ಗಾಂಧೀಜಿ ಬಗ್ಗೆ ಭಗತ್‌ಸಿಂಗ್ ದೃಷ್ಟಿಕೋನ

Update: 2019-09-27 18:30 GMT

ಸ್ವಾತಂತ್ರ ಹೋರಾಟದಲ್ಲಿ ಗಾಂಧೀಜಿ ಒಂದು ತುದಿಯಾದರೆ ಭಗತ್‌ಸಿಂಗ್ ಇನ್ನೊಂದು ತುದಿ. ಇಬ್ಬರ ಗುರಿ ಒಂದೇ ಆದರೂ ಮಾರ್ಗಗಳು ಭಿನ್ನ. ಮೊದಲ ಬಾರಿಗೆ ಗಾಂಧೀಜಿ ಮತ್ತು ಭಗತ್‌ಸಿಂಗ್ ಭೇಟಿಯಾದಾಗ, ಗಾಂಧೀಜಿಗೆ 59ವರ್ಷ: ಭಗತ್‌ಗೆ 21ವರ್ಷ. ಗಾಂಧೀಜಿಯವರಲ್ಲಿ ಶಾಂತಿ ಮತ್ತು ಸಾವಧಾನಗಳು ಎದ್ದು ಕಾಣುತ್ತಿದ್ದರೆ, ಭಗತ್‌ಸಿಂಗ್ ಅವರಲ್ಲಿ ಯೌವನ ಸಹಜವಾದ ಹುಮ್ಮಸ್ಸು ಕೇಕೆ ಹಾಕುತ್ತಿತ್ತು. ಗಾಂಧೀಜಿ ಅವರದು ಅಹಿಂಸಾಮಾರ್ಗ; ಭಗತ್‌ಸಿಂಗ್ ಅವರದು ಕ್ರಾಂತಿಯ ಮಾರ್ಗ. ಕ್ರಾಂತಿಯೆಂದರೆ ಹಿಂಸೆ, ರಕ್ತದ ಚೆಲ್ಲಾಟ, ಜೀವಗಳ ಬಲಿ ಎಂದು ಭಗತ್ ಭಾವಿಸಿರಲಿಲ್ಲ. ಬಾಂಬ್ ತಯಾರಿಕೆಯಲ್ಲಿ ತರಬೇತಿಯನ್ನು ಪಡೆದಿದ್ದರೂ ಭಗತ್‌ಸಿಂಗ್ ಬಾಂಬ್‌ಗಳನ್ನು ದೇಶದ ತುಂಬಾ ಸ್ಫೋಟಿಸಿ ಭಯವನ್ನು ಹುಟ್ಟುಹಾಕಿ, ಜೀವಗಳ್ನು ಬಲಿಕೊಟ್ಟು, ಸ್ವಾತಂತ್ರವನ್ನು ಪಡೆಯಬೇಕೆಂದು ಎಂದೂ ಹಂಬಲಿಸಲಿಲ್ಲ. ಮನುಷ್ಯನ ಜೀವಕ್ಕೆ ತೀರ ಬೆಲೆ ಕೊಡುತ್ತಿದ್ದರು ಭಗತ್‌ಸಿಂಗ್, ಅದನ್ನು ‘ಅತ್ಯಂತ ಪವಿತ್ರ’ ಎಂದು ಭಾವಿಸಿದರು. ಸ್ವಾತಂತ್ರ ಹೋರಾಟಕ್ಕೆ ಧೈರ್ಯ ಮತ್ತು ತ್ಯಾಗಗಳು ಅತ್ಯಂತ ಅಗತ್ಯ ಎಂದು ಗಾಂಧೀಜಿ ಭಾವಿಸಿದ್ದರೆ ಭಗತ್‌ಸಿಂಗ್ ಅವರದೂ ಇದೇ ನಂಬಿಕೆಯೇ. ಈ ಹೋರಾಟದಲ್ಲಿ ತಮ್ಮಂಥವರ ಬಲಿದಾನ ಅನಿವಾರ್ಯ ಎಂದು ಭಾವಿಸಿದ್ದ ಭಗತ್‌ಸಿಂಗ್ ಗಲ್ಲಿಗೇರುವ ಧೈರ್ಯವನ್ನು ತೋರಿಸಿದವರು.

