ಮಾಂಸಾಹಾರಿಗಳಿಗೆ ಶುಭಸುದ್ದಿ!

Update: 2019-10-01 16:45 GMT

ಮಾಂಸಾಹಾರಿಗಳಿಗೆ ಶುಭಸುದ್ದಿ ಬಂದಿದೆ. ಸಾಮಾನ್ಯವಾಗಿ ಅನಾರೋಗ್ಯಕ್ಕೆ ಮಾಂಸಾಹಾರವೇ ಪ್ರಮುಖ ಕಾರಣ, ಸಸ್ಯಾಹಾರದಿಂದ ದೇಹ ಆರೋಗ್ಯವಾಗಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಅಮೇರಿಕನ್ ಕಾಲೇಜ್ ಆಫ್ ಫಿಸಿಶಿಯನ್ಸ್ ಪ್ರಕಟಿಸಿರುವ ‘ಅನ್ನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್’ ಎಂಬ ವೈದ್ಯಕೀಯ ಅಧ್ಯಯನ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಸಂಶೋಧನಾ ವರದಿ ಸರಣಿಯ ಪ್ರಕಾರ ಮಾಂಸಾಹಾರದಿಂದ ( ರೆಡ್ ಮೀಟ್  ಎಂದು ಕರೆಯಲಾಗುವ ಕುರಿ, ಹಂದಿ ಮಾಂಸ ಹಾಗು ಬೀಫ್ ) ಆರೋಗ್ಯಕ್ಕೆ ಸಮಸ್ಯೆ ಉಂಟಾಗುವ ಪ್ರಮಾಣ ಅತ್ಯಂತ ಇಲ್ಲ ಎನ್ನುವಷ್ಟು ಕಡಿಮೆ!

ಈ ಬಗ್ಗೆ ವಿವರವಾಗಿ ಅಧ್ಯಯನ ನಡೆಸಿರುವ ಸಂಶೋಧಕರ ತಂಡದ ಪ್ರಕಾರ ವಯಸ್ಕರು ಮಾಂಸಾಹಾರ ಹಾಗು ಇತರ ಸಂಸ್ಕರಿಸಿದ ಅಥವಾ ಸಂಸ್ಕರಿಸದ ಆಹಾರ ಪದಾರ್ಥಗಳನ್ನು ತಿನ್ನುವುದರಲ್ಲಿ  ಸಮಸ್ಯೆ ಇಲ್ಲ. ಈ ಮಾಂಸಾಹಾರದಿಂದ ಆರೋಗ್ಯದ ಮೇಲೆ ತೀರಾ ಸಣ್ಣ ಪ್ರಮಾಣದ ಅಡ್ಡ ಪರಿಣಾಮ ಮಾತ್ರ ಬೀಳುತ್ತದೆ. ಅವರಿಗೆ ಪೌಷ್ಟಿಕಾಂಶಕ್ಕೆ ಹೊರತುಪಡಿಸಿ ಇತರ ಕಾರಣಗಳಿಗಾಗಿ ಮಾಂಸಾಹಾರ ಬಿಡಬೇಕು ಎಂದು ಬಲವಾಗಿ ಅನಿಸಿದರೆ ಮಾತ್ರ ಅವರು ಹಾಗೆ ಮಾಡಬಹುದು.  ಸಮಗ್ರವಾಗಿ ಅಧ್ಯಯನ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ. ಇದಕ್ಕೆ ವಿರುದ್ಧವಾಗಿ ವಾದ ಮಾಡುವವರ ಬಳಿ ಇಷ್ಟು ಬಲವಾದ ಪುರಾವೆ ಇಲ್ಲ ಎಂದು ಈ ಸಂಶೋಧಕರ ತಂಡ ಹೇಳಿದೆ. ಈ ಅಧ್ಯಯನಕ್ಕೆ ಲಕ್ಷಾಂತರ ರೋಗಿಗಳ ಮಾಹಿತಿಯನ್ನು ಪರಿಶೀಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಜನರ ಆಹಾರದ ಶೈಲಿ, ಮಾಂಸಾಹಾರದ ಪ್ರಮಾಣ ಇತ್ಯಾದಿಗಳು ಮರಣ ಪ್ರಮಾಣ, ಹೃದಯ ಸಂಬಂಧಿ ಸಮಸ್ಯೆಗಳು , ಕ್ಯಾನ್ಸರ್ ಇತ್ಯಾದಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂದು ವಿವರವಾಗಿ ಅಧ್ಯಯನ ನಡೆಸಲಾಗಿದೆ.ಇದರಲ್ಲಿ 60 ಲಕ್ಷ ಜನರ ಮಾಹಿತಿಗಳನ್ನು ಒಳಗೊಂಡ 100ಕ್ಕೂ ಹೆಚ್ಚು ಅಧ್ಯಯನ ವರದಿಗಳನ್ನು ವಿವರವಾಗಿ ಪರಿಶೀಲಿಸಲಾಗಿದೆ. ಇದರ ಒಟ್ಟಾರೆ ಫಲಿತಾಂಶವೇನೆಂದರೆ, ಆಹಾರ ಶೈಲಿ ಹಾಗು ಮಾಂಸಾಹಾರ  ಅತ್ಯಂತ ಸಣ್ಣ ಪ್ರಮಾಣದಲ್ಲಿ ಮಾತ್ರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಹಾಗೆಯೆ, ಮಾಂಸಾಹಾರ ತ್ಯಜಿಸಿದ ಅಥವಾ ಕಡಿಮೆ ಮಾಡಿದ 60 ಲಕ್ಷಕ್ಕೂ ಹೆಚ್ಚು ಜನರ ಮಾಹಿತಿಗಳಿದ್ದ 118 ಅಧ್ಯಯನಗಳನ್ನು ಪರಿಶೀಲಿಸಿದಾಗ ಅವರ ಬದಲಾದ ಆಹಾರದಿಂದ ಆರೋಗ್ಯದ ಮೇಲೆ ಬೀರಿದ ಪರಿಣಾಮ ಬಹಳ ಸಣ್ಣ ಪ್ರಮಾಣದ್ದು ಎಂದು ತಿಳಿದು ಬಂದಿದೆ.

ಇನ್ನು ಆರೋಗ್ಯದ ಕಾರಣಕ್ಕೆ ಅಲ್ಲದೆ ಪರಿಸರ ಹಾಗು ಪ್ರಾಣಿಗಳ ಮೇಲಿನ ದೌರ್ಜನ್ಯದ ಕಾರಣಕ್ಕೆ ಮಾಂಸಾಹಾರ ಬಿಡುವ ಸಂಖ್ಯೆ ದೊಡ್ಡದಿದೆ ಎಂದು ಹೇಳಿರುವ ಈ ಅಧ್ಯಯನ ಈ ಕಾರಣಗಳಿಗೆ ಕೆಲವರು ಆರೋಗ್ಯದ ಕಾರಣವನ್ನೂ ಸೇರಿಸಿಕೊಳ್ಳುತ್ತಾರೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News