ನೆರೆ ಪರಿಹಾರ ನೀಡಲು ಮುಂದಾಗದ ಕೇಂದ್ರ: 39 ಇಲಾಖೆಗಳ ಹಣ ಬಳಕೆಗೆ ರಾಜ್ಯ ಸರಕಾರದ ನಿರ್ಧಾರ

Update: 2019-09-23 15:50 GMT

ಬೆಂಗಳೂರು,ಸೆ.23: ನೆರೆ ಪ್ರಕೋಪದಿಂದ ತತ್ತರಿಸಿರುವ ರಾಜ್ಯಕ್ಕೆ ಇನ್ನೂ ಕೇಂದ್ರ ಸರಕಾರದಿಂದ ಪರಿಹಾರ ಧನ ಬಿಡುಗಡೆಯಾಗಿಲ್ಲ. ಹಲವಾರು ನೆರೆಪೀಡಿತ ಜಿಲ್ಲೆಗಳಲ್ಲಿ ಕಳೆದ ಎರಡು ತಿಂಗಳುಗಳಿಂದಲೂ ಸಾವಿರಾರು ಜನರು ನಿರ್ವಸಿತರಾಗಿದ್ದಾರೆ. ತನ್ಮಧ್ಯೆ,ಮುಂದಿನ ತಿಂಗಳು ಉಪಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ನೆರೆಪೀಡಿತ ಪ್ರದೇಶಗಳ ಜನರ ಆಕ್ರೋಶ ಇನ್ನಷ್ಟು ಹೆಚ್ಚುವುದನ್ನು ಬಯಸದ ರಾಜ್ಯದ ಬಿಜೆಪಿ ಸರಕಾರವು 39 ಇಲಾಖೆಗಳ ಹಣವನ್ನು ನೆರೆ ಪರಿಹಾರಕ್ಕೆ ಬಳಸಿಕೊಳ್ಳಲು ನಿರ್ಧರಿಸಿದೆ. ಈ ಹಣವನ್ನು ನೆರೆಪೀಡಿತ ದಲಿತರು ಮತ್ತು ಆದಿವಾಸಿ ಸಮುದಾಯಗಳ ಜನರ ಮನೆಗಳ ಮರುನಿರ್ಮಾಣಕ್ಕೆ ಬಳಸಲಾಗುವುದು.

  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೆ.20ರಂದು ಕರೆದಿದ್ದ ಸಭೆಯಲ್ಲಿ ಪಿಡಬ್ಲ್ಯು ಡಿ,ನೀರಾವರಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್‌ ನಂತಹ ಹಲವಾರು ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ನೆರೆ ಪರಿಹಾರ ಕಾರ್ಯಗಳಿಗೆ ಕೊಡುಗೆ ಸಲ್ಲಿಸಲು ಸಾಧ್ಯವೇ ಎಂದು ಮುಖ್ಯಮಂತ್ರಿಗಳು ಪ್ರತಿಯೊಂದೂ ಇಲಾಖಾ ಮುಖ್ಯಸ್ಥರಿಗೆ ಕೇಳಿಕೊಂಡಿದ್ದಾರೆ. ರಾಜ್ಯ ಮುಂಗಡಪತ್ರದಲ್ಲಿ ತಮಗೆ ಹಂಚಿಕೆಯಾಗಿರುವ ಹಣದ ಬಳಕೆಯಲ್ಲಿ ಮಿತವ್ಯಯ ಸಾಧಿಸುವಂತೆ ಮತ್ತು ಅತ್ಯಗತ್ಯ ಯೋಜನೆಗಳನ್ನು ಮಾತ್ರ ಕೈಗೆತ್ತಿಕೊಳ್ಳುವಂತೆ ಅವರು ಇಲಾಖೆಗಳಿಗೆ ಸೂಚಿಸಿದ್ದಾರೆ. ದಲಿತರು ಮತ್ತು ಆದಿವಾಸಿಗಳ ಮನೆಗಳ ಪುನರ್‌ನಿರ್ಮಾಣಕ್ಕಾಗಿ 1,100 ಕೋ.ರೂ.ಗಳನ್ನು ಒದಗಿಸುವಂತೆ ಅವರು ನಿರ್ದೇಶ ನೀಡಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಊರ್ಮಿಳಾ ಅವರು ಮಾಧ್ಯಮ ಪ್ರತಿನಿಧಿಗೆ ತಿಳಿಸಿದರು.