ಗಾಂಧಿಯವರಲ್ಲಾಗಲೀ, ಅವರ ಅಹಿಂಸಾ ತತ್ವದಲ್ಲಾಗಲೀ ಭಗತ್‌ಸಿಂಗ್‌ಗೆ ಅಷ್ಟಾಗಿ ವಿಶ್ವಾಸವಿರಲಿಲ್ಲ. ಬಲವಂತವಾಗಿ ದಬ್ಬುವವರೆಗೆ ಬ್ರಿಟಿಷರು ಕಾಲ್ತೆಗೆಯುವುದಿಲ್ಲ. ಸ್ವಾತಂತ್ರವನ್ನು ಬ್ರಿಟಿಷರಿಂದ ಕಿತ್ತು ಕೊಳ್ಳಬೇಕು, ಸ್ವಾತಂತ್ರ ಆಕಾಶದಿಂದ ಬೀಳುವುದಿಲ್ಲ. ಹತ್ತು ವರ್ಷಗಳ ಹಿಂದೆ ಬ್ರಿಟಿಷರ ವಿರುದ್ಧ ಆರಂಭಿಸಿದ್ದ ಅಸಹಕಾರ ಚಳವಳಿ, ಕಾಯ್ದೆಭಂಗ ಚಳವಳಿಗಳನ್ನು ಹಿಂದೆಗೆದುಕೊಂಡದ್ದಕ್ಕಾಗಿ ಭಗತ್‌ಸಿಂಗ್ ಗಾಂಧಿಯನ್ನು ಕ್ಷಮಿಸಿರಲಿಲ್ಲ.

1920ರ ನವೆಂಬರ್‌ನಲ್ಲಿ ಕಾಂಗ್ರೆಸ್ ಸಭೆಯಲ್ಲಿ ಗಾಂಧಿ ಅಸಹಕಾರ ಚಳವಳಿಯ ಕರೆ ನೀಡಿದ್ದರು. ಈ ಕರೆಗೆ ಓಗೊಟ್ಟು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳನ್ನು, ವಕೀಲರು ನ್ಯಾಯಾಲಯಗಳನ್ನು, ವೈದ್ಯರು ಆಸ್ಪತ್ರೆಗಳನ್ನು ತೊರೆದಿದ್ದರು. ಸರಕಾರಿ ನೌಕರರು ತಮ್ಮ ತಮ್ಮ ಹುದ್ದೆಗಳನ್ನು ತೊರೆದಿದ್ದರು. ದೇಶಾದ್ಯಂತ ಗಾಂಧಿಗೆ ಬೆಂಬಲ ವ್ಯಕ್ತವಾಗಿತ್ತು. 30,000ಕ್ಕೂ ಹೆಚ್ಚು ಜನ ಜೈಲು ಸೇರಿದ್ದರು. ವಿದೇಶಿ ವಸ್ತುಗಳಿಗೆ ಬಹಿಷ್ಕಾರ ಹಾಕಲಾಗಿತ್ತು. ಬರ್ಮಿಂಗ್‌ಹ್ಯಾಂ ಮತ್ತು ಲ್ಯಾಂಕಾಷೈರ್‌ಗಳಿಂದ ಆಮದಾಗುತ್ತಿದ್ದ ರಾಶಿ ರಾಶಿ ವಿದೇಶಿ ಬಟ್ಟೆಗಳಿಗೆ ಬೆಂಕಿ ಕೊಟ್ಟು ಆಕ್ರೋಶ ತೋರಿಸಲಾಗಿತ್ತು. ವಿದೇಶಿ ಬಟ್ಟೆಗಳ ವ್ಯಾಮೋಹ ವಿದೇಶಿ ದಬ್ಬಾಳಿಕೆಯನ್ನು ತಂದಿದೆ ಎಂದು ಗಾಂಧಿ ಹೇಳಿದ್ದರು. ದೇಶದಲ್ಲಿ ನಡೆಯುವ ಯಾವುದೇ ಅಹಿಂಸಾತ್ಮಕ ಚಟುವಟಿಕೆಗಳಲ್ಲಿ ತಾನು ತಲೆ ಹಾಕುವುದಿಲ್ಲ ಎಂಬ ಸ್ಪಷ್ಟ ನೀತಿಯೊಂದನ್ನು ಬ್ರಿಟಿಷರು ಘೋಷಿಸಬೇಕೆಂದು ಗಾಂಧಿ ಬಯಸಿದ್ದರು. ಆದರೆ ಅದನ್ನು ಬ್ರಿಟಿಷರು ಮಾಡಲಿಲ್ಲ. ವಾಸ್ತವವಾಗಿ ಅಸಹಕಾರ ಚಳವಳಿ ಭಾರತೀಯರು ಬ್ರಿಟಿಷರ ವಿರುದ್ಧ ಸಾರಿದ ಅತ್ಯಂತ ದೊಡ್ಡ ಅಹಿಂಸಾತ್ಮಕ ಚಳವಳಿ.

