‘ಕಣ್ಣೇ ಕಾಣದ ನಾವು ಪರಸ್ಪರ ಭಾವನೆ ಹಂಚಿಕೊಂಡು ಪ್ರೀತಿಸಿ ಮದುವೆಯಾದೆವು’

Update: 2019-09-30 10:40 GMT

►ಅಂಧತ್ವ ಮೆಟ್ಟಿ ನಿಂತವರ ಜೊತೆ ಒಂದು ದಿನ

ಮಂಗಳೂರು, ಸೆ.29: ಜಿಲ್ಲೆಯ ಸಮುದಾಯ ಬಾನುಲಿ ‘ರೇಡಿಯೊ ಸಾರಂಗ್ 107.8 ಎಫ್‌ಎಂ’ ರವಿವಾರ ಸಂತ ಅಲೋಶಿಯಸ್ ಕಾಲೇಜಿನ ಆಡಿಟೋರಿಯಂನಲ್ಲಿ ಹಮ್ಮಿಕೊಂಡಿದ್ದ ‘ಅಂಧತ್ವ ಮೆಟ್ಟಿ ನಿಂತವರ ಜೊತೆ ಒಂದು ದಿನ’ ಎಂಬ ‘ಅಂತರ್ ಬೆಳಕು’ ವಿಶಿಷ್ಟ ಕಾರ್ಯಕ್ರಮವು ಹೊಸ ಲೋಕದ ಪರಿಚಯ ಮಾಡಿಸಿಕೊಟ್ಟಿತು.

ಅಲ್ಲಿ ಹುಟ್ಟಿನಿಂದಲೇ ಕಣ್ಣು ಕಾಣದವರು, ಐದಾರು ವರ್ಷದವರೆಗೂ ಸಾಮಾನ್ಯರಂತಿದ್ದು ವೈದ್ಯರ ಲೋಪದಿಂದ ಕಣ್ಣು ಕಳೆದುಕೊಂಡವರು, ದೃಷ್ಟಿ ದೋಷ ಅಥವಾ ಅಂಧತ್ವ ಸಮಸ್ಯೆಯೇ ಇಲ್ಲ. ಮನಸ್ಸಿದ್ದರೆ ಏನನ್ನೂ ಸಾಧಿಸಬಹುದು ಎಂಬ ಛಲಗಾರರು, ಕಣ್ಣು ಕಾಣದಿದ್ದರೂ ಮಾತಿಗೇನೂ ತೊಡಕಿಲ್ಲ ಎಂದು ಹುಮ್ಮಸ್ಸಿನಿಂದ ಮಾತನಾಡುವವರು. ಮಾತಿಗಿಂತ ಕೃತಿ ಮುಖ್ಯ ಎನ್ನುವವರು. ಹೀಗೆ ದ.ಕ., ಉಡುಪಿ ಜಿಲ್ಲೆಯವರಲ್ಲದೆ ಚಿಕ್ಕಮಗಳೂರು, ಕೊಡಗು, ಕಾಸರಗೋಡು ಜಿಲ್ಲೆಯ ಹಲವು ಮಂದಿ ಅಂಧರು ತಮ್ಮ ಬದುಕಿನ ಅನುಭವಗಳನ್ನು ಹಂಚಿಕೊಂಡರು. ಅದರಲ್ಲಿ ಯುವಕ-ಯುವತಿಯರು, ಮಧ್ಯವಯಸ್ಕರು, ವಿವಾಹಿತರು, ವೃದ್ಧರು ಹೀಗೆ ಎಲ್ಲ ಹರೆಯದವರೂ ಇದ್ದರು. ಅವರಿಗೆ ಪರಸ್ಪರ ಕಾಣುವ ಭಾಗ್ಯವಿಲ್ಲದಿದ್ದರೂ ದೈನಂದಿನ ವಿಷಯಗಳನ್ನು, ಭಾವನೆಗಳನ್ನು ಹಂಚಿಕೊಳ್ಳುವ ಮುಕ್ತ ಅವಕಾಶ ಅಲ್ಲಿತ್ತು. ಎಲ್ಲರೂ ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

