ಅಸ್ಸಾಂ ರೈಫಲ್‌ನ ಪೂರ್ಣ ನಿಯಂತ್ರಣ ಪಡೆಯುವ ಕೇಂದ್ರದ ಪ್ರಸ್ತಾವಕ್ಕೆ ಸೇನೆಯ ವಿರೋಧ

Update: 2019-09-30 17:37 GMT

ಹೊಸದಿಲ್ಲಿ, ಸೆ.30: ಅಸ್ಸಾಂ ರೈಫಲ್‌ನ ಕಾರ್ಯಾಚರಣಾತ್ಮಕ ನಿಯಂತ್ರಣವನ್ನು ಕೈಗೆ ಪಡೆಯುವ ಕೇಂದ್ರದ ಗೃಹ ಸಚಿವಾಲಯದ ಪ್ರಸ್ತಾವಕ್ಕೆ ಸೇನಾಪಡೆ ವಿರೋಧ ಸೂಚಿಸಿದ್ದು ಇದರಿಂದ , ಚೀನಾದೊಂದಿಗಿನ ವಿವಾದಾತ್ಮಕ ಗಡಿಭಾಗದಲ್ಲಿ ನಿಗಾ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮದ ಸಹಿತ ರಾಷ್ಟ್ರೀಯ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.

ಗೃಹ ಸಚಿವಾಲಯದ ಈ ನಡೆಗೆ ತೀವ್ರ ವಿರೋಧ ಸೂಚಿಸಿರುವ ಸೇನೆಯು, ಅದರ ಬದಲು ಪೂರ್ವ ವಲಯದಲ್ಲಿ ಚೀನಾದ ಅತಿಕ್ರಮಣ ಪ್ರಯತ್ನವನ್ನು ಸೂಕ್ತವಾಗಿ ನಿಭಾಯಿಸಲು ಸಂಪೂರ್ಣ ಚೀನಾ-ಭಾರತ ಗಡಿ ಭಾಗದ ನಿಗಾ ಹೊಣೆಯನ್ನು ಸೇನೆಗೆ ವಹಿಸಿಕೊಡುವಂತೆ ಒತ್ತಾಯಿಸಿದೆ.