 ಇಷ್ಟಾದರೂ, ಗಾಂಧಿ ಈ ಚಳವಳಿಯನ್ನೂ ಹಿಂದಕ್ಕೆ ತೆಗೆದುಕೊಂಡರು. ಉತ್ತರ ಪ್ರದೇಶದ ಗೋರಖ್‌ಪುರದ ಬಳಿಯ ಚೌರಿಚೌರದ ಗ್ರಾಮಸ್ಥರು ಹಿಂಸಾಚಾರಕ್ಕೆ ತೊಡಗಿದ್ದನ್ನು ಗಾಂಧಿ ಒಪ್ಪಲಿಲ್ಲ. 1921ರ ಫೆಬ್ರವರಿ 12ರಂದು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಅವರು ಮೆರವಣಿಗೆ ನಡೆಸಿದರು. ಮೆರವಣಿಗೆ ಇನ್ನೇನು ಮುಕ್ತಾಯಗೊಂಡಿತು ಎನ್ನುವಾಗ ಪೊಲೀಸರು ಮೆರವಣಿಗೆಗಾರರನ್ನು ಗೇಲಿ ಮಾಡಿದರು. ಅದು ಪ್ರತೀಕಾರಕ್ಕೆ ಎಡೆಮಾಡಿಕೊಟ್ಟಿತು. ಅಲ್ಲಿದ್ದ 23 ಜನ ಪೊಲೀಸರು ಮೆರವಣಿಗೆ ಮುಗಿಸಲು ಆಜ್ಞೆ ಮಾಡಿದರು. ಆದರೆ ಮೆರವಣಿಗೆಗಾರರು ಇದಕ್ಕೊಪ್ಪಲಿಲ್ಲ. ಶಾಂತಿಯುತವಾಗಿ ಆದರೆ ದೃಢವಾಗಿ ನಿಂತೇ ಇದ್ದರು. ಸಿಟ್ಟಿಗೆದ್ದ ಪೊಲೀಸರು ಗುಂಡು ಹಾರಿಸುತ್ತಲೇ ಇದ್ದರು. ಇದರಿಂದ ಮೂವರು ಸತ್ತರು; ಅನೇಕರು ಗಾಯಗೊಂಡರು. ರೊಚ್ಚಿಗೆದ್ದ ಗುಂಪು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿತು. ಠಾಣೆಯಲ್ಲಿದ್ದ ಪೊಲೀಸರು ಜೀವಂತವಾಗಿ ಬೆಂದುಹೋದರು; ಇಲ್ಲವೇ ಅವರನ್ನು ಬೆಂಕಿಗೆ ಎಸೆಯಲಾಯಿತು. ಗಾಂಧಿ ಚಳವಳಿಯನ್ನು ಹಿಂದಕ್ಕೆ ತೆಗೆದುಕೊಂಡರು. ಆದರೆ ಪೊಲೀಸ್ ವರ್ತನೆಯನ್ನು ಖಂಡಿಸುವ ಒಂದೇ ಒಂದು ಮಾತನ್ನೂ ಆಡಲಿಲ್ಲ.