 ಈ ‘ಅಂತರ್ ಬೆಳಕು’ ಕಾರ್ಯಕ್ರಮದಲ್ಲಿ 15-20 ಮಂದಿ ಅಂಧರು ಪಾಲ್ಗೊಂಡಿದ್ದರು. ಇವರೆಲ್ಲಾ ಇಲ್ಲಿ ಸೇರಲು ಡೇನಿಯಲ್ ಡಿಸೋಜ ಎಂಬ 73ರ ಹರೆಯದ ಅಂಧ ಕೂಡ ಕಾರಣ. ಅವರ ಪ್ರಯತ್ನ ಇಲ್ಲದೇ ಇದ್ದಿದ್ದರೆ ಯಾರೂ ಇಲ್ಲಿ ಸೇರುತ್ತಿರಲಿಲ್ಲ. ರೇಡಿಯೋ ಸಾರಂಗ್‌ನ ಮುಖ್ಯಸ್ಥರ ಮನವಿಯಂತೆ ಇವರು ಎಲ್ಲರನ್ನೂ ಸ್ವತಃ ಫೋನ್ ಮೂಲಕ ಸಂಪರ್ಕಿಸಿದರು. ‘ವಾರ್ತಾಭಾರತಿ’ಯ ಜೊತೆ ಮಾತನಾಡಿದ ಅವರು ‘ಅಡ್ಯಾರ್ ಸಮೀಪದ ವಳಚ್ಚಿಲ್‌ಪದವು ನನ್ನೂರು. ಸುಮಾರು 47 ವರ್ಷಗಳ ಕಾಲ ಕಾಫಿ ಎಸ್ಟೇಟ್‌ವೊಂದರ ಮೇಲ್ವಿಚಾರಕನಾಗಿದ್ದೆ. 2005ರ ಆಗಸ್ಟ್ 15ರವರೆಗೂ ನಾನು ಆರೋಗ್ಯವಾಗಿದ್ದೆ. ಆ ಬಳಿಕ ನನ್ನ ಕಣ್ಣು ಮಂದವಾಯಿತು. ವೈದ್ಯರನ್ನು ಕಂಡಾಗ ದೃಷ್ಟಿ ಕಳೆದುಕೊಂಡಿರುವುದಾಗಿ ತಿಳಿಸಿದರು. ಎರಡು ಬಾರಿ ಶಸ್ತ್ರಚಿಕಿತ್ಸೆಯೂ ಅಯಿತು. ಆದರೂ ಗುಣಮುಖ ಆಗಲಿಲ್ಲ. ಇನ್ನೂ ವ್ಯಥೆ ಪಡುವ ಅಗತ್ಯವಿಲ್ಲ. ಅಂಧತ್ವ ಶಾಪ ಅಲ್ಲ, ವರ ಎಂದು ಗಟ್ಟಿ ನಿರ್ಧಾರಕ್ಕೆ ಬಂದೆ. ಹಾಗೇ ನನ್ನ ಬದುಕಿನಲ್ಲಿ ಬದಲಾವಣೆಯನ್ನು ಬಯಸಿದೆ. ಹಾಗೇ ರೇಡಿಯೋ ಸಾರಂಗ್‌ನ ಸಂಪರ್ಕಕ್ಕೆ ಬಂದೆ. ಹುಟ್ಟಿನಿಂದ ಅಥವಾ ಆ ಬಳಿಕ ನನ್ನಂತೆ ಕಾರಣಾಂತರದಿಂದ ಅಂಧತ್ವ ಕಳಕೊಂಡವರು ಸಾರಂಗ್‌ನಲ್ಲಿ ಪರಸ್ಪರ ವಿಷಯ ಹಂಚಿಕೊಳ್ಳುತ್ತಿದ್ದರು. ಹಾಗೇ ಕೇಂದ್ರ ಪ್ರಸಾರ ಇಲಾಖೆಯು ಆಯೋಜಿಸಿದ ಕಾರ್ಯಕ್ರಮವೊಂದಕ್ಕೆ ನಾನು, ದಾಮೋದರ ವರ್ಕಾಡಿ, ಶಿವಾನಂದ ಜೈನ್, ಹರಿಣಾಕ್ಷಿ ಕುಲಾಲ್ ಎಕ್ಕೂರು ನಾವು ನಡೆದು ಬಂದ ದಾರಿ, ಮುಂದಿನ ಗುರಿ ಇತ್ಯಾದಿ ಕುರಿತು ಧ್ವನಿ ನೀಡಿದೆವು. ನಮ್ಮ ಕಾರ್ಯಕ್ರಮವನ್ನು ಮೆಚ್ಚಿ ಪ್ರಸಾರ ಇಲಾಖೆಯು ಪ್ರಶಸ್ತಿ ನೀಡಿದೆ. ಇದು ನಮಗೆ ತುಂಬ ಸಂತೋಷ ನೀಡಿದೆ ಎಂದು ಡೇನಿಯಲ್ ಹೇಳಿದರು.

‘ಅಂತರ್‌ಬೆಳಕು’ ಸ್ನೇಹ ಸಮ್ಮಿಲನದಲ್ಲಿ ಜಾನಪದ ವಿದ್ವಾಂಸರಾದ ಡಾ. ಗಣೇಶ್ ಅಮೀನ್ ಸಂಕಮಾರು, ಭಾಸ್ಕರ ರೈ ಕುಕ್ಕುವಳ್ಳಿ, ಕಾಲೇಜಿನ ವರಿಷ್ಠ ಡಯನಿಶಿಯಸ್ ವಾಸ್ ಪಾಲ್ಗೊಂಡು ಅಂಧರ ಸಾಧನೆ ಮತ್ತು ರೇಡಿಯೋ ಸಾರಂಗ್‌ನ ಪ್ರಯತ್ನವನ್ನು ಶ್ಲಾಘಿಸಿದರು. ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು.

‘ರೇಡಿಯೊ ನಮಗೆ ಬಾಳು ನೀಡಿತು’

ನನಗೆ ಹುಟ್ಟಿನಿಂದಲೇ ಕಣ್ಣು ಕಾಣುತ್ತಿಲ್ಲ. ಅಂಧತ್ವದ ಜೊತೆಗೆ ಬಾಲ್ಯದಿಂದಲೇ ಕಿತ್ತು ತಿನ್ನುವ ಬಡತನವೂ ಇತ್ತು. ಕಣ್ಣು ಕಾಣದಿದ್ದರೂ ಓದಬೇಕು ಎಂಬ ಆಸೆ ಇತ್ತು. ನಮ್ಮ ಮನೆಯ ಪಕ್ಕದ ಅಂಗನವಾಡಿ ಕಾರ್ಯಕರ್ತೆ ಸುಲೋಚನಾ ಅವರು ನನ್ನನ್ನು ಅಂಗನವಾಡಿಗೆ ಸೇರಿಸಿದರು. ನನ್ನ ಚುರುಕುತನ ಕಂಡು ಸ್ಥಳೀಯ ಸರಕಾರಿ ಶಾಲೆಗೆ ಸೇರಿಸಿದರು. 1ರಿಂದ 9ನೇ ತರಗತಿವರೆಗೆ ಬ್ರೈನ್ ಲಿಪಿ ಬಳಸಿ ಸ್ವತಃ ನಾನೇ ಪರೀಕ್ಷೆಯನ್ನು ಬರೆದು ಪಾಸಾದೆ. ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಸಹಾಯಕರ ನೆರವು ಪಡೆದು ಉತ್ತಮ ದರ್ಜೆಯಲ್ಲೇ ಪಾಸಾದೆ. ಈ ಎರಡಲ್ಲೂ ಪಾಸಾದ ಬಳಿಕ ನನಗೆ ಜೀವನದಲ್ಲಿ ಏನಾದರೂ ಮಾಡಬೇಕು ಎಂಬ ಆಸೆಯಾಯಿತು. ಅದಕ್ಕಾಗಿ ಗುರಿಯನ್ನೂ ಹಮ್ಮಿಕೊಂಡೆ. ಹಾಗೇ ಕರ್ನಾಟಕ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ನಿರ್ಧರಿಸಿದೆ. ಕೆಲವು ಪುಸ್ತಕ, ಸಿಡಿ ಪಡೆದು ಚೆನ್ನಾಗಿ ಓದತೊಡಗಿದೆ. ಅಂತೂ 159 ಅಂಕ ಪಡೆದು ಸದ್ಯ ದ.ಕ.ಜಿಲ್ಲಾ ಆಹಾರ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದು 30ರ ಹರೆಯದ ಮೈಸೂರು ಜಿಲ್ಲೆಯ ಹುಣಸೂರಿನ ತಿಪ್ಲಾಕರ ಗ್ರಾಮದ ಶಿವನಂಜಯ್ಯ ಹೇಳಿದರು.

