಮ ಬಂಗಾಳ ಅಥವಾ ಇನ್ಯಾವುದೇ ರಾಜ್ಯಗಳಲ್ಲಿ ಈ ಪ್ರಕ್ರಿಯೆ ನಡೆಯದು” ಎಂದು ಹೇಳಿದರು.

ದೇಶದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಿಜೆಪಿ ದುರ್ಬಲಗೊಳಿಸುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ಉಳಿದುಕೊಂಡಿದ್ದರೂ ದೇಶದ ಇತರ ಹಲವು ಪ್ರದೇಶಗಳಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿದೆ. ದೇಶದಲ್ಲಿ ಉದ್ಯೋಗ ನಷ್ಟ ಅಥವಾ ಆರ್ಥಿಕ ಪ್ರಗತಿಯ ಮಂದಗತಿಯ ಬಗ್ಗೆ ಬಿಜೆಪಿಗೆ ಚಿಂತೆ ಇಲ್ಲ. ಸ್ವಹಿತಾಸಕ್ತಿ ಕಾಪಾಡಲು ಅವರು ಆದ್ಯತೆ ನೀಡುತ್ತಿದ್ದಾರೆ ಎಂದು ಮಮತಾ ದೂರಿದರು.

ಜಾಧವ್‌ಪುರ ವಿವಿ ಘಟನೆಯನ್ನು ಉಲ್ಲೇಖಿಸಿದ ಮಮತಾ, ಎಬಿವಿಪಿ ಮತ್ತು ಬಿಜೆಪಿ ಕಾರ್ಯಕರ್ತರು ಶಿಕ್ಷಣ ಸಂಸ್ಥೆಗಳಲ್ಲಿ ನಡೆಸುತ್ತಿರುವ ಅನ್ಯಾಯದ ಬಗ್ಗೆ ಬಂಗಾಳದ ಜನತೆಗೆ ತಿಳಿದಿದೆ. ಅವರು ಅದನ್ನು ನೋಡಿದ್ದಾರೆ. ನಿಯಂತ್ರಕ ಶಕ್ತಿಯನ್ನು ಎಲ್ಲೆಡೆಗೆ ಬಳಸಲು, ಎಲ್ಲರನ್ನೂ ಸದೆಬಡಿಯಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News