ಯಾವ ಕ್ರಾಂತಿಕಾರಿಯೂ ಇಂಥದನ್ನು ಮಾಡಲಾರ; ಇಂಥ ಘಟನೆಗಳು ದಂಗೆಯ ಸಾರ. ಅವರಿಗೆ ಅವರದೇ ಆದ ತರ್ಕ ಇರುತ್ತದೆ; ಅವರದೇ ಆದ ರಾಜಕೀಯ ಮಂಥನವಿರುತ್ತದೆ. ಅವರನ್ನು ತಡೆಯುವುದು ಹರಡುತ್ತಿರುವ ಸಮರಾಗ್ನಿಯ ಮೇಲೆ ತಣ್ಣೀರು ಸುರಿದಂತೆ. ರಾಷ್ಟ್ರಮುಕ್ತಿಯ ಹೋರಾಟದಲ್ಲಿ ತೊಡಗಿರುವಾಗ ಎಲ್ಲವೂ ನ್ಯಾಯಸಮ್ಮತವಾದದ್ದೇ. ಶತ್ರುವನ್ನು ಓಡಿಸಲು ಇದ್ದಂಥ ಬಹುದೊಡ್ಡ ಅವಕಾಶವನ್ನು ಭಾರತ ಕಳೆದುಕೊಂಡಿತೆಂದು ಭಗತ್‌ಸಿಂಗ್‌ಗೆ ಅನ್ನಿಸಿತು. ಇವತ್ತು ಸಾಧ್ಯವಾದದ್ದು ನಾಳೆ ಸಾಧ್ಯವಾಗದೇ ಹೋಗಬಹುದು.

ಒಂದೇ ಒಂದು ಹೊಡೆತದಿಂದ ಚಳವಳಿಯನ್ನು ಚಿಂದಿಚಿಂದಿ ಮಾಡಿದ ಗಾಂಧಿಯ ರಾಜಕೀಯ ತಂತ್ರವಾಗಲೀ ಅಥವಾ ನೈತಿಕ ಮಾರ್ಗವಾಗಲೀ ತನಗೆ ತಿಳಿಯುವುದಿಲ್ಲ ಎಂದು ಭಗತ್ ತನ್ನ ತಂದೆಗೆ ಹೇಳಿದರು. ಅಹಿಂಸೆ ಒಂದು ಹಂತದವರೆಗೆ ಸರಿ. ಜನಪ್ರಿಯ ಪ್ರತಿಕ್ರಿಯೆ ರೂಪಿಸಲು ಅದು ನೆರವಾಗಿದೆ. ಆದರೆ ಜನಪ್ರಿಯ ಚಳವಳಿಯೊಂದು ತನ್ನ ಉತ್ತುಂಗ ಸ್ಥಿತಿಯಲ್ಲಿದ್ದಾಗ ಅದಕ್ಕೆ ಮಾರಣಾಂತಿಕ ಪೆಟ್ಟುಕೊಟ್ಟ ಕೃತ್ಯದ ನೈತಿಕತೆಯನ್ನಾಗಲೀ ಅಥವಾ ತಂತ್ರವನ್ನಾಗಲೀ ಭಗತ್‌ಸಿಂಗ್ ಅರ್ಥಮಾಡಿಕೊಳ್ಳಲಿಲ್ಲ; ಮೆಚ್ಚಲಿಲ್ಲ.