 ಸಾಮಾಜಿಕ ನ್ಯಾಯ ಇಲಾಖೆಯ ಮೂಲಕ ಈ ಹಣವನ್ನು ಅರ್ಹ ವ್ಯಕ್ತಿಗಳಿಗೆ ಹಂಚಿಕೆ ಮಾಡಲಾಗುವುದು. 1,100 ಕೋ.ರೂ. ಎಸ್‌ಸಿ ಮತ್ತು ಎಸ್‌ಟಿ ಜನರ ಮನೆಗಳ ಮರುನಿರ್ಮಾಣಕ್ಕೆ ಮಾತ್ರ ನೀಡಲಾಗುವುದು. ಬೆಳೆಹಾನಿ ಇತ್ಯಾದಿಗಳಿಗೆ ಪರಿಹಾರ ನೀಡಲು ಹೆಚ್ಚಿನ ಹಣಕಾಸು ಅಗತ್ಯವಾಗಿದ್ದು,ಅದನ್ನು ಕೇಂದ್ರವೇ ಒದಗಿಸಬೇಕಿದೆ. ನಾವು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ(ಎನ್‌ಡಿಆರ್‌ಎಫ್)ಯಿಂದ ಹಣಕ್ಕಾಗಿ ಕಾಯುತ್ತಿದ್ದೇವೆ ಎಂದರು.

ರಾಜ್ಯಕ್ಕೆ ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆಯಲ್ಲಿ ವಿಳಂಬದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ರೈತ ಸಂಘಟನೆಗಳು ಬೆದರಿಕೆಯೊಡ್ಡಿವೆ.

 ಕೇಂದ್ರವು ಬೆಳೆಹಾನಿಗೆ ಪರಿಹಾರವನ್ನು ಶೀಘ್ರ ಬಿಡುಗಡೆಗೊಳಿಸದಿದ್ದರೆ ದೇಶಾದ್ಯಂತ ರೈತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಿರುವ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯ ಕುರುಬರ ಶಾಂತಕುಮಾರ ಅವರು, ಮನೆಗಳ ನಿರ್ಮಾಣ ಕಾರ್ಯ ಸಮಯವನ್ನು ತೆಗೆದುಕೊಳ್ಳಲಿದೆ. ಸರಕಾರವು ಕನಿಷ್ಠ ಬೆಳೆಹಾನಿಗಾದರೂ ಪರಿಹಾರ ನೀಡಿದರೆ ನಾವು ಕೃಷಿ ಚಟುವಟಿಕೆಗಳನ್ನು ಆರಂಭಿಸಬಹುದು ಎಂದಿದ್ದಾರೆ.

ಮುಖ್ಯಮಂತ್ರಿಗಳ ಕಚೇರಿಯ ಮಾಹಿತಿಯಂತೆ ರಾಜ್ಯದ 130 ನೆರೆಪೀಡಿತ ತಾಲೂಕುಗಳಲ್ಲಿ ಹೆಚ್ಚಿನ ರೈತರು ಶೇ.50ರಷ್ಟು ಬೆಳೆನಷ್ಟವನ್ನು ಅನುಭವಿಸಿದ್ದಾರೆ. ಒಟ್ಟು 2.7 ಲ.ರೈತರು ಬೆಳೆನಷ್ಟಕ್ಕೆ ಗುರಿಯಾಗಿದ್ದು,ನಷ್ಟದ ಪ್ರಮಾಣ 1,154 ಕೋ.ರೂ.ಆಗಿದೆ.

ಎನ್‌ಡಿಆರ್‌ಎಫ್ ನಷ್ಟದ ಪ್ರಮಾಣವನ್ನು ಪರಿಗಣಿಸದೆ ಪ್ರತಿ ರೈತನಿಗೂ 6,800 ರೂ.ಗಳ ನೆರೆ ಪರಿಹಾರವನ್ನು ಹಂಚಿಕೆ ಮಾಡುತ್ತದೆ. ಸರಕಾರವು ನೆರೆ ಪರಿಹಾರವಾಗಿ 1,100 ಕೋ.ರೂ.ಗಳನ್ನು ಹಂಚಿಕೆ ಮಾಡಬೇಕಿದೆ. ಕೇಂದ್ರವು ಆರ್ಥಿಕ ನೆರವಿಗೆ ಒಪ್ಪಿಗೆ ನೀಡಿದೆ,ಆದರ ಅದನ್ನು ಇನ್ನೂ ಬಿಡುಗಡೆಗೊಳಿಸಿಲ್ಲ ಎಂದು ಶಾಂತಕುಮಾರ ಹೇಳಿದ್ದಾರೆ.

ರವಿವಾರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಯಡಿಯೂರಪ್ಪ ನೆರೆ ಪರಿಹಾರವಾಗಿ 2,000 ಕೋ.ರೂ.ಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News