ಬಾಲಕೋಟ್‌ನಲ್ಲಿ ಭಯೋತ್ಪಾದಕ ಶಿಬಿರಗಳು ಮತ್ತೆ ಸಕ್ರಿಯ: ಸೇನಾ ವರಿಷ್ಠ ಬಿಪಿನ್ ರಾವತ್

Update: 2019-09-23 15:45 GMT

ಚೆನ್ನೈ, ಸೆ. 23: ಬಾಲಕೋಟ್‌ನಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ಪಾಕಿಸ್ತಾನ ಇತ್ತೀಚೆಗೆ ಮತ್ತೆ ಸಕ್ರಿಯಗೊಳಿಸಿದೆ. ಭಾರತದೊಳಗೆ ನುಸುಳಲು ಕನಿಷ್ಠ 500 ನುಸುಳುಕೋರರು ಸಿದ್ಧರಾಗಿದ್ದಾರೆ ಎಂದು ಸೇನಾ ವರಿಷ್ಠ ಜನರಲ್ ಬಿಪಿನ್ ರಾವತ್ ಸೋಮವಾರ ಹೇಳಿದ್ದಾರೆ.

ಬಾಲಕೋಟ್‌ನಲ್ಲಿದ್ದ ಭಯೋತ್ಪಾದಕರ ಶಿಬಿರಗಳನ್ನು ಧ್ವಂಸ ಮಾಡಲು ಫೆಬ್ರವರಿಯಲ್ಲಿ ಭಾರತೀಯ ವಾಯು ಪಡೆ ಸರ್ಜಿಕಲ್ ಸ್ಟೈಕ್ ನಡೆಸಿತ್ತು. ಇಲ್ಲಿನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಯುವ ನಾಯಕರ ತರಬೇತಿ ಘಟಕ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ಒಳ ನುಸುಳುವಿಕೆಯನ್ನು ತಡೆಯಲು ಹೆಚ್ಚು ಪಡೆಗಳನ್ನು ನಿಯೋಜಿಸಲಾಗಿದೆ. ಬಾಲಕೋಟ್ ಅನ್ನು ಮೀರಿ ದಾಳಿ ನಡೆಸಲು ಹಿಂಜರಿಕೆ ಇರಲಿಲ್ಲ. ಆದರೆ, ಪಾಕಿಸ್ತಾನ ಗೊಂದಲಕ್ಕೆ ಒಳಗಾಗುವಂತೆ ಮಾಡಲು ಯತ್ನಿಸಿದೆವು ಎಂದರು.

ಒಳನುಸುಳುವಿಕೆ ಹವಾಮಾನವನ್ನು ಅವಲಂಬಿಸಿದೆ. ಈಗ ಮಂಜು ಕರಗಲು ಆರಂಭವಾಗಿದೆ. ಆದುದರಿಂದ ಉತ್ತರದಿಂದ ನುಸುಳುಕೋರರು ಭಾರತದ ಒಳಗೆ ನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂದರು. ಜಮ್ಮು ಹಾಗೂ ಕಾಶ್ಮೀರದಲ್ಲಿ ಯಾವುದೇ ನಿರ್ಬಂಧ ಇಲ್ಲ. ಅದು ಭಯೋತ್ಪಾದಕರು ನಿರ್ಮಿಸಿದ ನಿರ್ಬಂಧ. ಅಂಗಡಿಗಳು ಹಿಂದಿನಿಂದ ತೆರೆದಿವೆ. ಜನರು ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ. ಭಯೋತ್ಪಾದಕರು ಒತ್ತಡ ಹೇರುತ್ತಿರುವುದರಿಂದ ವ್ಯಾಪಾರಿಗಳು ಎದುರಿನ ಬಾಗಿಲನ್ನು ಮುಚ್ಚುತ್ತಿದ್ದಾರೆ ಎಂದು ಅವರು ಹೇಳಿದರು.

ಶ್ರೀನಗರದಲ್ಲಿ ಇಟ್ಟಿಗೆ ಗೂಡುಗಳು ಕಾರ್ಯಾಚರಿಸುತ್ತಿವೆ. 100ಕ್ಕೂ ಅಧಿಕ ಲೋಡ್ ಆ್ಯಪಲ್‌ಗಳು ಟ್ರಕ್ ಮೂಲಕ ಅಲ್ಲಿಂದ ಹೊರಗೆ ಬರುತ್ತಿವೆ. ದೂರವಾಣಿ ಲೈನ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು. ಆದರೆ, ಜಮ್ಮು ಹಾಗೂ ಕಾಶ್ಮೀರದಲ್ಲಿ ಎಷ್ಟು ದಿನ ನಿರ್ಬಂಧ ಮುಂದುವರಿಯಲಿದೆ ಎಂಬುದರ ಬಗ್ಗೆ ಅವರು ಯಾವುದೇ ಹೇಳಿಕೆ ನೀಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News