ಮೃದುವಾದ ವಿಧಾನಗಳಿಂದ ಪರಕೀಯ ಆಳ್ವಿಕೆಯನ್ನು ಪರಾಭವಗೊಳಿಸಲು ಸಾಧ್ಯವಿಲ್ಲ. ಅದಕ್ಕೆ ವಜ್ರಮುಷ್ಟಿಯೇ ಬೇಕಾಗುತ್ತದೆ. ಆಗಾಗ ಇಂಥ ವಿಧಾನ ಅನಿವಾರ್ಯ. ಆಕ್ರಮಣಕಾರಿಯಾಗಿ ಬಳಸಿದ ಶಕ್ತಿಯೇ ಹಿಂಸೆ; ಇದನ್ನು ನೈತಿಕವಾಗಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಇದನ್ನು ನ್ಯಾಯಸಮ್ಮತ ಉದ್ದೇಶಕ್ಕಾಗಿ ಬಳಸಿಕೊಂಡಾಗ ಇದಕ್ಕೆ ನೈತಿಕ ಸಮರ್ಥನೆ ಬರುತ್ತದೆ.

ತಪ್ಪು ವಿಧಾನಗಳಿಂದ ಸರಿಯಾದ ಫಲಿತಾಂಶಗಳು ದೊರೆಯುವುದಿಲ್ಲ ಎಂಬ ಗಾಂಧಿಯವರ ಅಭಿಪ್ರಾಯವನ್ನು ಭಗತ್‌ಸಿಂಗ್ ಒಪ್ಪಿರಲಿಲ್ಲ. ಗುರಿಯೇ ಮುಖ್ಯ. ಜನತೆ ಸ್ವಾತಂತ್ರವನ್ನು ಮರಳಿ ಪಡೆದರೆ, ಆಗ ಜನ ಅನುಸರಿಸಿದ ಮಾರ್ಗವನ್ನು ಸಮರ್ಥಿಸಬಹುದು.

ಗಾಂಧಿಯವರ ಅಹಿಂಸೆ ನಿಷ್ಕ್ರಿಯತೆಗೆ ಕ್ಷಮೆ ಕೋರಿಕೆ ಮಾತ್ರ ಎಂದು ಭಗತ್‌ಸಿಂಗ್ ತನ್ನ ತಂದೆಗೆ ಹೇಳಿದರು. ಅದು ಹೇಡಿತನಕ್ಕೊಂದು ಮುಸುಕು. ಗಾಂಧಿಯವರ ನಾಯಕತ್ವದಲ್ಲಾಗಲೀ ಅಥವಾ ಅವರ ಅಹಿಂಸಾ ವಿಧಾನದಲ್ಲಾಗಲೀ ತನಗೆ ನಂಬಿಕೆ ಇಲ್ಲವೆಂದು ಭಗತ್‌ಸಿಂಗ್ ತಿಳಿಸಿದರು. ಗಾಂಧಿ ಮೃದು ಹೃದಯದ ವ್ಯಕ್ತಿ. ಆದರೆ ಇದು ಜನ ಕಲ್ಯಾಣಕ್ಕೆ ಅಗತ್ಯವಾದ ಗುಣವಲ್ಲ. ಬ್ರಿಟಿಷರು ಭಾರತಕ್ಕೆ ಹೆದರಲೇಬೇಕು. ಕೊನೆಯ ಭೇಟಿಯಲ್ಲಿ ಈ ವಿಚಾರವಾಗಿ ತಂದೆಯ ಜೊತೆಯಲ್ಲಿ ವಾಗ್ವಾದಕ್ಕೆ ಇಳಿಯುವ ಮನಸ್ಸು ಭಗತ್‌ಸಿಂಗ್‌ಗೆ ಇರಲಿಲ್ಲ. ತಮ್ಮ ಅಸಹಕಾರ ಚಳವಳಿಯ ಮೂಲಕ ಗಾಂಧಿ, ರಾಷ್ಟ್ರದಲ್ಲಿ ಮೂಡಿಸಿದ ಅಪಾರ ಜಾಗೃತಿಗಾಗಿ ಮಹಾತ್ಮರಿಗೆ ತಲೆಬಾಗದಿದ್ದರೆ ನಾವು ಕೃತಘ್ನರಾಗುತ್ತೇವೆ ಎಂಬುದನ್ನು ಭಗತ್‌ಸಿಂಗ್ ಒಪ್ಪಿಕೊಂಡರು. ಆದರೆ ಗಾಂಧಿ ಅಸಾಧ್ಯವಾದ ದಾರ್ಶನಿಕ. ಕ್ರಾಂತಿಕಾರಿಗಳು ಗಾಂಧಿಗೆ ಗೌರವ ಕೊಡುತ್ತಾರೆ. ಆದರೆ ಅವರನ್ನು ಅನುಸರಿಸುವುದಿಲ್ಲ. ಗಾಂಧಿಯವರ ಬಗ್ಗೆ ತನ್ನ ಬಾಯಿಂದ ‘ಗೌರವ’ ಎಂಬ ಪದ ಹೊರಬಿದ್ದದ್ದೇ ತಂದೆಯವರ ನೆಮ್ಮದಿಯನ್ನು ಹೆಚ್ಚಿಸಿದೆ ಎಂಬುದು ಭಗತ್‌ಸಿಂಗ್ ಗೊತ್ತಾಯಿತು.

