‘ಭಾರತದ ಲಕ್ಷ್ಮೀ’ಯರೇ ಸಂಸ್ಕೃತಿ ರಕ್ಷಕರಿದ್ದಾರೆ ಎಚ್ಚರಿಕೆ!

Update: 2019-10-01 05:14 GMT

‘ಬೇಟಿ ಬಚಾವೋ’ ಘೋಷಣೆ ಸವಕಲಾಗುತ್ತಿದ್ದಂತೆಯೇ ‘ಭಾರತ್ ಕೀ ಲಕ್ಷ್ಮೀ’ ಅಭಿಯಾನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದೇಶದ ಹೆಣ್ಣು ಮಕ್ಕಳನ್ನು ಗುರುತಿಸಲು ‘ಭಾರತ್ ಕೀ ಲಕ್ಷ್ಮೀ’ ಅಭಿಯಾನ ಆರಂಭಿಸಲು ಮನ್ ಕೀ ಬಾತ್‌ನಲ್ಲಿ ಮೋದಿ ಕರೆ ನೀಡಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಹೆಣ್ಣು ಮಕ್ಕಳು ಜಾತಿಯ ಕಾರಣಕ್ಕಾಗಿ ಕಿರುಕುಳ ಅನುಭವಿಸುತ್ತಿದ್ದಾರೆ. ಸ್ವತಃ ಮೋದಿ ಪಕ್ಷದೊಳಗಿರುವ ನಾಯಕರೂ ‘ಈ ಲಕ್ಷ್ಮೀಯರ ಅತ್ಯಾಚಾರ’ ಮಾಡಿದ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಈ ನಾಯಕರ ವಿರುದ್ಧ ನ್ಯಾಯ ಕೇಳಲು ಪೊಲೀಸ್ ಠಾಣೆ ಹತ್ತಿದ ಲಕ್ಷ್ಮೀಯರು ಒಂದೋ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸುವ ಹಂತ ತಲುಪಿದ್ದ್ದಾರೆ, ಇಲ್ಲವೇ ಸ್ವತಃ ಜೈಲು ಕಂಬಿ ಎಣಿಸುತ್ತಿದ್ದಾರೆ. ಈ ನತದೃಷ್ಟ ಲಕ್ಷ್ಮೀಯರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಯಾವುದೇ ಹೇಳಿಕೆಗಳನ್ನು ನೀಡದೇ ಇರುವುದು ದೇಶದ ಪಾಲಿನ ಸದ್ಯದ ಆತಂಕವಾಗಿದೆ. ಉನ್ನಾವೋ ಪ್ರಕರಣ ಈ ದೇಶದಲ್ಲಿ ಅತ್ಯಾಚಾರ ಸಂತ್ರಸ್ತೆಯೊಬ್ಬಳು ನ್ಯಾಯ ಕೇಳಿದರೆ ಅದರ ಪರಿಣಾಮ ಏನಾಗಬಹುದು ಎನ್ನುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ಉನ್ನಾವೋದಲ್ಲಿ ಬಿಜೆಪಿಯ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ನಿಂದ ಸತತ ಅತ್ಯಾಚಾರಕ್ಕೊಗಾಗಿದ್ದಾಳೆ ಎನ್ನಲಾದ 17 ವರ್ಷ ಪ್ರಾಯದ ತರುಣಿಯೊಬ್ಬಳು, ನ್ಯಾಯಕ್ಕಾಗಿ ಪೊಲೀಸ್ ಠಾಣೆಯೇರಿದ ತಪ್ಪಿಗಾಗಿ ತನ್ನ ಕುಟುಂಬವನ್ನು ಕಳೆದುಕೊಂಡು ತಾನೂ ಸಾವು ಬದುಕಿನ ನಡುವೆ ಹೋರಾಟ ನಡೆಸಬೇಕಾದ ಸ್ಥಿತಿಗೆ ಬಂದು ನಿಂತಿದ್ದಾಳೆ. ಸಂತ್ರಸ್ತೆ ಉತ್ತರ ಪ್ರದೇಶದ ಮುಖ್ಯಮಂತ್ರಿಯ ನಿವಾಸದ ಮುಂದೆ ಆತ್ಮಹತ್ಯೆಗೆ ಯತ್ನಿಸಿದಾಗಷ್ಟೇ ಪ್ರಕರಣ ಜಗಜ್ಜಾಹೀರಾಯಿತು. ಆರಂಭದಲ್ಲಿ ನ್ಯಾಯ ಕೇಳಿದ ಮಹಿಳೆಯ ವಿರುದ್ಧವೇ ಪ್ರಕರಣ ದಾಖಲಿಸಲಾಯಿತು. ಈಕೆಯ ತಂದೆಯ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವುದು ಮಾತ್ರವಲ್ಲ, ಬಳಿಕ ಇವರ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಬಂಧಿಸಲಾಯಿತು. ಪೊಲೀಸ್ ಠಾಣೆಯಲ್ಲೂ ಸಂತ್ರಸ್ತೆಯ ತಂದೆಯ ಮೇಲೆ ಹಲ್ಲೆ ನಡೆಸಲಾಯಿತು. ಇದಾದ ಬಳಿಕ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು. ದುರಂತ ಇಷ್ಟಕ್ಕೇ ಮುಗಿಯಲಿಲ್ಲ. ಶಾಸಕನ ಬೆದರಿಕೆಗೆ ಮಣಿಯದೆ ಅತ್ಯಾಚಾರ ಸಂತಸ್ತೆ, ತನ್ನ ಹೋರಾಟವನ್ನು ಮುಂದುವರಿಸಿದಳು. ಪರಿಣಾಮ, ಈಕೆ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಅನಾಮಿಕ ಟ್ರಕ್ ಒಂದು ಢಿಕ್ಕಿ ಹೊಡೆಯಿತು. ಇಬ್ಬರು ಕುಟುಂಬಿಕರನ್ನು ಆಕೆ ಈ ಅಪಘಾತದಲ್ಲಿ ಕಳೆದುಕೊಳ್ಳಬೇಕಾಯಿತು. ಸಂತ್ರಸ್ತೆ ಸಾವು ಬದುಕಿನ ನಡುವೆ ಒದ್ದಾಡುವ ಸ್ಥಿತಿ ನಿರ್ಮಾಣವಾಯಿತು. ಇಂದಿಗೂ ಆಕೆ ಜೀವಬೆದರಿಕೆಯನ್ನು ಎದುರಿಸುತ್ತಿದ್ದಾಳೆ ಎಂದು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಒಂದೆಡೆ ಮಹಿಳೆಯ ಮೇಲೆ ಅತ್ಯಾಚಾರ, ಮಗದೊಂದೆಡೆ ನ್ಯಾಯ ಕೇಳಿದ ತಪ್ಪಿಗಾಗಿ ಕುಟುಂಬಿಕರ ಸಾಮೂಹಿಕ ಕೊಲೆ, ಜೊತೆಗೆ ಸಂತ್ರಸ್ತೆಯೇ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಒದ್ದಾಡುವ ಸ್ಥಿತಿ. ಆರೋಪಿಗೆ ಸರಕಾರದ ಬೆಂಬಲವಿಲ್ಲದೇ ಇದ್ದರೆ ಸಂತ್ರಸ್ತೆಗೆ ಇಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತೇ? ತನ್ನನ್ನು ತಾನು ಸನ್ಯಾಸಿ ಎಂದು ಕರೆದುಕೊಳ್ಳುವ, ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದ ಸ್ವಯಂಘೋಷಿತ ಯೋಗಿ ಆದಿತ್ಯನಾಥ್ ಅವರ ರಾಜ್ಯದಲ್ಲಿ ಇದು ಸಂಭವಿಸಿದೆ. ಬಿಜೆಪಿಯ ಮುಖಂಡರು ಅತ್ಯಾಚಾರ ಆರೋಪಿ ಸೆಂಗಾರ್‌ನಿಗೆ ಬಹಿರಂಗವಾಗಿ ಬೆಂಬಲ ನೀಡುತ್ತಿದ್ದಾರೆ. ಈ ದೇಶದ ಸಂಸ್ಕೃತಿ ರಕ್ಷಕರ ಮುಖವಾಡವನ್ನು ಉನ್ನಾವೋ ಘಟನೆ ಹರಿದೊಗೆದಿದೆ. ನರೇಂದ್ರ ಮೋದಿಯವರು ‘ಬೇಟಿ ಬಚಾವೋ’ ಮಾಡಲು ತಕ್ಷಣ ಉತ್ತರ ಪ್ರದೇಶಕ್ಕೆ ಧಾವಿಸಬೇಕಾಗಿದೆ. ‘ಭಾರತ್ ಕೀ ಲಕ್ಷ್ಮೀ’ ಪ್ರಶಸ್ತಿಯನ್ನು ಅತ್ಯಾಚಾರಿಯೊಬ್ಬನ ವಿರುದ್ಧ ಬದುಕನ್ನು ಪಣವಾಗಿಟ್ಟು ಹೋರಾಡುತ್ತಿರುವ ಸಂತ್ರಸ್ತೆಗೆ ಮೋದಿಯವರು ತಮ್ಮ ಕೈಯಾರೆ ಅರ್ಪಿಸಬೇಕಾಗಿದೆ.

