ಭಾರತ ತನ್ನಿಂದ ತೈಲ ಖರೀದಿಸುತ್ತಿಲ್ಲ ಎಂದು ಇರಾನ್ ನಿರಾಶಗೊಂಡಿಲ್ಲ: ಎಸ್.ಜೈಶಂಕರ್

Update: 2019-10-02 15:45 GMT

 ವಾಷಿಂಗ್ಟನ್,ಅ.2: ಭಾರತವು ಇರಾನ್‌ನೊಂದಿಗೆ ಬಲವಾದ ರಾಜಕೀಯ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿದೆ ಎಂದು ಹೇಳಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು,ಅಮೆರಿಕದ ಕಠಿಣ ನಿರ್ಬಂಧಗಳ ಹಿನ್ನೆಲೆಯಲ್ಲಿ ಭಾರತವು ತನ್ನಿಂದ ತೈಲವನ್ನು ಖರೀದಿಸುತ್ತಿಲ್ಲವೆಂದು ಇರಾನ್ ನಿರಾಶಗೊಂಡಿದೆ ಎಂಬ ವರದಿಗಳನ್ನು ತಿರಸ್ಕರಿಸಿದ್ದಾರೆ.

ಮಂಗಳವಾರ ಇಲ್ಲಿ ಯುಎಸ್ ಇಂಡಿಯಾ ಸ್ಟ್ರಾಟಜಿಕ್ ಆ್ಯಂಡ್ ಪಾರ್ಟನರ್‌ಶಿಪ್ ಫೋರಮ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಜೈಶಂಕರ್,‘ ಇರಾನ್ ನಿರಾಶಗೊಂಡಿದೆ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ಇರಾನಿಗಳು ವಾಸ್ತವವಾದಿಗಳಾಗಿದ್ದಾರೆ ಎಂದು ನಾನು ಭಾವಿಸಿದ್ದೇನೆ. ವಿಶಾಲ ಜಾಗತಿಕ ಸನ್ನಿವೇಶದಲ್ಲಿ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ,ಅವರೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಜಗತ್ತಿನಲ್ಲಿ ನಾವು ಪರಸ್ಪರರ ಅನಿವಾರ್ಯತೆಗಳನ್ನು ಮತ್ತು ಸಾಧ್ಯತೆಗಳನ್ನು ತಿಳಿದುಕೊಂಡಿದ್ದೇವೆ ’ ಎಂದು ಹೇಳಿದರು.

ಅಮೆರಿಕ ನಿರ್ಬಂಧ ಉಲ್ಲಂಘನೆಯನ್ನು ನಿವಾರಿಸಲು ಇರಾನಿನಿಂದ ತೈಲವನ್ನು ಖರೀದಿಸದಿರುವ ಭಾರತದ ನಿರ್ಧಾರದಿಂದ ಆ ದೇಶಕ್ಕೆ ನಿರಾಶೆಯಾಗಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

‘ ನಮ್ಮ ದೃಷ್ಟಿಕೋನದಲ್ಲಿ ನಾವು ಕೈಗೆಟಕುವ ಬೆಲೆಗಳಲ್ಲಿ ಖಚಿತ ತೈಲ ಮತ್ತು ಅನಿಲ ಖರೀದಿಯನ್ನು ಹೇಗೆ ಮುಂದುವರಿಸುತ್ತೇವೆ ಎನ್ನುವುದು ನಿಜವಾದ ವಿಷಯವಾಗಿದೆ. ಈವರೆಗೆ ಅದನ್ನು ಸಾಧ್ಯವಾಗಿಸಲಾಗಿದೆ ’ ಎಂದ ಜೈಶಂಕರ್,ಕೊಲ್ಲಿಯಲ್ಲಿ ಅಸ್ಥಿರತೆ ಮತ್ತು ಉದ್ವಿಗ್ನತೆ ಸ್ಥಿತಿಯ ಬಗ್ಗೆ ಭಾರತವು ಕಳವಳಗೊಂಡಿದೆ ಎಂದು ಹೇಳಿದರು.

‘ ನಾವು ಬೃಹತ್ ಇಂಧನ ಆಮದು ರಾಷ್ಟ್ರವಾಗಿದ್ದೇವೆ. ನಮಗೆ ಕೈಗೆಟಕುವ ಬೆಲೆಗಳಲ್ಲಿ ಇಂಧನದ ಖಚಿತ ಲಭ್ಯತೆ ಮುಖ್ಯವಾಗಿದೆ. ಇದು ಆಗುತ್ತದೆ ಎಂದು ನಮಗೆ ಪದೇಪದೇ ಭರವಸೆ ನೀಡಲಾಗಿದೆ. ಇದೇ ವೇಳೆ ಭಾರತವು ಇರಾನ್ ಜೊತೆ ಹಲವಾರು ಇತರ ಸಂಬಂಧಗಳನ್ನು ಹೊಂದಿದೆ. ನಾವು ಪ್ರಬಲ ರಾಜಕೀಯ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿದ್ದೇವೆ. ನಾವು ಅವರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ, ವಾಸ್ತವದಲ್ಲಿ ಅಫಘಾನಿಸ್ತಾನಕ್ಕೆ ಸೇವೆ ಒದಗಿಸುತ್ತಿರುವ ಅಲ್ಲಿಯ ಬಂದರನ್ನು ನಾವು ನಿರ್ವಹಿಸುತ್ತಿದ್ದೇವೆ. ಇವೆಲ್ಲವೂ ನಮ್ಮ ಹಿತಾಸಕ್ತಿಗಳಾಗಿದ್ದು, ಅವುಗಳನ್ನು ನಾವು ರಕ್ಷಿಸುತ್ತೇವೆ ’ಎಂದರು.

 ಇರಾನಿನ ವ್ಯೂಹಾತ್ಮಕ ಚಬಹಾರ್ ಬಂದರನ್ನು ಭಾರತವು ನಿರ್ವಹಿಸುತ್ತಿದೆ. ಹಿಂದು ಮಹಾಸಾಗರದಲ್ಲಿ ಇರಾನಿನ ಸಿಸ್ತಾನ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯದಲ್ಲಿರುವ ಈ ಬಂದರನ್ನು ಮಧ್ಯ ಏಷ್ಯಾ ರಾಷ್ಟ್ರಗಳೊಂದಿಗೆ ವ್ಯಾಪಾರ ನಡೆಸಲು ಭಾರತ ,ಇರಾನ್ ಮತ್ತು ಅಫಘಾನಿಸ್ತಾನಕ್ಕೆ ಸುವರ್ಣಾವಕಾಶಗಳನ್ನು ಒದಗಿಸಿರುವ ಹೆಬ್ಬಾಗಿಲು ಎಂದು ಪರಿಗಣಿಸಲಾಗಿದೆ.

ಭಾರತದ ಪಶ್ಚಿಮ ಕರಾವಳಿಯಿಂದ ಸುಲಭವಾಗಿ ಸಂಪರ್ಕಿಸಬಹುದಾದ ಚಬಹಾರ್ ಚೀನಾದ ಹೂಡಿಕೆಯೊಂದಿಗೆ ಅಭಿವೃದ್ಧಿಗೊಳ್ಳುತ್ತಿರುವ ಪಾಕಿಸ್ತಾನದ ಗ್ವಾದಾರ್ ಬಂದರಿಗೆ ಉತ್ತರವೆಂಬಂತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News