ಗೃಹ ಸಚಿವಾಲಯದ ಪ್ರಸ್ತಾವವನ್ನು ಗಂಭೀರವಾಗಿ ಪರಿಗಣಿಸಿರುವ ಸೇನೆಯು ಈ ವಿಷಯವನ್ನು ರಕ್ಷಣಾ ಸಚಿವಾಲಯದ ಗಮನಕ್ಕೆ ತಂದಿದ್ದು, ತಕ್ಷಣ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗ ಅರೆಸೇನಾ ಪಡೆ ಅಸ್ಸಾಂ ರೈಫಲ್ಸ್‌ನ ಆಡಳಿತಾತ್ಮಕ ಅಧಿಕಾರ ಗೃಹ ಸಚಿವಾಲಯದ ಕೈಯಲ್ಲಿದ್ದರೆ ಕಾರ್ಯಾಚರಣಾತ್ಮಕ ನಿಯಂತ್ರಣ ಸೇನೆಯ ಕೈಯಲ್ಲಿದೆ. ಅಸ್ಸಾಂ ರೈಫಲ್ಸ್ ಅನ್ನು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯೊಂದಿಗೆ ವಿಲೀನಗೊಳಿಸುವ ಪ್ರಸ್ತಾವದ ಬಗ್ಗೆ ಪ್ರಧಾನಿ ನೇತೃತ್ವದ ಭದ್ರತೆಗಾಗಿನ ಸಂಪುಟ ಸಮಿತಿ ಶೀಘ್ರದಲ್ಲೇ ಚರ್ಚಿಸುವ ನಿರೀಕ್ಷೆಯಿದೆ. ಅಸ್ಸಾಂ ರೈಫಲ್ಸ್‌ನ ನಿಯಂತ್ರಣವನ್ನು ಗೃಹ ಸಚಿವಾಲಯದ ಕೈಗಿತ್ತರೆ ಭಾರತ-ಚೀನಾ ಗಡಿಭಾಗದಲ್ಲಿ ಗಸ್ತು ವ್ಯವಸ್ಥೆಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಉನ್ನತ ಸೇನಾಧಿಕಾರಿ ಹೇಳಿದ್ದು, ಈ ವಿಷಯವನ್ನು ಈಗಾಗಲೇ ರಕ್ಷಣೆ ಮತ್ತು ಭದ್ರತೆ ವಿಭಾಗಕ್ಕೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸುಮಾರು 55,000 ಸಿಬ್ಬಂದಿ ಬಲ ಹೊಂದಿರುವ ಅಸ್ಸಾಂ ರೈಫಲ್ಸ್ ಮ್ಯಾನ್ಮಾರ್ -ಭಾರತ ನಡುವಿನ 1,640 ಕಿ.ಮೀ ವ್ಯಾಪ್ತಿಯ ಗಡಿಭಾಗದಲ್ಲಿ ಗಸ್ತು ತಿರುಗುವ ಜೊತೆಗೆ ಚೀನಾ-ಭಾರತ ನಡುವಿನ ಸೂಕ್ಷ್ಮ ಗಡಿಭಾಗದಲ್ಲಿ ನಿಗಾ ವಹಿಸುವ ಕಾರ್ಯದಲ್ಲಿ ಸೇನೆಗೆ ಕಾರ್ಯಾಚರಣಾತ್ಮಕ ಹಾಗೂ ವ್ಯೂಹಾತ್ಮಕ ಸಹಾಯ ನೀಡುತ್ತಿದೆ. 1835ರಲ್ಲಿ ಸ್ಥಾಪನೆಗೊಂಡ ಅಸ್ಸಾಂ ರೈಫಲ್ಸ್ ಈಶಾನ್ಯ ಭಾಗದ ತೀವ್ರವಾದಿಪೀಡಿತ ರಾಜ್ಯಗಳಲ್ಲೂ ಬಂಡುಕೋರನಿಗ್ರಹ ಕಾರ್ಯಾಚರಣೆಯನ್ನು ನಡೆಸುತ್ತವೆ.

ಅಸ್ಸಾಂ ರೈಫಲ್ಸ್‌ನ ಸಂಪೂರ್ಣ ನಿಯಂತ್ರಣವನ್ನು ಕೋರಿ ಸಿಸಿಎಸ್‌ಗೆ ಸಲ್ಲಿಸಲು ಕರಡು ಪ್ರತಿಯನ್ನು ಗೃಹ ಸಚಿವಾಲಯ ಈಗಾಗಲೇ ಕರಡು ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಅಸ್ಸಾಂ ರೈಫಲ್ಸ್ ಸೇನಾ ವಿಭಾಗವನ್ನು ಸ್ಥಿರ ರಕ್ಷಣಾ ಪಾತ್ರದಿಂದ ಮುಕ್ತಗೊಳಿಸುವ ಮೂಲಕ ಚೀನಾಗೆ ತಾಗಿಕೊಂಡಿರುವ ಗಡಿಯಲ್ಲಿ ಸೇನೆಗೆ ಮಹತ್ವದ ನೆರವು ನೀಡುತ್ತದೆ ಎಂದು ಸೇನೆ ತಿಳಿಸಿದೆ. ಎಲ್ಲಕ್ಕೂ ಮಿಗಿಲಾಗಿ, ಅಸ್ಸಾಂ ರೈಫಲ್ಸ್‌ನ 70-80ಶೇ. ಸಿಬ್ಬಂದಿ ಸಾಂಪ್ರದಾಯಿಕ ಸೈನಿಕ ಕರ್ತವ್ಯದಲ್ಲಿ ನಿಯೋಜನೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News