‘ಗೀತಾ’: ಐತಿಹಾಸಿಕ ವಸ್ತು ಕಮರ್ಷಿಯಲ್ ಕಥಾನಕವೊಂದರಲ್ಲಿ....

Update: 2019-09-29 10:21 GMT

‘ಗೀತಾ’ ಎನ್ನುವ ಹೆಸರು ಶಂಕರನಾಗ್ ಅವರನ್ನು ನೆನಪಿಸಿದರೆ, ಚಿತ್ರದ ಟ್ರೇಲರ್ ರಾಜ್ ಕುಮಾರ್ ಅವರನ್ನು ನೆನಪಿಸುವಂತೆ ಮಾಡಿತ್ತು. ಆದರೆ ಈ ಇಬ್ಬರಿಗೂ ಸಂಬಂಧ ಇರದಂಥ ಹಲವು ಪ್ರೇಮಗಳ ಕತೆಯಾಗಿ ಹೊಮ್ಮಿರುವ ಚಿತ್ರವೇ ಗೀತಾ.    

ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಆ ಕ್ಷೇತ್ರದಲ್ಲಿ ಕೆಲಸದಲ್ಲಿರುವ ಯುವಕ ಆಕಾಶ್. ಆದರೆ ಆತನಿಗೆ ಪ್ರೇಮ ಸಂಬಂಧಗಳ ಬಗ್ಗೆ ಸಾಫ್ಟ್‌ನೆಸ್ ಇರುವುದಿಲ್ಲ. ಅದಕ್ಕೆ ಕಾರಣ ಆತನ ತಂದೆ ಮತ್ತು ತಾಯಿ ವಿಚ್ಛೇದಿತರಂತೆ ಬದುಕುವ ರೀತಿ. ಇದರಲ್ಲಿ ನಿಜಕ್ಕೂ ಬಡವಾಗಿದ್ದು ಮಾತ್ರ ಆಕಾಶ್. ಇಂತಹ ಸಂದರ್ಭದಲ್ಲಿ ಅಚಾನಕ್ಕಾಗಿ ಸಿಕ್ಕು ಸ್ನೇಹಿತೆಯಾದವಳು ಪ್ರಿಯಾ. ಆಕೆಯೇ ಆ ಸಂಸಾರವನ್ನು ಒಂದು ಮಾಡಲು ಯತ್ನಿಸುತ್ತಾಳೆ. ಇಷ್ಟು ವರ್ಷಗಳ ಬಳಿಕ ತನ್ನ ಮತ್ತು ಪತ್ನಿಯ ದೂರ ದೂರದ ವಾಸಕ್ಕೆ ಕಾರಣ ಹೇಳುತ್ತಾನೆ ತಂದೆ. ಆ ಫ್ಲ್ಯಾಶ್ ಬ್ಯಾಕ್ ಕತೆಯೇ ಗೋಕಾಕ್ ಚಳವಳಿಯ ಹಿನ್ನೆಲೆಯಲ್ಲಿ ಮೂಡಿ ಬರುವ ಪ್ರೇಮ ಕಾವ್ಯ. ಶಂಕರ್ ಮತ್ತು ಗೀತಾಂಜಲಿ ಅಂದಿನ ಪ್ರೇಮಿಗಳು. ಆದರೆ ಭಾಷೆಯ ವಿಚಾರದಲ್ಲಿ ನಡೆಯುತ್ತಿದ್ದ ಹೋರಾಟದಲ್ಲಿ ಹಿಂದಿ ಭಾಷಿಕಳಾಗಿದ್ದ ಗೀತಾಂಜಲಿ ತಮ್ಮ ಪ್ರೇಮವನ್ನು ವಿರೋಧಿಸುವ ತಂದೆಯೊಂದಿಗೆ ನಾಪತ್ತೆಯಾಗುತ್ತಾಳೆ. ಆ ನೋವಿನಲ್ಲಿ ಇರುವಾತನಿಗೆ ಸಮಾಧಾನ ನೀಡಲು ಬಂದ ಸ್ನೇಹಿತೆ ಶಂಕರ್‌ನ ಬಾಳ ಸಂಗಾತಿಯಾಗುತ್ತಾಳೆ. ಆದರೆ ಶಂಕರ್‌ಗೆ ಒಬ್ಬ ಮಗ ಹುಟ್ಟಿದ ಮೇಲೆ ಗೀತಾಂಜಲಿ ಮತ್ತೆ ಎದುರಾಗುತ್ತಾಳೆ. ಮದುವೆಯೇ ಆಗದೆ ತನ್ನ ನಿರೀಕ್ಷೆಯಲ್ಲಿರುವ ಗೀತಾಂಜಲಿಯನ್ನು ಕಂಡು ಶಂಕರ್ ಮನಸ್ಸು ಕೆಡಿಸಿಕೊಳ್ಳುತ್ತಾನೆ. ಆದರೆ ಗೀತಾಂಜಲಿ ಮತ್ತೆ ಆ ಕಡೆಗೆ ಸುಳಿಯುವುದಿಲ್ಲ. ಆದರೆ ಶಂಕರ್ ದಾಂಪತ್ಯದಲ್ಲಿ ನೆಮ್ಮದಿ ಉಳಿಯುವುದಿಲ್ಲ. ಈ ಕತೆಯನ್ನು ತಂದೆಯಿಂದ ಕೇಳಿ ತಿಳಿದ ಬಳಿಕ ಆಕಾಶ್ ವರ್ಗಾವಣೆಗೊಂಡು ಕೋಲ್ಕತಾ ಸೇರಿಕೊಳ್ಳುತ್ತಾನೆ. ಅಲ್ಲಿ ಗೆಳೆಯನೊಂದಿಗೆ ನಿಶ್ಚಿತಾರ್ಥ ಮಾಡಿ ಮದುವೆ ಮುರಿದುಕೊಂಡ ಗೆಳತಿ ಗೀತಾ ಎದುರಾಗುತ್ತಾಳೆ. ಅವಳು ಹೇಳುವ ಬದುಕಿನ ಕತೆಗಳು ಹೊಸ ವಿಚಾರಗಳನ್ನು ಕಲಿಸುತ್ತದೆ. ಈ ನಡುವೆ ಪ್ರಿಯಾಳನ್ನು ಆಕಾಶ್ ಜತೆಗೆ ಮದುವೆ ಮಾಡಲು ತಂದೆ ಮತ್ತು ತಾಯಿ ಜತೆಯಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾಯಕ ಅದಕ್ಕೆ ಒಪ್ಪುತ್ತಾನೆ. ಆದರೆ ನಿಜಕ್ಕೂ ಅವರಿಬ್ಬರ ಜೋಡಿ ಒಂದಾಗುತ್ತದೆಯೋ? ಅಥವಾ ಗೀತಾ ಆಕಾಶನ ಕೈ ಹಿಡಿಯುತ್ತಾಳೆಯೇ? ಇದರ ತಿರುವುಗಳೇನು ಮತ್ತು ಚಿತ್ರದ ತಿರುವಿಗೆ ಕಾರಣಗಳೇನು ಎನ್ನುವುದಕ್ಕೆ ಉತ್ತರವನ್ನು ಚಿತ್ರ ಮಂದಿರದಲ್ಲಿ ನೋಡಬಹುದು.