ಉನ್ನಾವೋ ಪ್ರಕರಣ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ಹೊತ್ತಿನಲ್ಲಿ ಬಿಜೆಪಿಯ ಸಂಸದ ‘ಮಾಜಿ ಸಂತ’ ಚಿನ್ಮಯಾನಂದನ ಅತ್ಯಾಚಾರ ಪ್ರಕರಣ ಬಯಲಿಗೆ ಬಂತು. ವಕೀಲ ವೃತ್ತಿ ಕಲಿಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಜೀವ ಬೆದರಿಕೆಯೊಡ್ಡಿ ಸತತ ಅತ್ಯಾಚಾರ ಮಾಡಿರುವುದು ಬಹಿರಂಗವಾಗುತ್ತಿದ್ದ ಹಾಗೆಯೇ ಆದಿತ್ಯನಾಥ್ ನೇತೃತ್ವದ ಸರಕಾರದ ಇನ್ನೂ ಒಂದು ಮುಖ ಕಳಚಿ ಬಿತ್ತು. ಈ ಹಿಂದೆ ಗುರುತಿಸಿಕೊಂಡ ಶಾಸಕ ಒಬ್ಬ ರಾಜಕಾರಣಿ. ಆದರೆ ಈ ಬಾರಿ ಅತ್ಯಾಚಾರದಲ್ಲಿ ಗುರುತಿಸಿಕೊಂಡವನು ಸಂಸದ ಮಾತ್ರವಲ್ಲ, ಈತನನ್ನು ಹಿಂದೂ ಸಮಾಜ ಸಂತ ಎಂದು ಗುರುತಿಸಿತ್ತು. ಬರೀ ದುರ್ಬಲ ಆರೋಪವಾಗಿದ್ದರೆ ಈ ನಕಲಿ ಸಂತ ಬಚಾವಾಗುತ್ತಿದ್ದನೋ ಏನೋ? ಆದರೆ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಶೋಷಿಸುವ ಮತ್ತು ಈ ಸಂತ ಸಂಪೂರ್ಣ ಬೆತ್ತಲೆಯಾಗಿ ತರುಣಿಯಿಂದ ಮಸಾಜ್ ಮಾಡಿಸಿಕೊಳ್ಳುವ ವೀಡಿಯೊ ಮಾಧ್ಯಮಗಳಲ್ಲಿ ಬಹಿರಂಗವಾದ ಬಳಿಕ ಸರಕಾರ ಎಚ್ಚರಗೊಂಡಿತು. ಚಿನ್ಮಯಾನಂದನನ್ನು ಬಂಧಿಸಲಾಯಿತಾದರೂ, ಆತನ ಜೊತೆ ಜೊತೆಗೇ ದೂರು ದಾಖಲಿಸಿ ಸಂತ್ರಸ್ತೆಯನ್ನೂ ಬಂಧಿಸಲಾಯಿತು. ಉನ್ನಾವೋ ಅತ್ಯಾಚಾರದ ವಿಪರ್ಯಾಸ, ಚಿನ್ಮಯಾನಂದ ಪ್ರಕರಣದಲ್ಲೂ ಮರುಕಳಿಸಿತು. ಸಂತ್ರಸ್ತೆ ಇಲ್ಲಿ ಜೈಲು ಸೇರಿದಳು. ಚಿನ್ಮಯಾನಂದ ಆರೋಗ್ಯದ ಕಾರಣವೊಡ್ಡಿ ಜೈಲಿನಿಂದ ಆಸ್ಪತ್ರೆ ಸೇರಿ ಐಶಾರಾಮ ಬದುಕು ನಡೆಸುತ್ತಿದ್ದಾನೆ. ಇಲ್ಲಿಯೂ ಆರೋಪಿಯನ್ನು ಬಂಧಿಸಬೇಕಾದರೆ, ಸಂತ್ರಸ್ತೆ ಆತ್ಮಹತ್ಯೆಯ ಬೆದರಿಕೆಯನ್ನು ಒಡ್ಡಬೇಕಾಯಿತು.