ಅದಷ್ಟೇ ಅಲ್ಲ, ನಾನು ಕೊಡಗಿನ ಯುವತಿಯನ್ನು ಪ್ರೀತಿಸಿ ಮದುವೆಯಾದೆ. ಆಕೆ ಕೂಡ ಅಂಧೆ. ನಮ್ಮನ್ನು ಒಗ್ಗೂಡಿಸಿದ್ದು ಕೂಡ ಇದೇ ರೇಡಿಯೊ ಸಾರಂಗ್. ನಾವಿಬ್ಬರೂ ಸಾರಂಗ್‌ನ ಶೋತೃಗಳು. ನಾನು ಮೈಸೂರು, ಆಕೆ ಕೊಡಗು. ಸಾರಂಗ್ ಮೂಲಕ ನಮ್ಮ ಮೊಬೈಲ್ ಸಂಖ್ಯೆಗಳು ವಿನಿಮಯವಾಯಿತು. ಆ ಬಳಿಕ ಪರಸ್ಪರ ಮಾತನಾಡಿಕೊಂಡೆವು. ಪ್ರೀತಿಸಿದೆವು. 5 ವರ್ಷದ ಹಿಂದೆ ಮದುವೆಯೂ ಆದೆವು. ನಮಗಿನ್ನೂ ಮಕ್ಕಳಾಗಿಲ್ಲ. ಆ ಕೊರಗು ಇದ್ದರೂ ನಾವೆಂದೂ ಹತಾಶರಾಗಿಲ್ಲ. ಬದುಕಿನಲ್ಲಿ ಏನಾದರೊಂದು ಸಾಧಿಸುವ ಛಲವಿದೆ. ರೇಡಿಯೊ ಸಾರಂಗ್ ಕೇಳದೆ ಇದ್ದಿದ್ದರೆ ನಾನು ಒಂಟಿ ಬದುಕು ಸಾಗಿಸಬೇಕಿತ್ತೋ ಏನೋ? ನಮ್ಮಿಬ್ಬರ ಮಧ್ಯೆ ಪ್ರೀತಿ ಮೊಳಕೆಯೊಡೆಯಲು ಕಾರಣವಾದ ಸಾರಂಗ್‌ಗೆ ಕೃತಜ್ಞತೆ ಸಲ್ಲಿಸಿದ್ದಷ್ಟು ಸಾಲದು ಎಂದು ಶಿವನಂಜಯ್ಯ ಹೇಳುತ್ತಾರೆ.

