ಪೆಸಿಫಿಕ್ ದ್ವೀಪ ದೇಶಗಳಿಗೆ 1,065 ಕೋಟಿ ರೂ ಸಾಲ: ಮೋದಿ ಘೋಷಣೆ

Update: 2019-09-25 15:01 GMT

 ನ್ಯೂಯಾರ್ಕ್, ಸೆ. 25: ಪೆಸಿಫಿಕ್ ಸಾಗರದ ದ್ವೀಪ ದೇಶಗಳ ಗುಂಪಿಗೆ 150 ಮಿಲಿಯ ಡಾಲರ್ (ಸುಮಾರು 1065 ಕೋಟಿ ರೂಪಾಯಿ) ಸಾಲ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಸೌರವಿದ್ಯುತ್, ನವೀಕರಿಸಬಹುದಾದ ಇಂಧನ ಮತ್ತು ಪರಿಸರ ಸಂಬಂಧಿ ಯೋಜನೆಗಳ ಅನುಷ್ಠಾನಕ್ಕಾಗಿ ಈ ಸಾಲವನ್ನು ನೀಡಲಾಗುತ್ತಿದೆ.

ಭಾರತ-ಪೆಸಿಫಿಕ್ ದ್ವೀಪಗಳ ಅಭಿವೃದ್ಧಿಶೀಲ ದೇಶಗಳ (ಪೆಸ್‌ಐಡಿಎಸ್) ನಾಯಕರ ಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಈ ಘೋಷಣೆ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ತಮ್ಮ ಆಯ್ಕೆಯ ಕ್ಷೇತ್ರದಲ್ಲಿ ಅತಿಹೆಚ್ಚು ಪರಿಣಾಮಕಾರಿ ಅಭಿವೃದ್ಧಿ ಯೋಜನೆಯ ಜಾರಿಗಾಗಿ ಪಿಎಸ್‌ಐಡಿಎಸ್ ಸದಸ್ಯ ದೇಶಗಳಿಗೆ ಒಟ್ಟು 12 ಮಿಲಿಯ ಡಾಲರ್ (ಸುಮಾರು 85 ಕೋಟಿ ರೂಪಾಯಿ) ಅನುದಾನವನ್ನು (ಸಾಲ ಅಲ್ಲ) ಒದಗಿಸುವುದಾಗಿಯೂ ಅವರು ಘೋಷಿಸಿದ್ದಾರೆ.

ವಿಶ್ವಸಂಸ್ಥೆಯ ಮಹಾ ಸಭೆಯ 74ನೇ ವಾರ್ಷಿಕ ಅಧಿವೇಶನದ ನೇಪಥ್ಯದಲ್ಲಿ ಮಂಗಳವಾರ ನ್ಯೂಯಾರ್ಕ್‌ನಲ್ಲಿ ಈ ಸಭೆ ನಡೆಯಿತು. ವಿಶ್ವಸಂಸ್ಥೆಯ ವಾರ್ಷಿಕ ಅಧಿವೇಶನದ ನೇಪಥ್ಯದಲ್ಲಿ ಭಾರತ-ಪೆಸಿಫಿಕ್ ದ್ವೀಪಗಳ ಅಭಿವೃದ್ಧಿಶೀಲ ದೇಶಗಳ ನಾಯಕರನ್ನು ಮೋದಿ ಭೇಟಿಯಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಫಿಜಿ, ರಿಪಬ್ಲಿಕ್ ಆಫ್ ಕಿರಿಬತಿ, ರಿಪಬ್ಲಿಕ್ ಆಫ್ ಮಾರ್ಶಲ್ ಐಲ್ಯಾಂಡ್ಸ್, ಫೆಡರೇಟಡ್ ಸ್ಟೇಟ್ಸ್ ಆಫ್ ಮೈಕ್ರೊನೇಶ್ಯ, ರಿಪಬ್ಲಿಕ್ ಆಫ್ ನೌರು, ರಿಪಬ್ಲಿಕ್ ಆಫ್ ಪಾಲೌ, ಇಂಡಿಪೆಂಡೆಂಟ್ ಸ್ಟೇಟ್ ಆಫ್ ಪಪುವ ನ್ಯೂಗಿನೀ, ಇಂಡಿಪೆಂಡೆಂಟ್ ಸ್ಟೇಟ್ ಆಫ್ ಸಮೋವ, ಸೋಲೊಮನ್ ಐಲ್ಯಾಂಡ್ಸ್, ಕಿಂಗ್‌ಡಂ ಆಫ್ ಟೊಂಗ, ತುವಲು ಮತ್ತು ರಿಪಬ್ಲಿಕ್ ಆಫ್ ವನೌಟು ದೇಶಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News