ಗೋಕಾಕ್ ಚಳವಳಿ ಹೆಸರಿನಲ್ಲಿ ಪ್ರಚಾರ ಪಡೆದುಕೊಂಡ ಚಿತ್ರದಲ್ಲಿ ಅದಕ್ಕೆ ಸಂಬಂಧಿಸಿದ ಒಂದಷ್ಟು ದೃಶ್ಯ ಮತ್ತು ಮಾಹಿತಿಗಳನ್ನು ತುರುಕಲಾಗಿದೆ. ಪ್ರೇಮಿಗಳ ಬೇರ್ಪಡುವಿಕೆಗೆ ಒಂದು ಕಾರಣ ಬೇಕು ಎನ್ನುವುದಾದರೆ ಬೇರೇನಾದರೂ ಘಟನೆಗಳನ್ನು ಮಾಡಬಹುದಿತ್ತು. ಇಲ್ಲಿ ಗೋಕಾಕ್ ಬಗ್ಗೆ ಕೂಡ ಆಳವಾಗಿ ತೋರಿಸಿಲ್ಲ. ಅಂತಹದ್ದೊಂದು ಐತಿಹಾಸಿಕ ವಸ್ತುವನ್ನು ಅದೇ ಆಶಯದೊಂದಿಗೆ ಚಿತ್ರ ಮಾಡುವವರು ಇಲ್ಲವಾದರೆ, ಆ ಘಟನೆ ಹೇಗೆ ಕಮರ್ಷಿಯಲ್ ಕಥಾನಕವೊಂದರಲ್ಲಿ ಕೊಚ್ಚಿ ಹೋಗುತ್ತದೆ ಎನ್ನುವುದಕ್ಕೆ ಗೀತಾ ಉದಾಹರಣೆಯಾದೀತು.

