ಅತ್ಯಾಚಾರ ಪ್ರಕರಣ: ಚಿನ್ಮಯಾನಂದನ ಜಾಮೀನು ತಿರಸ್ಕಾರ
ಶಾಹಜಹಾನ್‌ಪುರ (ಉತ್ತರಪ್ರದೇಶ), ಸೆ. 24: ಕಾನೂನು ವಿದ್ಯಾರ್ಥಿನಿಯ ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ಬಂಧಿತನಾಗಿರುವ ಬಿಜೆಪಿ ನಾಯಕ ಚಿನ್ಮಯಾನಂದನ ಜಾಮೀನು ಅರ್ಜಿಯನ್ನು ಉತ್ತರಪ್ರದೇಶದ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.
ಚಿನ್ಮಯಾನಂದನ ಜಾಮೀನು ಅರ್ಜಿಯನ್ನು ಶಾಹಜಹಾನ್‌ಪುರದ ಮುಖ್ಯ ನ್ಯಾಯಾಂಗ ದಂಡಾಧಿಕಾರಿಯವರು ತಿರಸ್ಕರಿಸಿದ್ದಾರೆ. ಅಲ್ಲದೆ, ಮನವಿಯನ್ನು ಸೆಷನ್ಸ್ ನ್ಯಾಯಾಲಯದಲ್ಲಿ ಸಲ್ಲಿಸಬೇಕು ಎಂದು ದಂಡಾಧಿಕಾರಿಯವರು ಹೇಳಿದ್ದಾರೆ ಎಂದು ಚಿನ್ಮಯಾನಂದನ ಪರ ವಕೀಲ ಓಂ ಸಿಂಗ್ ಹೇಳಿದ್ದಾರೆ.
ಚಿನ್ಮಯಾನಂದ ದಾಖಲಿಸಿದ ಸುಲಿಗೆ ಪ್ರಕರಣದಲ್ಲಿ ಬಂಧಿತರಾಗಿರುವ ಸಂಜಯ್, ಸಚಿನ್ ಹಾಗೂ ವಿಕ್ರಮ್ ಅವರ ಜಾನೀನು ಮನವಿಯನ್ನು ಕೂಡ ಇದೇ ನೆಲೆಯಲ್ಲಿ ನ್ಯಾಯಾಲಯ ತಿರಸ್ಕರಿಸಿದೆ. ಸಚಿನ್ ಹಾಗೂ ವಿಕ್ರಮ್‌ನನ್ನು ವಿಶೇಷ ತನಿಖಾ ತಂಡ (ಸಿಟ್) 95 ಗಂಟೆಗಳ ವಶಕ್ಕೆ ಪಡೆದುಕೊಂಡಿದೆ. ಅಲ್ಲದೆ ಅವರನ್ನು ಸುಲಿಗೆಗೆ ಬೇಡಿಕೆ ಒಡ್ಡಲು ಕರೆ ಮಾಡಲು ಬಳಸಿದ ಮೊಬೈಲ ಪತ್ತೆಯಾದ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಸುಲಿಗೆಗೆ ಕರೆ ಮಾಡಲು ಬಳಸಿದ್ದೆಂದು ಹೇಳಲಾದ ಮೊಬೈಲ್ ಫೋನ್ ಅನ್ನು ತಾವು ರಾಜಸ್ಥಾನದ ಮೆಹಂದಿಪುರ ಬಾಲಾಜಿಯ ಸಮೀಪ ಎಸೆದೆವು ಎಂದು ಆರೋಪಿಗಳು ವಿಶೇಷ ತನಿಖಾ ತಂಡಕ್ಕೆ ತಿಳಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಸುಲಿಗೆಗೆ ಸಂದೇಶ ರವಾನಿಸಿದ ಮೊಬೈಲ್ ಫೋನ್ ಎಂದು ಹೇಳಲಾದ ಚಿನ್ಮಯಾನಂದನ ವಕೀಲನ ಮೊಬೈಲ್ ಫೋನ್ ಅನ್ನು ವಿಶೇಷ ತನಿಖಾ ತಂಡ ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಿಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.