1,000 ರೂ.ಗಿಂತ ಹೆಚ್ಚು ವಿತ್ ಡ್ರಾ ಮಾಡುವಂತಿಲ್ಲ ಎಂದ ಆರ್ ಬಿಐ: ಈ ಬ್ಯಾಂಕ್ ನ ಗ್ರಾಹಕರು ಕಂಗಾಲು

Update: 2019-09-24 15:36 GMT

ಹೊಸದಿಲ್ಲಿ,ಸೆ.24: ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಮುಂಬೈ ಮೂಲದ ಪಂಜಾಬ್ ಆ್ಯಂಡ್ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಂಸಿ ಬ್ಯಾಂಕ್)ನ ವ್ಯವಹಾರಗಳ ಮೇಲೆ ಆರ್‌ಬಿಐ ಆರು ತಿಂಗಳ ನಿರ್ಬಂಧ ವಿಧಿಸಿದೆ.

ಅದರಂತೆ, ಖಾತೆದಾರರು ಬ್ಯಾಂಕ್‌ನ ತಮ್ಮ ಉಳಿತಾಯ ಖಾತೆ, ಚಾಲ್ತಿ ಖಾತೆ ಅಥವಾ ಇತರ ಯಾವುದೇ ಠೇವಣಿ ಖಾತೆಯಲ್ಲಿರುವ ಒಟ್ಟು ಮೊತ್ತದಿಂದ ಕೇವಲ ಒಂದು ಸಾವಿರ ರೂ. ಮಾತ್ರ ಹಿಂಪಡೆದುಕೊಳ್ಳಬಹುದಾಗಿದೆ. ಮಾರ್ಚ್ 2019ರ ಅಂತ್ಯಕ್ಕೆ ಪಿಎಂಸಿ ಬ್ಯಾಂಕ್, 11,617 ಕೋಟಿ ರೂ. ಠೇವಣಿ ಮತ್ತು 8,383 ಕೋಟಿ ರೂ. ಸಾಲ ನೀಡುವ ಜೊತೆಗೆ ಒಟ್ಟು 20,000 ಕೋಟಿ ರೂ. ವ್ಯವಹಾರ ನಡೆಸಿದೆ. ಆರ್‌ಬಿಐ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸಾಲ ನೀಡುವಿಕೆಯಲ್ಲಿ ಕೆಲವೊಂದು ವ್ಯತ್ಯಾಸಗಳು ಕಂಡುಬಂದಿದ್ದು ಅದನ್ನು ಪರಿಹರಿಸಲು ಬ್ಯಾಂಕ್ ಪ್ರಯತ್ನಿಸುತ್ತಿದೆ ಎಂದು ಬ್ಯಾಂಕ್‌ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಆದರೆ ವಿಷಯದ ಕುರಿತು ಹೆಚ್ಚಿನ ವಿವರಣೆ ನೀಡಲು ಅವರು ನಿರಾಕರಿಸಿದ್ದಾರೆ. ಈ ಕುರಿತು ತಿಳಿಯಲು ಬ್ಯಾಂಕ್‌ನ ಮುಖ್ಯ ಕಾರ್ಯಕಾರಿ ಜಾಯ್ ಥಾಮಸ್ ಅವರಿಗೆ ಮಾಡಿದ ಕರೆಗಳಿಗೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ನಿರ್ಬಂಧದ ಹಿನ್ನೆಲೆಯಲ್ಲಿ ಪಿಎಂಸಿ ಬ್ಯಾಂಕ್ ಆರ್‌ಬಿಐ ಅನುಮತಿಯಿಲ್ಲದೆ ಸಾಲಗಳನ್ನು ನೀಡುವ ಅಥವಾ ಪರಿಷ್ಕರಿಸುವ ಹಾಗಿಲ್ಲ. ಈ ಆದೇಶ ಸೆಪ್ಟಂಬರ್ 23, 2019ರಿಂದ ಆರಂಭವಾಗಿ ಆರು ತಿಂಗಳ ಕಾಲ ಮುಂದುವರಿಯಲಿದೆ ಎಂದು ಆರ್‌ಬಿಐ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News