ಅಂದಿನ ಕನ್ನಡವನ್ನು ಮಾತುಗಳಲ್ಲಾಗಲೀ, ಬರವಣಿಗೆಗಳಲ್ಲಾಗಲೀ ತೋರಿಸುವ ಪ್ರಯತ್ನ ನಡೆದಿಲ್ಲ. ‘‘ಉಗ್ರ ಹೋರಾಟ ಮಾಡುವ’’ ಎನ್ನುವ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದ ಜನಪ್ರಿಯ ಸಂಭಾಷಣೆಯನ್ನು ರವಿಶಂಕರ್ ಗೌಡ ಅವರ ಪಾತ್ರದಲ್ಲಿ ನೆನಪಿಸುವ ಮೂಲಕ ಆ ಜಮಾನದಲ್ಲಿದ್ದ ಭಾವನೆಯನ್ನು ಮತ್ತು ಇಂದಿಗೆ ಎಳೆದು ತರಲಾಗಿದೆ. ಲೊಕೇಶನ್‌ಗಳ ಮೂಲಕ ದೃಶ್ಯಕ್ಕೆ ಗತಕಾಲದ ವೈಭವ ತುಂಬಿರುವುದನ್ನು ಮೆಚ್ಚಲೇಬೇಕು.

ಚಿತ್ರದಲ್ಲಿ ಗಣೇಶ್ ಅವರು ಆಕಾಶ್ ಮತ್ತು ಶಂಕರ್ ಪಾತ್ರಗಳಿಗೆ ಜೀವ ತುಂಬಿದ್ದಾರೆ. ನಾಯಕಿಯರಲ್ಲಿ ಪ್ರಿಯಾ ಪಾತ್ರ ನಿರ್ವಹಿಸಿದ ಶಾನ್ವಿ ಶ್ರೀವತ್ಸ ಮತ್ತು ಗೀತಾಳಾಗಿ ನಟಿಸಿರುವ ಪ್ರಯಾಗ ಮಾರ್ಟಿನ್ ಹೆಚ್ಚು ಗಮನ ಸೆಳೆಯುತ್ತಾರೆ. ಎರಡು ಗೆಟಪ್‌ನಲ್ಲಿ ಕಾಣಿಸಿಕೊಂಡ ಶಾನ್ವಿ ತಮ್ಮ ಪಾತ್ರಕ್ಕೆ ತಕ್ಕ ನಟನೆಯನ್ನು ನೀಡಿದ್ದಾರೆ. ಚಿತ್ರ ನೋಡಿದವರಿಗೆ ಸುಧಾರಾಣಿಯವರ ಪಾತ್ರವನ್ನು ಕೂಡ ಮರೆಯುವುದು ಕಷ್ಟ.

  ಚಿತ್ರದಲ್ಲಿ ಸಾಕಷ್ಟು ಪ್ರೇಕ್ಷಕರ ವಿವೇಚನೆಗೆ ತಕ್ಕಂತೆ ಕಲ್ಪಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಇದು ಉತ್ತಮ ಪ್ರಯತ್ನವಾದರೂ ಗಣೇಶ್ ಅವರ ಎಂದಿನ ಶೈಲಿಯ ಚಿತ್ರಗಳನ್ನು ವೀಕ್ಷಿಸಲು ಬರುವ ಪ್ರೇಕ್ಷಕರನ್ನು ಗೊಂದಲಗೊಳಿಸುವುದು ಸಹಜ. ಹಾಗಾಗಿ ಈ ಬಾರಿ ಗಣೇಶ್ ಅವರು ಪ್ರೇಮಿಗಳಿಗಷ್ಟೇ ಅಲ್ಲ, ವಿವಾಹಿತರಿಗೂ, ಬುದ್ಧಿವಂತರಿಗೂ ಇಷ್ಟವಾಗುವ, ಕಥಾ ವಸ್ತುವಿನ ಚಿತ್ರದೊಂದಿಗೆ ಬಂದಿದ್ದಾರೆ. ಆದರೆ ಕ್ಲೈಮ್ಯಾಕ್ಸ್ ಎಲ್ಲ ವರ್ಗದ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತದೆ ಎನ್ನುವುದು ನಿಜ.

ತಾರಾಗಣ: ಗಣೇಶ್, ಪ್ರಯಾಗ ಮಾರ್ಟಿನ್, ಶಾನ್ವಿ ಶ್ರೀವತ್ಸ
ನಿರ್ದೇಶನ: ವಿಜಯ್ ನಾಗೇಂದ್ರ
ನಿರ್ಮಾಣ: ಸೈಯದ್ ಸಲಾಂ, ಶಿಲ್ಪಾಗಣೇಶ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News