ಭಗತ್ ಗಾಂಧೀಜಿಯವರ ವ್ಯಕ್ತಿತ್ವವನ್ನು ಬಹುವಾಗಿ ಗೌರವಿಸುತ್ತಿದ್ದರು. ಅವರ ಕೆಲವೊಂದು ಚಿಂತನೆಗಳ ಬಗ್ಗೆ ಭಗತ್‌ರಿಂದ ಆಕ್ಷೇಪಣೆಗಳಿದ್ದವು. ಭಿನ್ನಾಭಿಪ್ರಾಯಗಳಿದ್ದವು. ಮೊತ್ತಮೊದಲಿಗೆ ಅವರು ಗಾಂಧೀಜಿಯವರ ಅಹಿಂಸಾವಾದದ ಬಗ್ಗೆ ಆಕರ್ಷಿತರಾಗಿದ್ದರು. ಕ್ರಮೇಣ ಅವರು ಭ್ರಮನಿರಸನಕ್ಕೆ ಒಳಗಾಗಿದ್ದಕ್ಕೆ ಕಾರಣಗಳಿದ್ದವು. ಅಹಿಂಸಾವಾದಕ್ಕೆ ಬ್ರಿಟಿಷರು ಬಗ್ಗುವುದಿಲ್ಲ ಎಂಬುದು ಅವರಿಗೆ ಮನದಟ್ಟಾಗಿತ್ತು. ಶಾಂತಿಮಂತ್ರದಿಂದ ದೇಶಕ್ಕೆ ಸ್ವಾತಂತ್ರ ದೊರಕಿಸಿಕೊಡುವುದು ಸಾಧ್ಯವಿಲ್ಲ ಎಂಬುದು ಅವರ ವಾದವಾಗಿತ್ತು. ಗಾಂಧೀಜಿಯವರು ಎಂದೂ ಮಧ್ಯಮ ವರ್ಗದ ಮತ್ತು ಬಡಜನರ ನಡುವೆ ಕುಳಿತು ಮಾತನಾಡಿ ಅವರ ಸುಖಕಷ್ಟ ಆಲಿಸುವ ಕೆಲಸವನ್ನು ಮಾಡಿಲ್ಲ. ದೇಶದ ಹಳ್ಳಿಮೂಲೆಯ ರೈತನೊಬ್ಬನ ಕಷ್ಟವನ್ನು ಅವರು ಎಂದೂ ವಿಚಾರಿಸಲಿಲ್ಲ. ಹಾಗಾಗಿ ಅವರಿಗೆ ಬಹುಸಂಖ್ಯಾತ ಬಡಜನ ಸಮೂಹದ ಕಷ್ಟದ ಅರಿವಿಲ್ಲ ಎಂಬುದು ಭಗತ್‌ಸಿಂಗ್‌ರ ವಾದವಾಗಿತ್ತು.

Writer - ಡಾ. ಸಿ. ಚಂದ್ರಪ್ಪ

contributor

Editor - ಡಾ. ಸಿ. ಚಂದ್ರಪ್ಪ

contributor

Similar News