ಭಾರತದ ಕುರಿತ ಗಾಂಧೀಜಿಯ ಕಲ್ಪನೆ ಕಳೆದ ಐದು ವರ್ಷದಲ್ಲಿ ಬುಡಮೇಲು: ಸೋನಿಯಾ ಟೀಕೆ

Update: 2019-10-02 15:27 GMT

ಹೊಸದಿಲ್ಲಿ, ಅ.2: ಭಾರತದ ಬಗ್ಗೆ ಮಹಾತ್ಮಾ ಗಾಂಧೀಜಿಗೆ ಇದ್ದ ಕಲ್ಪನೆಯನ್ನು ಕಳೆದ ಐದು ವರ್ಷದ ಭಾರತ ಬುಡಮೇಲುಗೊಳಿಸಿದೆ ಎಂದು ಕಾಂಗ್ರೆಸ್‌ನ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಅಂಗವಾಗಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಪಾದಯಾತ್ರೆಯ ಬಳಿಕ ರಾಜಘಾಟ್‌ನಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗಾಂಧೀಜಿಯವರ ಸಿದ್ಧಾಂತಗಳು ಭಾರತದ ಮೂಲಾಧಾರವಾಗಿತ್ತು. ಆದರೆ ಕಳೆದ ಐದು ವರ್ಷದಲ್ಲಿ ನಾವು ಕಾಣುತ್ತಿರುವ ಭಾರತ ಈ ಮೂಲಾಧಾರವನ್ನು ನಡುಗಿಸಿದೆ. ಮಾತು ಮಾತಿಗೂ ಗಾಂಧೀಜಿಯವರ ಹೇಳಿಕೆಯನ್ನು ಉಲ್ಲೇಖಿಸುವುದು ತುಂಬಾ ಸುಲಭ, ಆದರೆ ಅವರ ಆದರ್ಶವನ್ನು ಪಾಲಿಸುವುದು ಸುಲಭವಲ್ಲ. ಗಾಂಧೀಜಿಯವರ ಹೆಸರನ್ನು ಬಳಸಿಕೊಂಡು ಅವರ ಸಿದ್ಧಾಂತಕ್ಕೆ ತಿಲಾಂಜಲಿ ನೀಡಿ ದೇಶದ ದಾರಿತಪ್ಪಿಸುವವರು ತಮ್ಮ ಕಾರ್ಯದಲ್ಲಿ ಯಶಸ್ವಿಯಾಗುವುದಿಲ್ಲ . ಆರೆಸ್ಸೆಸ್ ಅನ್ನು ದೇಶದ ಸಂಕೇತವಾಗಿಸಲು ಹಾಗೂ ಮಹಾತ್ಮಾ ಗಾಂಧೀಜಿಯನ್ನು ಅಪ್ರಸ್ತುತವಾಗಿಸಲು ಪ್ರಯತ್ನಿಸುವವರು, ಸರ್ವಾಧಿಕಾರವನ್ನು ಬಯಸುವವರು ಗಾಂಧೀಜಿಯನ್ನು ಎಂದಿಗೂ ಅರಿಯಲು ಸಾಧ್ಯವಿಲ್ಲ ಎಂದು ಸೋನಿಯಾ ಹೇಳಿದ್ದಾರೆ.

 ಬಿಜೆಪಿ ಮುಖಂಡರಾದ ಚಿನ್ಮಯಾನಂದ ಹಾಗೂ ಕುಲ್‌ದೀಪ್ ಸೆಂಗರ್ ವಿರುದ್ಧದ ಅತ್ಯಾಚಾರ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ಇಂದಿನ ಭಾರತದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲವಾಗಿದೆ. ಅಧಿಕಾರದಲ್ಲಿರುವವರು ಅಪರಾಧ ಎಸಗಿಯೂ ಸುಲಭದಲ್ಲಿ ಬಚಾವಾಗುತ್ತಾರೆ ಎಂದರು.

     ಆದರೆ ಕಾಂಗ್ರೆಸ್ ಯಾವತ್ತೂ ಗಾಂಧೀಜಿ ಸಿದ್ಧಾಂತವನ್ನು ಅನುಸರಿಸಿದ ಪಕ್ಷವಾಗಿದ್ದು ಮುಂದೆಯೂ ರಾಷ್ಟ್ರಪಿತ ತೋರಿದ ದಾರಿಯಲ್ಲಿಯೇ ಸಾಗುತ್ತದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಗಾಂಧೀಜಿಯವರ ಚಿಂತನೆಗಳನ್ನು ಆದರ್ಶವಾಗಿರಿಸಿಕೊಂಡು ಉದ್ಯೋಗ ಸೃಷ್ಟಿಸಲು, ಬಡವರ ಉದ್ಧಾರಕ್ಕೆ, ಮಹಿಳಾ ಸಬಲೀಕರಣಕ್ಕೆ, ಯುವಜನತೆಗೆ ಶಿಕ್ಷಣ ಒದಗಿಸಲು ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಸೋನಿಯಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News