ಅಸ್ಸಾಂ ಎನ್‌ಆರ್‌ಸಿಯಿಂದ ಹೊರಗಿಟ್ಟ ಹಲವರಿಂದ ಮಿಝೊರಾಂ ಪ್ರವೇಶಿಸಲು ವಿಫಲ ಯತ್ನ
ಐಝ್ವಲ್,ಸೆ.23: ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿಯ ಪಟ್ಟಿ ಬಿಡುಗಡೆಯಾದ ಆಗಸ್ಟ್ 31ರ ನಂತರ ಅಂತರ್‌ರಾಜ್ಯ ಗಡಿ ಭಾಗದಲ್ಲಿ ರಾಜ್ಯವನ್ನು ಪ್ರವೇಶಿಸಲು ಯತ್ನಿಸಿದ ಸಾವಿರಾರು ಜನರನ್ನು ಮತ್ತೆ ಅಸ್ಸಾಂಗೆ ವಾಪಸ್ ಕಳುಹಿಸಲಾಗಿದೆ ಎಂದು ಮಿಝೊರಾಂ ಗೃಹ ಸಚಿವ ಲಲ್ಚಮ್ಲಿಯಾನ ಸೋಮವಾರ ತಿಳಿಸಿದ್ದಾರೆ.
ಎನ್‌ಆರ್‌ಸಿ ಅಂತಿಮ ಪಟ್ಟಿ ಬಿಡುಗಡೆಯ ಹಿನ್ನೆಲೆಯಲ್ಲಿ ಮಿಝೊರಾಂ-ಅಸ್ಸಾಂ ಗಡಿಯಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿತ್ತು ಮತ್ತು ಮಿಝೊರಾಂಗೆ ಯಾವುದೇ ಗಂಭೀರ ಸಮಸ್ಯೆ ಎದುರಾಗಿಲ್ಲ ಎಂದು ಆಡಳಿತ ಪಕ್ಷ ಮಿರೊ ನ್ಯಾಶನಲ್ ಫ್ರಂಟ್‌ನ ಸಚಿವ ತಿಳಿಸಿದ್ದಾರೆ.
ಎನ್‌ಆರ್‌ಸಿಯಲ್ಲಿ ಕೈಬಿಡಲಾಗಿರುವವರು ಪ್ರವೇಶಿಸಬಹುದಾಗಿದ್ದ ಅನೇಕ ರಸ್ತೆಗಳಲ್ಲಿ ಭದ್ರತಾ ಪಡೆಗಳು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಇಂತಹ ನೂರಾರು ಜನರು ಪೊಲೀಸರ ಕಣ್ಣಿಗೆ ಬಿದ್ದಿದ್ದು ಅವರನ್ನು ವಾಪಸ್ ಅಸ್ಸಾಂಗೆ ಕಳುಹಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಮಿಝೊರಾಂನಲ್ಲಿ ಇತರ ರಾಜ್ಯಗಳ ಜನರು ಪ್ರಯಾಣಿಸಲು ಕೇಂದ್ರ ಸರಕಾರ ಕಡ್ಡಾಯ ಮಾಡಿರುವ ಇನ್ನರ್ ಲೈನ್ ಪರ್ಮಿಟ್ ವ್ಯವಸ್ಥೆಯನ್ನು ಕಂಪ್ಯೂಟರೀಕರಣಗೊಳಿಸುವ ಮೂಲಕ ಎಲ್ಲ ಪೊಲೀಸ್ ಚೆಕ್ ಪೋಸ್ಟ್‌ಗಳಲ್ಲಿ ದಾಖಲೆಗಳನ್ನು ಪರಿಶೀಲಿಸಲು ಸಾಧ್ಯವಾಗುವಂತೆ ಮಾಡಲಾಗುವುದು ಎಂದು ಲಲ್ಚಮ್ಲಿಯಾನ ತಿಳಿಸಿದ್ದಾರೆ.