ಬ್ಯಾಂಕಿನಲ್ಲಿಯ ಹಣ ಸುರಕ್ಷಿತವೆಂದು ಸರಕಾರ ಹೇಳಿತ್ತು, ಎಂತಹ ಸುರಕ್ಷತೆ?
ಮುಂಬೈ,ಸೆ.27: ಹಿಂಪಡೆಯುವ ಹಣದ ಮೊತ್ತದ ಮೇಲೆ ಆರ್‌ಬಿಐ ಮಿತಿಯನ್ನು ಹೇರಿದ ಬಳಿಕ ಕಂಗಾಲಾಗಿರುವ ಪಂಜಾಬ್ ಆ್ಯಂಡ್ ಮಹಾರಾಷ್ಟ್ರ ಕೋ-ಆಪರೇಟಿವ್ (ಪಿಎಂಸಿ) ಬ್ಯಾಂಕಿನ ಗ್ರಾಹಕರು ಮುಂಬೈನ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದಾರೆ. ತಮ್ಮದಲ್ಲದ ತಪ್ಪಿಗೆ ತಾವು ಕಷ್ಟ ಪಟ್ಟು ಗಳಿಸಿದ್ದ ಹಣವನ್ನು ಪಡೆಯದಂತೆ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ಬೆಟ್ಟು ಮಾಡಿದ್ದಾರೆ.
ಜನರು ಬ್ಯಾಂಕುಗಳಲ್ಲಿ ಹಣವನ್ನಿಡಬೇಕು ಎಂದು ಸರಕಾರವು ಬಯಸಿದರೆ ಅದು ಹಣದ ಸುರಕ್ಷತೆಯ ಬಗ್ಗೆ ಖಾತರಿ ನೀಡಬೇಕು ಎಂದು ಹೇಳಿದ ಮನೆಗೆಲಸ ಮಾಡಿ ಕುಟುಂಬವನ್ನು ನಿರ್ವಹಿಸುತ್ತಿರುವ ಸಿಮ್ರಾನ್,‘ ನಾವು ಹಣವನ್ನು ಮನೆಯಲ್ಲಿಟ್ಟುಕೊಂಡರೆ ಅದು ಕಪ್ಪುಹಣವಾಗುತ್ತದೆ ಮತ್ತು ಬ್ಯಾಂಕಿನಲ್ಲಿಟ್ಟರೆ ಅದು ಸುರಕ್ಷಿತವಾಗಿರುತ್ತದೆ ಎಂದು ಸರಕಾರವು ಹೇಳುತ್ತದೆ. ಇದು ಯಾವ ಸೀಮೆಯ ಸುರಕ್ಷತೆ? ನನ್ನ ಉಳಿತಾಯದ ಹಣ 70,000 ರೂ. ಬ್ಯಾಂಕಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಆರು ತಿಂಗಳಿಗೊಮ್ಮೆ 1,000 ರೂ.ನೀಡುತ್ತೇವೆ ಎನ್ನುತ್ತಾರೆ. ನಾನೀಗ ಹಣಕ್ಕೇನು ಮಾಡಲಿ? ಹಣ ಸಂಪಾದಿಸಲು ನಾನು ತುಂಬ ಕಷ್ಟಪಟ್ಟಿದ್ದೇನೆ ’ಎಂದರು.
‘ ಆರು ತಿಂಗಳಿಗೊವ್ಮೆು 1,000 ರೂ,ಪಡೆದು ನಾನು ಹೇಗೆ ಬದುಕುಳಿಯಬೇಕು ಎನ್ನುವುದನ್ನು ಆರ್‌ಬಿಐ ಹೇಳಲಿ ’ಎಂದವರು ದಿಲ್ಲಿಯ ನಿವೃತ್ತ ಶಿಕ್ಷಕಿ ಅನುರಾಧಾ ಸೇನ್. ಅವರು ಪಿಎಂಸಿಯಲ್ಲಿ 20 ಲ.ರೂ.ಠೇವಣಿಯಿರಿಸಿದ್ದು,ಅದರ ಬಡ್ಡಿಯಲ್ಲೇ ಜೀವನ ಸಾಗಿಸುತ್ತಿದ್ದಾರೆ.
