×
Ad

‘ನಾನು ನನ್ನ ಚೇಂಬರ್‌ನಲ್ಲಿಯೇ ಅದನ್ನು ಅನುಭವಿಸುತ್ತಿದ್ದೇನೆ ’

Update: 2019-09-27 21:07 IST

ಹೊಸದಿಲ್ಲಿ,ಸೆ.27: ಲೈಂಗಿಕ ಕಿರುಕುಳ ಕುರಿತು ಟ್ವೀಟ್‌ವೊಂದಕ್ಕೆ ಪ್ರತಿಕ್ರಿಯಿಸಿರುವ ಹಿರಿಯ ಐಎಎಸ್ ಅಧಿಕಾರಿ,ಉತ್ತರ ದಿಲ್ಲಿ ಮಹಾನಗರ ಪಾಲಿಕೆಯ ಆಯುಕ್ತೆ ವರ್ಷಾ ಜೋಶಿ ಅವರು,‘ ತಾವೇನು ಮಾಡುತ್ತಿದ್ದೇವೆ ಎನ್ನವುದು ಗೊತ್ತಿಲ್ಲದ ’ ಪುರುಷರಿಂದ ತನ್ನ ಚೇಂಬರ್‌ನಲ್ಲಿ ಸ್ಥಳಾವಕಾಶ ಉಲ್ಲಂಘನೆಯ ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ.

ದಿಲ್ಲಿಯ ಬಡಾವಣೆಯೊಂದರಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಕುರಿತು ಪೋಸ್ಟ್‌ವೊಂದನ್ನು ವರ್ಷಾರಿಗೆ ಟ್ಯಾಗ್ ಮಾಡಿದ್ದ ಮಹಿಳೆಯೋರ್ವರು,‘ಈ ರಸ್ತೆಯಲ್ಲಿ ಓಡಾಡುವುದು ಮಹಿಳೆಯರಿಗೆ ಕಷ್ಟವಾಗಿದೆ. ಇಲ್ಲಿ ಕುಳಿತುಕೊಂಡಿರುವ ಜನರು ಮಹಿಳೆಯರನ್ನು ಕಾಮದೃಷ್ಟಿಯಿಂದ ನೋಡುತ್ತಾರೆ. ದಿನವಿಡೀ ಈ ಜನರು ಹುಕ್ಕಾ ಸೇದುತ್ತಿರುತ್ತಾರೆ,ಇಸ್ಪೀಟ್ ಆಡುತ್ತಿರುತ್ತಾರೆ. ಈ ವಿಷಯವನ್ನು ನಾನು ಹಿಂದೆಯೂ ಎತ್ತಿದ್ದೆ,ಆದರೆ ಈವರೆಗೂ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ. ನಿಮ್ಮ ಜನರಿಗೆ ನೆರವಾಗಲು ತಕ್ಷಣ ಕ್ರಮ ಕೈಗೊಳ್ಳಿ ’ ಎಂದು ಟ್ವೀಟಿಸಿದ್ದರು.

ಪೋಸ್ಟ್ ಅನ್ನು ಮರುಟ್ವೀಟಿಸಿರುವ ವರ್ಷಾ,‘ಇದು ವಾಸ್ತವದಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕಾದ ವಿಷಯವಾಗಿದ್ದು,ಉತ್ತರ ಭಾರತದಾದ್ಯಂತ ಮಹಿಳೆಯರು ದಿನದ 24 ಗಂಟೆಯೂ ಎದುರಿಸುತ್ತಿರುವ ಸವಾಲು ಆಗಿದೆ. ನನ್ನದೇ ಚೇಂಬರ್‌ನಲ್ಲಿ ನಾನದನ್ನು ಅನುಭವಿಸುತ್ತಿದ್ದೇನೆ. ತಾವೇನು ಮಾಡುತ್ತಿದ್ದೇವೆ ಎನ್ನುವುದು ಗೊತ್ತಿರದ ಪುರುಷರಿಂದ ನನ್ನ ಚೇಂಬರ್‌ನಲ್ಲಿ ದುರ್ನಡತೆ,ಜಾಗದ ಉಲ್ಲಂಘನೆಯನ್ನು ಎದುರಿಸುತ್ತಿದ್ದೇನೆ. ಪರಿಹಾರಗಳೇನು? ’ಎಂದು ಯಾವುದೇ ಸಂಸ್ಥೆ ಅಥವಾ ವ್ಯಕ್ತಿಯನ್ನು ಹೆಸರಿಸದೆ ನೋವು ತೋಡಿಕೊಂಡಿದ್ದಾರೆ.

ಪರಿಹಾರವನ್ನು ಕೋರಿರುವ ಜೋಶಿಯವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬಳಕೆದಾರರೋರ್ವರು,‘ನೆರೆಹೊರೆಯ ಮಹಿಳೆಯರು ಮನೆಗಳಿಂದ ಹೊರಗೆ ಬಂದು ಸಾರ್ವಜನಿಕ ಸ್ಥಳದಲ್ಲಿ ಸೇರುವಂತೆ ಮಾತನಾಡುತ್ತ,ನಗೆಯಾಡುತ್ತ ಅಥವಾ ತಮ್ಮ ಆಯ್ಕೆಯ ಕೆಲಸವನ್ನು ಮಾಡುತ್ತಿರುವಂತೆ ನಾವು ಮಾಡಲು ಸಾಧ್ಯವಾದರೆ ಕೆಲವು ಬದಲಾವಣೆೆಗಳನ್ನು ನಾವು ನಿರೀಕ್ಷಿಸಬಹುದು. ಜನರ ವರ್ತನೆಯನ್ನು ಬದಲಿಸುವುದು ಕಷ್ಟ ಎನ್ನುವುದು ನನಗೆ ಗೊತ್ತು,ಆದರೆ ಒಂದು ಬಾರಿಗೆ ಒಂದು ಕಡೆಯಲ್ಲಿ ಈ ಪ್ರಯತ್ನವನ್ನು ನಾವು ಮಾಡಬಹುದಾಗಿದೆ ’ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News