ಶೇ.75 ಯುವಕರು 21ರ ಹರೆಯಕ್ಕೂ ಮೊದಲು ಮದ್ಯಪಾನ ಮಾಡುತ್ತಾರೆ: ಸಮೀಕ್ಷೆ
ಮುಂಬೈ,ಸೆ.27: ಭಾರತದ ಶೇ.75 ಯುವಕರು 21ರ ಹರೆಯಕ್ಕೂ ಮೊದಲೇ ಮದ್ಯಪಾನ ಮಾಡುತ್ತಾರೆ ಎಂದು ಬಹುನಗರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಒಪ್ಪಿಕೊಂಡಿದ್ದಾರೆ. ಭಾರತದ ಕಾನೂನಿನಂತೆ ಆಲ್ಕೊಹಾಲ್ ಸೇವಿಸಲು 21 ವರ್ಷ ವಯಸ್ಸಾಗಿರಬೇಕು. ದಕ್ಷಿಣ ಮುಂಬೈಯ ಸಂತ ಕ್ಸೇವಿಯರ್ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಅವಕಾಶ್ ಜಾದವ್ ಅವರ ಮಾರ್ಗದರ್ಶನದಲ್ಲಿ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ಈ ಸಮೀಕ್ಷೆಯನ್ನು ನಡೆಸಿದ್ದಾರೆ.
ಸಮೀಕ್ಷೆಯ ವರದಿಯನ್ನು ಮಾದಕದ್ರವ್ಯ ನಿಯಂತ್ರಣ ಮಂಡಳಿ (ಎನ್‌ಸಿಬಿ) ವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಭೂಮೇಶ್ ಅಗರ್ವಾಲ್ ಅವರಿಗೆ ಹಸ್ತಾಂತರಿಸಲಾಗಿದೆ. ಮುಂಬೈ, ಪುಣೆ, ದಿಲ್ಲಿ, ಕೋಲ್ಕತಾ, ರಾಜಸ್ಥಾನ ಮುಂತಾದ ನಗರಗಳ 16ರಿಂದ 21ರ ಹರೆಯದ 1,000 ಯುವಕರನ್ನು ಸಮೀಕ್ಷೆಯಲ್ಲಿ ಪ್ರಶ್ನಿಸಲಾಗಿದೆ. ಝೆಕ್ ಗಣರಾಜ್ಯದ ರಾಜಧಾನಿ ಪ್ರೇಗ್ ಮತ್ತು ಮಧ್ಯ ಯೂರೋಪ್ ದೇಶ ಹಂಗೇರಿಯ ಯುವಕರನ್ನೂ ಈ ಸಮೀಕ್ಷೆ ಒಳಗೊಂಡಿದೆ. ಶೇ.75 ಯುವಕರು 21ರ ಹರೆಯಕ್ಕೂ ಮೊದಲೇ ಮದ್ಯಪಾನ ಮಾಡಿದ್ದರೆ, ಶೇ.47 ಯುವಕರು ಸಿಗರೇಟ್ ಸೇದಲು ಆರಂಭಿಸಿದ್ದಾರೆ. ಶೇ.20 ಯುವಕರು ಮಾದಕ ದ್ರವ್ಯ ಸೇವಿಸಿದ್ದಾರೆ ಮತ್ತು ಶೇ.30 ಯುವಕರು ಹುಕ್ಕ ಸೇದಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.
16ರಿಂದ 18ರ ನಡುವಿನ ವಯಸ್ಸಿನ ಶೇ.88 ಯುವಕರು ಒಂದಿಲ್ಲೊಂದು ಚಟವನ್ನು ಪ್ರಯತ್ನಿಸಿದ್ದಾರೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಗೆಳೆಯರ ಒತ್ತಡ ಮತ್ತು ಉದ್ದೀಪನ ವಸ್ತುಗಳು ಸುಲಭವಾಗಿ ಸಿಗುವುದು ಇತ್ಯಾದಿ, ಯುವಕರು ಬಹುಬೇಗನೆ ಇಂತಹ ಚಟಕ್ಕೆ ಸಿಲುಕಲು ಇರುವ ಕಾರಣಗಳಲ್ಲಿ ಕೆಲವಾಗಿವೆ ಎಂದು ವರದಿ ತಿಳಿಸಿದೆ. ಶೇ.17 ಯುವಕರು, ಈ ಚಟಗಳಿಂದ ಹೊರಬರಲು ನಾವು ಹೊರಗಿನವರ ಸಹಾಯ ಪಡೆದುಕೊಳ್ಳಲಿಲ್ಲ ಎಂದು ತಿಳಿಸಿದ್ದರೆ ಶೇ.83 ಯುವಕರು, ಈ ಸಮಸ್ಯೆಯಿಂದ ಹೊರಬರಲು ಎಲ್ಲಿ ಮತ್ತು ಹೇಗೆ ಸಹಾಯ ಪಡೆಯಬಹುದು ಎನ್ನುವುದು ತಿಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ.