×
Ad

ನಿಜ ದರಕ್ಕಿಂತ ಕಡಿಮೆ ಬಿಲ್ ರಚನೆಯಿಂದ ಜಿಎಸ್‌ಟಿ ಖೋತ: ಬೈಸಿಕಲ್ ತಯಾರಕರ ಆರೋಪ

Update: 2019-09-23 21:35 IST

ಚಂಡಿಗಡ,ಸೆ.23: ಪಂಜಾಬ್‌ನ ಲುಧಿಯಾನದ ಕೆಲವು ವಂಚಕ ಮಾರಾಟಗಾರರು ಸೈಕಲ್‌ಗಳಿಗೆ ನಿಗದಿತ ದರಕ್ಕಿಂತ ಕಡಿಮೆ ದರ ತೋರಿಸಿ ಬಿಲ್ ಸಿದ್ಧಪಡಿಸುತ್ತಿರುವ (ಅಂಡರ್ ಇನ್‌ವೊಸಿಂಗ್) ಕಾರಣ ಸಂಘಟಿತ ಮಾರಾಟಗಾರರ ಮೇಲೆ ತೀವ್ರ ಹೊಡೆತ ಬಿದ್ದಿದೆ ಮತ್ತು ಇದರಿಂದ ಜಿಎಸ್‌ಟಿ ಖೋತ ಕೂಡಾ ಆಗುತ್ತಿದೆ ಎಂದು ಸೈಕಲ್ ತಯಾರಕರು ಆರೋಪಿಸಿದ್ದಾರೆ. ಸೈಕಲ್ ಮತ್ತು ಸೈಕಲ್‌ನ ಬಿಡಿಭಾಗಗಳನ್ನು ತಯಾರಿಸುವ ದೇಶದ ಪ್ರಮುಖ ತಾಣವಾಗಿರುವ ಲುಧಿಯಾನದಲ್ಲಿ ನಡೆಯುತ್ತಿರುವ ವಂಚನೆಯಿಂದ ಸದ್ಯ ಇರುವ ಮಾರುಕಟ್ಟೆಯಲ್ಲಿ ಉಳಿಯುವುದು ಅಸಾಧ್ಯ ಎಂದು ಸಂಘಟಿತ ಸೈಕಲ್ ತಯಾರಕರು ಸೋಮವಾರ ತಿಳಿಸಿದ್ದಾರೆ.

ಸಾಮಾನ್ಯವಾಗಿ 2,500ರೂ.ಗೆ ಸಿಗುವ ಒಂದು ಸೈಕಲ್‌ಗೆ ಕೆಲವು ಅಕ್ರಮ ಮಾರಾಟಗಾರರು 900ರೂ. ಬಿಲ್ ರಚಿಸುತ್ತಾರೆ. ಇದರಿಂದ ಜಿಎಸ್‌ಟಿ ವಂಚಿಸಿದಂತೆಯೂ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ. ಸದ್ಯ ಸೈಕಲ್‌ಗೆ ಶೇ.12 ಜಿಎಸ್‌ಟಿ ವಿಧಿಸಲಾಗುತ್ತಿದೆ. ಅಂಡರ್ ಇನ್‌ವೊಸಿಂಗ್ ಮಾಡುವ ಮೂಲಕ ಅಕ್ರಮ ಮಾರಾಟಗಾರರು 2,500ರೂ. ಬೆಲೆಯ ಸೈಕಲ್‌ಗೆ ವಿಧಿಸಲಾಗಿರುವ 300ರೂ. ಜಿಎಸ್‌ಟಿಯಲ್ಲಿ 192ರೂ.ವನ್ನು ವಂಚಿಸುತ್ತಾರೆ ಎಂದು ಮಾರಾಟಗಾರರೊಬ್ಬರು ತಿಳಿಸಿದ್ದಾರೆ.

ದೇಶದಲ್ಲಿ ಪ್ರತಿವರ್ಷ ಮಾರಲ್ಪಡುವ 2 ಕೋಟಿ ಸೈಕಲ್‌ಗಳ ಪೈಕಿ ಶೇ.80 5,000ರೂ.ಗಿಂತ ಕಡಿಮೆ ಬೆಲೆಯ ಸೈಕಲ್‌ಗಳಾಗಿದ್ದು ಕಡಿಮೆ ಲಾಭ ಮಿತಿಯನ್ನು ಹೊಂದಿರುತ್ತವೆ ಎಂದು ಮಾರಾಟಗಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News