ಮಹಿಳೆ ಇಂದಿಗೂ ನಾಲ್ಕೂ ದಿಕ್ಕುಗಳಿಂದ ಜೀವ ಬೆದರಿಕೆಯನ್ನು ಎದುರಿಸುತ್ತಿದ್ದಾಳೆ. ಪ್ರಧಾನಿ ನರೇಂದ್ರ ಮೋದಿ ಯಾರಿಗಾದರೂ ‘ಭಾರತ್ ಕೀ ಲಕ್ಷ್ಮೀ’ ಪ್ರಶಸ್ತಿ ನೀಡಲು ಉದ್ದೇಶಿಸಿದ್ದರೆ, ನೇರವಾಗಿ ಈಕೆಯನ್ನು ಜೈಲಿನಲ್ಲಿ ಭೇಟಿ ಮಾಡಿ, ಪ್ರಶಸ್ತಿಯನ್ನು ಕೊಟ್ಟು ಆಕೆಗೆ ನೈತಿಕ ಧೈರ್ಯ ತುಂಬುವ ಅವಕಾಶವಿದೆ. ಪ್ರಶ್ನೆ ಇದಲ್ಲ. ಸಾರ್ವಜನಿಕವಾಗಿ ಬೆತ್ತಲೆಯಾಗಿರುವ ಈ ‘ಸಂತ’ ಚಿನ್ಮಯಾನಂದ ಅಯೋಧ್ಯೆ ಆಂದೋಲನದ ಪ್ರಮುಖನಾಗಿದ್ದ. ಸಂತರ ವೇಷದಲ್ಲಿ ರಾಮನನ್ನು ಮುಂದಿಟ್ಟು ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ಮುಂದಾಗಿದ್ದ. ಇಂತಹ ಅತ್ಯಾಚಾರ ಆರೋಪಿಗಳ ನೇತೃತ್ವದಲ್ಲಿ ನಿರ್ಮಾಣಗೊಳ್ಳಲಿರುವ ರಾಮಮಂದಿರದಲ್ಲಿ ರಾಮ ನೆಲೆಸಲು ಸಾಧ್ಯವೇ? ಅಷ್ಟೆಲ್ಲ ಯಾಕೆ? ಕರ್ನಾಟಕದಲ್ಲೇ, ರಾಮನ ಹೆಸರನ್ನು ಹೊಂದಿದ, ಗೋವಿನ ಹೆಸರಲ್ಲಿ ಹಣ ಲೂಟಿ ಹೊಡೆದು ಬೃಹತ್ ಸಾಮ್ರಾಜ್ಯವನ್ನೇ ಕಟ್ಟಿರುವ ಸ್ವಾಮೀಜಿಯೊಬ್ಬರು ಅತ್ಯಾಚಾರ ಪ್ರಕರಣದಲ್ಲಿ ಗುರುತಿಸಿಕೊಂಡರು. ಇಲ್ಲೂ ಅತ್ಯಾಚಾರ ಸಂತ್ರಸ್ತೆಯೇ ಅಂತಿಮವಾಗಿ ಆರೋಪಿಯಾಗಬೇಕಾಯಿತು. ಆರೋಪ ಮಾಡಿದ ಕಾರಣಕ್ಕಾಗಿಯೇ ಆಕೆಯ ಕುಟುಂಬದ ಸದಸ್ಯನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಯಿತು.

ಇಷ್ಟಾದರೂ, ಆರೋಪಿ ಸನ್ಯಾಸಿಯ ವೇಷಧರಿಸಿ, ರಾಮಾಯಣ ಕತೆ ಹೇಳುತ್ತಾ ಸಾರ್ವಜನಿಕವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸ್ವಾಮಿ ವಿವೇಕಾನಂದ, ಅರವಿಂದಘೋಷ್, ನಾರಾಯಣ ಗುರು ಮೊದಲಾದವರಿಂದ ತಿದ್ದಲ್ಪಟ್ಟ ಹಿಂದೂ ಧರ್ಮ ಇಂದು, ಸಂಸ್ಕೃತಿ ರಕ್ಷಕರು, ನಕಲಿ ಸಾಧು ಸಂತರ ವೇಷದಲ್ಲಿರುವ ಗೂಂಡಾ, ಹಫ್ತಾ ವಸೂಲಿಗಾರರ ಕೈಯಲ್ಲಿ ನರಳುತ್ತಿವೆ. ಬಹುಶಃ ಇತಿಹಾಸದಲ್ಲಿ ಪರಕೀಯರ ಆಡಳಿತದಲ್ಲೂ ಹಿಂದೂ ಧರ್ಮಕ್ಕೆ ಇಂತಹ ಸ್ಥಿತಿ ಒದಗಿರಲಿಲ್ಲವೇನೋ. ನರೇಂದ್ರ ಮೋದಿಯವರು ತಕ್ಷಣ ಈ ಸಂಸ್ಕೃತಿ ರಕ್ಷಕರಿಂದ ‘ಭಾರತದ ಲಕ್ಷ್ಮೀ’ಯರನ್ನು ರಕ್ಷಿಸಲು ಒಂದು ಅಭಿಯಾನ ಆರಂಭಿಸಬೇಕಾಗಿದೆ. ಆ ಮೂಲಕ ಹಿಂದೂಧರ್ಮವನ್ನೂ ರಕ್ಷಿಸುವ ಕೆಲಸ ಜೊತೆ ಜೊತೆಗೇ ನಡೆದಂತಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News