ಮಂಗಳವಾರ ಆರ್‌ಬಿಐ ಆರು ತಿಂಗಳಿಗೊಮ್ಮೆ 1,000 ರೂ.ಗೂ ಹೆಚ್ಚಿನ ಹಣ ಹಿಂಪಡೆಯುವಿಕೆಯ ಮೇಲೆ ನಿರ್ಬಂಧ ವಿಧಿಸಿತ್ತು. ಇದರಿಂದ ಆಕ್ರೋಶಗೊಂಡ ಗ್ರಾಹಕರು ಪಿಎಂಸಿ ಶಾಖೆಗಳ ಎದುರು ಪ್ರತಿಭಟನೆಯನ್ನು ನಡೆಸಿದ್ದರು. ಗುರುವಾರ ಆರ್‌ಬಿಐ ಹಿಂಪಡೆಯುವಿಕೆ ಮಿತಿಯನ್ನು 10,000 ರೂ.ಗೆ ಹೆಚ್ಚಿಸುವ ಮೂಲಕ ಕೊಂಚ ನೆಮ್ಮದಿಯನ್ನು ನೀಡಿದೆ.
ಬ್ಯಾಂಕು ಉದ್ಯಮ ಸಮೂಹವೊಂದಕ್ಕೆ ಸಾಲ ನೀಡಿ ತಮ್ಮ ಹಣವನ್ನು ಅಪಾಯಕ್ಕೆ ಸಿಲುಕಿಸಿದ್ದೇಕೆ ಎಂದು ಕುಪಿತ ಗ್ರಾಹಕರು ಪ್ರಶ್ನಿಸುತ್ತಿದ್ದಾರೆ.
ಹೌಸಿಂಗ್ ಡೆವಲಪ್‌ಮೆಂಟ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಲಿ.(ಎಚ್‌ಡಿಐಲ್) ಪಿಎಂಸಿ ಬ್ಯಾಂಕಿನಿಂದ ತಾನು ಪಡೆದಿದ್ದ 2,500 ಕೋ.ರೂ.ಗಳ ಸಾಲವನ್ನು ಮರುಪಾವತಿಸಲಾಗದೆ ಸುಸ್ತಿದಾರನಾಗಿದೆ. ಇದನ್ನು ತನ್ನ ವಾರ್ಷಿಕ ವರದಿಯಲ್ಲಿ ಬ್ಯಾಂಕು ಉಲ್ಲೇಖಿಸಿಲ್ಲ ಮತ್ತು ಕಂಪನಿಯನ್ನು ದಿವಾಳಿ ನ್ಯಾಯಾಲಯಕ್ಕೆ ಎಳೆಯಲಾಗುತ್ತಿದ್ದರೂ ಅದಕ್ಕೆ ಸಾಲ ನೀಡಿಕೆಯನ್ನು ಮುಂದುವರಿಸಿತ್ತು.
ಎಚ್‌ಡಿಐಎಲ್ ಕಳೆದ 30 ವರ್ಷಗಳಿಂದಲೂ ನಮೊಂದಿಗೆ ವ್ಯವಹರಿಸುತ್ತಿದೆ. ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಸಾಲಪಾವತಿ ಅದಕ್ಕೆ ಕಠಿಣವಾಗುತ್ತಿದೆ. ಇದೊಂದೇ ಸಮಸ್ಯೆ ಎಂದು ಬ್ಯಾಂಕಿನ ಎಂ.ಡಿ.ಜಾಯ್ ಥಾಮಸ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಇತ್ತ ತನಿಖೆಯು ಮುಂದುವರಿದಿರುವಂತೆ ಪಿಎಂಸಿಯ 12 ನಿರ್ದೇಶಕರು ಮತ್ತು ಮಹಾರಾಷ್ಟ್ರದ ಆಡಳಿತ ಬಿಜೆಪಿ ನಡುವಿನ ನಂಟು ಬಹಿರಂಗಗೊಳ್ಳುತ್ತಿದೆ. ಮೂರು ಅವಧಿಗೆ ನಿರ್ದೇಶಕರಾಗಿರುವ ಎಸ್.ರಾಜನೀತ್ ಸಿಂಗ್ ಅವರು ಬಿಜೆಪಿ ಶಾಸಕ ತಾರಾ ಸಿಂಗ್ ಅವರ ಪುತ್ರರಾಗಿದ್ದಾರೆ.
ತಾನು ಶಾಸಕರ ಪುತ್ರನಾಗಿರುವುದಕ್ಕೂ ಈ ವಿಷಯಕ್ಕೂ ಸಂಬಂಧವಿಲ್ಲ. ಇದೆಲ್ಲ ಚುನಾವಣೆಗಾಗಿ ಪ್ರತಿಪಕ್ಷಗಳ ಆರೋಪಗಳಾಗಿವೆ. ಬ್ಯಾಂಕಿನ ನಿರ್ದೇಶಕರ ತಪ್ಪುಗಳೇನೂ ಇಲ್ಲ ಎಂದು ಸಿಂಗ್ ಸಮಜಾಯಿಷಿ ನೀಡಿದ್ದಾರೆ.