ವ್ಯಂಗ್ಯಚಿತ್ರಕಾರರಿಗೆ ವಿಷಯವಾಗುತ್ತಿರುವ ಪಾಕ್ ಪ್ರಧಾನಿ ಇಮ್ರಾನ್: ರಾಜನಾಥ್ ಲೇವಡಿ

Update: 2019-09-28 14:28 GMT

ಹೊಸದಿಲ್ಲಿ, ಸೆ.28: ಕಾಶ್ಮೀರದ ವಿಷಯದಲ್ಲಿ ತನ್ನ ವಾದಕ್ಕೆ ಬೆಂಬಲ ಗಿಟ್ಟಿಸಿಕೊಳ್ಳಲು ವಿಶ್ವದ ಎಲ್ಲಾ ರಾಷ್ಟ್ರಗಳ ಬಾಗಿಲು ತಟ್ಟುತ್ತಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ಖಾನ್ ವ್ಯಂಗ್ಯಚಿತ್ರಕಾರರಿಗೆ ದಿನಕ್ಕೊಂದು ನೂತನ ವಿಷಯ ಒದಗಿಸುತ್ತಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೇವಡಿ ಮಾಡಿದ್ದಾರೆ.

 ಮಜಗಾವ್ ಡಾಕ್‌ಯಾರ್ಡ್‌ನಲ್ಲಿ ಭಾರತದ ಸ್ಕಾರ್ಪಿಯಾನ್ ಶ್ರೇಣಿಯ ಎರಡನೇ ಜಲಾಂತರ್ಗಾಮಿಯನ್ನು ನೌಕಾಸೇನೆಗೆ ನಿಯೋಜನೆಗೊಳಿಸಿದ ಬಳಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. 2008ರಲ್ಲಿ ನಡೆದಿದ್ದ ಮುಂಬೈ ಮೇಲಿನ ಭಯೋತ್ಪಾದಕರ ದಾಳಿಯನ್ನು ಪುನರಾವರ್ತಿಸಲು ಕೆಲವೊಂದು ಶಕ್ತಿಗಳು ಪ್ರಯತ್ನಿಸುತ್ತಿವೆ. ಆದರೆ ಅವರ ಆಶಯ ಎಂದಿಗೂ ಈಡೇರದು ಎಂದು ಸಿಂಗ್ ಹೇಳಿದರು.

 ಖಂಡೇರಿ ಜಲಾಂತರ್ಗಾಮಿಯ ಸೇರ್ಪಡೆಯಿಂದ ಭಾರತೀಯ ನೌಕಾಪಡೆ ಅತ್ಯಂತ ಬಲಿಷ್ಟವಾಗಿದೆ ಎಂಬುದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು. ರಕ್ಷಣಾ ಪಡೆಗಳ ಶಕ್ತಿವರ್ಧನೆಗೆ ಸರಕಾರ ಬದ್ಧವಾಗಿದೆ. ಶಾಂತಿ ಬಯಸುವ ಯಾವುದೇ ದೇಶಕ್ಕೆ ನಮ್ಮ ನೌಕಾಪಡೆಯಿಂದ ಯಾವುದೇ ಬೆದರಿಕೆ ಎದುರಾಗದು. ಹಿಂದೂ ಮಹಾಸಾಗರ ಪ್ರದೇಶದ ಎಲ್ಲಾ ರಾಷ್ಟ್ರಗಳ ಮಧ್ಯೆ ಪರಸ್ಪರ ವಿಶ್ವಾಸ ಮತ್ತು ನಂಬಿಕೆಯ ವಾತಾವರಣ ಇರಬೇಕು ಎಂಬುದು ನೌಕಾಪಡೆಯ ಆಶಯವಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

 ಪಾಕಿಸ್ತಾನದ ದಿನಪತ್ರಿಕೆ ‘ದಿ ನೇಷನ್’ನ ಬುಧವಾರದ ಸಂಚಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರದಲ್ಲಿ ಇಮ್ರಾನ್‌ಖಾನ್ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಕಾಶ್ಮೀರ ವಿವಾದವನ್ನು ಎತ್ತಲು ನಡೆಸುತ್ತಿರುವ ಹತಾಶ ಪ್ರಯತ್ನವನ್ನು ಗೇಲಿ ಮಾಡಲಾಗಿತ್ತು. ಈ ವ್ಯಂಗ್ಯಚಿತ್ರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನಿ ಮೋದಿಯವರನ್ನೂ ಚಿತ್ರಿಸಲಾಗಿದೆ. ವ್ಯಂಗ್ಯಚಿತ್ರದ ಬಗ್ಗೆ ವ್ಯಾಪಕ ವಿರೋದ ವ್ಯಕ್ತವಾದ ಬಳಿಕ ಪತ್ರಿಕೆ ಕ್ಷಮೆ ಯಾಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News