ಡಿಕೆಶಿಗೆ ಜಾಮೀನು ನಿರಾಕರಿಸಿದ ಈ.ಡಿ ನ್ಯಾಯಾಲಯ

Update: 2019-09-25 16:55 GMT

ಹೊಸದಿಲ್ಲಿ, ಸೆ. 25: ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ಬುಧವಾರ (ಸೆ.25) ತಿರಸ್ಕರಿಸಿದೆ. ಇದರಿಂದ ಡಿ.ಕೆ. ಶಿವಕುಮಾರ್ ಅವರ ನ್ಯಾಯಾಂಗ ಬಂಧನ ಮುಂದುವರಿಯಲಿದೆ. ಆದರೆ, ಡಿ.ಕೆ. ಶಿವಕುಮಾರ್ ಅವರ ಆರೋಗ್ಯದ ಬಗ್ಗೆ ಅವರ ವಕೀಲ ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಸಂಬಂಧಿತ ಅಧಿಕಾರಿಗಳಿಗೆ ಅಗತ್ಯದ ನಿರ್ದೇಶನಗಳನ್ನು ನೀಡಿದೆ.

ವಿಚಾರಣೆ ವೇಳೆ ಅಸಹಕಾರ ಹಾಗೂ ನುಣುಚಿಕೊಳ್ಳುತ್ತಿ ರುವುದಾಗಿ ಆರೋಪಿಸಿ ಜಾರಿ ನಿರ್ದೇಶನಾಲಯ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿತ್ತು. ಕೋಟಿಗಟ್ಟಲೆ ಹವಾಲಾ ಹಣ ವರ್ಗಾವಣೆ ಹಾಗೂ ತೆರಿಗೆ ವಂಚನೆ ನಡೆಸಿದ್ದಾರೆ ಎಂದು ಆರೋಪಿಸಿ ಡಿಕೆ. ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆ ಕಳೆದ ವರ್ಷ ದಾಖಲಿಸಿದ ಆರೋಪ ಪಟ್ಟಿಯ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಹಣ ವಂಚನೆ ಪ್ರಕರಣ ದಾಖಲಿಸಿತ್ತು.

ಈ ಹಿಂದೆ ಜಾರಿ ನಿರ್ದೇಶನಾಲಯದ ಕಸ್ಟಡಿ ಪೂರ್ಣಗೊಂಡ ಬಳಿಕ ನ್ಯಾಯಾಲಯ ಡಿ.ಕೆ. ಶಿವಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಅವರ ಜಾಮೀನು ಅರ್ಜಿಯ ಕುರಿತ ವಿಚಾರಣೆ ಸೆಪ್ಟಂಬರ್ 21ರಂದು ಪೂರ್ಣಗೊಂಡಿತ್ತು. ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜನ್, ಪ್ರಕರಣದ ಸಾಕ್ಷಿಗಳ ಮೇಲೆ ಡಿ.ಕೆ. ಶಿವಕುಮಾರ್ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಪ್ರತಿಪಾದಿಸಿದರು. ಅಕ್ರಮ ಆಸ್ತಿಯ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಅಕ್ರಮ ಆಸ್ತಿಯ ಬಗ್ಗೆ ಆದಾಯ ತೆರಿಗೆ ಕಾಯ್ದೆ ಕ್ರಮ ಕೈಗೊಳ್ಳುವುದಿಲ್ಲ. ಅಕ್ರಮ ಆಸ್ತಿಯನ್ನು ಕ್ರಮಬದ್ಧಗೊಳಿಸಲು ಆ ಕಾಯ್ದೆಯನ್ನು ಬಳಸಿಕೊಳ್ಳುವಂತಿಲ್ಲ ಎಂದು ಅವರು ಹೇಳಿದರು.

ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿ ಇರುವಾಗ ಪರಿಶೀಲನೆಯಲ್ಲಿರುವ ಸೊತ್ತುಗಳ ಬಗ್ಗೆ ವಿಚಾರಣೆ ನಡೆಸಿದ ಸಂದರ್ಭ ಕೇಳಿದ ಪ್ರಶ್ನೆಗಳಿಗೆ ಡಿ.ಕೆ. ಶಿವಕುಮಾರ್ ಅಪ್ರಸಕ್ತ ಉತ್ತರ ನೀಡಿದ್ದಾರೆ ಎಂದು ನಟರಾಜನ್ ಪ್ರತಿಪಾದಿಸಿದ್ದಾರೆ. ಜಾರಿ ನಿರ್ದೇಶನಾಲಯದ ವಾದಕ್ಕೆ ಪ್ರತಿವಾದ ಮಂಡಿಸಿದ ಹಿರಿಯ ಹಾಗೂ ಪ್ರತಿವಾದಿ ವಕೀಲ ಎ.ಎಂ. ಸಿಂಘ್ವಿ, ಜಾಮೀನು ಅರ್ಜಿಯನ್ನು ಈ ಹಂತದಲ್ಲಿ ಪ್ರಕರಣದ ಅರ್ಹತೆ ಆಧಾರದಲ್ಲಿ ನಿರ್ಧರಿಸಬಾರದು ಬದಲಾಗಿ ತ್ರಿವಳಿ ಪರೀಕ್ಷೆಯ ಎಂದು ನ್ಯಾಯಾಲಯವನ್ನು ಆಗ್ರಹಿಸಿದರು.

ಪುರಾವೆಗಳನ್ನು ತಿರುಚುವ ಯಾವುದೇ ಸಾಧ್ಯತೆ ಇಲ್ಲ. ಅಲ್ಲದೆ ನ್ಯಾಯಾಲಯ ಆರೋಪಿಯ ಮೇಲೆ ಅಗತ್ಯದ ಷರತ್ತುಗಳನ್ನು ವಿಧಿಸಬಹುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News