ನನ್ನದು ಮೂಡಿಗೆರೆ ತಾಲೂಕಿನ ನಿಡುವಳಿ ಗ್ರಾಮ. 5 ವರ್ಷದವರೆಗೂ ನನ್ನ ಕಣ್ಣು ಸಾಮಾನ್ಯರಂತಿತ್ತು. ಅದ್ಯಾವುದೋ ಕಾಯಿಲೆಗೆ ವೈದ್ಯರು ನೀಡಿದ ಔಷಧ ನನ್ನೆರಡೂ ಕಣ್ಣು ಕಳೆದು ಕೊಳ್ಳಬೇಕಾಯಿತಂತೆ. ನಾನು ನನ್ನ ಅಣ್ಣನ ಮನೆಯಲ್ಲಿ ಕಾಲ ಕಳೆಯುತ್ತಿರುವೆ. ನನಗೆ ಕೆಲಸ ಅಂತ ಏನೂ ಇಲ್ಲ. ಸಮಯ ಕಳೆಯಲು ರೇಡಿಯೊ ಸಾರಂಗ್ ಕೇಳುತ್ತಿದ್ದೆ. ಆವಾಗ ನನಗೆ ಮಡಿಕೇರಿಯ ಭಾಗ್ಯ ಎಂಬವರ ಪರಿಚಯ ಆಯಿತು. ಅವರೂ ನನ್ನ ಹಾಗೆ ಅಂಧರು. ನಂತರ ನಾವು ವೈಯಕ್ತಿಕವಾಗಿ ಮಾತುಕತೆ ನಡೆಸತೊಡಗಿದೆವು. ಪ್ರೀತಿಸಿದೆವು. ಈ ವರ್ಷದ ಮಾರ್ಚ್ 13ರಂದು ನಮ್ಮ ಮದುವೆಯೂ ಆಯಿತು. ಬದುಕು ಕಟ್ಟಿಕೊಳ್ಳಲು ಸಾರಂಗ್‌ನ ಶ್ರಮವನ್ನು ಮರೆಯಲು ಸಾಧ್ಯವೇ ಇಲ್ಲ. ‘ಸಾರಂಗ್’ ನಮ್ಮನ್ನು ಬೆಸೆಯುವಂತೆ ಮಾಡದಿದ್ದರೆ ನಮ್ಮ ಬದುಕು ಕತ್ತಲಮಯವಾಗುತ್ತಿತ್ತು ಎಂದು 38ರ ಹರೆಯದ ಮೂಡಿಗೆರೆಯ ಐತಪ್ಪ ಹೇಳುತ್ತಾರೆ.

ಕೇಂದ್ರ ಪ್ರಸಾರ ಇಲಾಖೆಯಡಿ ದೇಶಾದ್ಯಂತ 225 ಸಮುದಾಯ ಬಾನುಲಿ ಕೇಂದ್ರವಿದೆ. ಈ ಕೇಂದ್ರಗಳಿಗೆ 15 ವಿಭಾಗಗಳಿಗೆ ಇಲಾಖೆಯು ವಿವಿಧ ಸ್ಪರ್ಧೆಗಳನ್ನು ಆಯೋಜಿಸುತ್ತಿವೆ. ಸಾರಂಗ್‌ನ ನಾಲ್ವರು ಶೋತೃಗಳು ನೀಡಿದ ‘ಅಂತರ್ ಬೆಳಕು’ ಕಾರ್ಯಕ್ರಮಕ್ಕೆ ಈ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ನಾವು ದಶಮಾನೋತ್ಸವ ಸಂಭ್ರಮದಲ್ಲಿದ್ದೇವೆ. ಈ ಘಳಿಗೆಯಲ್ಲೇ ರಾಷ್ಟ್ರೀಯ ಪ್ರಶಸ್ತಿ ಬಂದಿರವುದು ನಮಗೆ ಹೆಮ್ಮೆಯ ವಿಚಾರ. ಈ ಅಂಧರಿಂದಾಗಿಯೇ ನಮಗೆ ಪ್ರಶಸ್ತಿ ಬಂದಿರುವ ಕಾರಣ ಅದರ ಖುಷಿಯನ್ನು ನಾವು ಅಂಧರ ಜೊತೆ ಆಚರಿಸುತ್ತಿದ್ದೇವೆ. ಇದು ನಮಗೆ ಹೆಮ್ಮೆಯ ಸಂಗತಿಯಾಗಿದೆ.

-ಡಾ.ಫಾ. ಮೆಲ್ವಿನ್ ಪಿಂಟೊ, ನಿರ್ದೇಶಕರು, ರೇಡಿಯೋ ಸಾರಂಗ್

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News