ಪಾಕ್ ವಿರುದ್ಧ 71 ವರ್ಷಗಳ ಹಿಂದಿನ ಪ್ರಕರಣ ಗೆದ್ದ ಭಾರತ
ಲಂಡನ್, ಅ. 2: 1948ರಲ್ಲಿ ಹೈದರಾಬಾದ್‌ನ ನಿಜಾಮರು ಪಾಕಿಸ್ತಾನದ ಹೈಕಮಿಶನರ್‌ರ ಬ್ಯಾಂಕ್ ಖಾತೆಗೆ ಕಳುಹಿಸಿದ 10 ಲಕ್ಷ ಪೌಂಡ್ ಹಣವು ತನಗೆ ಸೇರಿದೆ ಎಂಬ ಪಾಕಿಸ್ತಾನದ ದಶಕಗಳ ಹಳೆಯ ಕೋರಿಕೆಯನ್ನು ಇಂಗ್ಲೆಂಡ್ ಮತ್ತು ವೇಲ್ಸ್‌ನ ಹೈಕೋರ್ಟ್ ಬುಧವಾರ ತಳ್ಳಿಹಾಕಿದೆ.
ನ್ಯಾಯಾಲಯದ ಈ ಆದೇಶವು ಭಾರತ ಮತ್ತು ಹೈದರಾಬಾದ್‌ನ ಏಳನೇ ನಿಜಾಮ ಮಿರ್ ಉಸ್ಮಾನ್ ಅಲಿ ಖಾನ್‌ರ ಇಬ್ಬರು ವಂಶಸ್ಥರಿಗೆ ಪೂರಕವಾಗಿ ಬಂದಿದೆ.
ಹೈದರಾಬಾದ್‌ನ ನಿಜಾಮರು ‘ಜೋಪಾನವಾಗಿ ಇಟ್ಟುಕೊಳ್ಳಲು’ ಕಳುಹಿಸಿದ್ದ ಹಣವು ನಿಜಾಮರ ವಂಶಸ್ಥರಾದ ‘ಹೈದರಾಬಾದ್‌ನ 8ನೇ ನಿಜಾಮ’ (ನಾಮಮಾತ್ರ) ಮುಕರ್ರಮ್ ಜಾಹ್ ಮತ್ತು ಅವರ ತಮ್ಮ ಮುಫಖಾಮ್ ಜಾಹ್‌ಗೆ ಸೇರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಈ ಇಬ್ಬರು ನಿಜಾಮ ವಂಶಸ್ಥರು ಪಾಕಿಸ್ತಾನದ ವಿರುದ್ಧದ ಕಾನೂನು ಹೋರಾಟದಲ್ಲಿ ಭಾರತ ಸರಕಾರದೊಂದಿಗೆ ಕೈಜೋಡಿಸಿದ್ದರು.
71 ವರ್ಷಗಳ ಹಿಂದೆ ಲಂಡನ್‌ನ ಬ್ಯಾಂಕ್‌ಗೆ ವರ್ಗಾವಣೆಯಾಗಿದ್ದ 10 ಲಕ್ಷ ಪೌಂಡ್ ಈಗ 3.5 ಕೋಟಿ ಪೌಂಡ್ (ಸುಮಾರು 306 ಕೋಟಿ ರೂಪಾಯಿ) ಆಗಿ ಬೆಳೆದಿದೆ. ಈ ಹಣ ಈಗ ಬ್ರಿಟನ್‌ನ ನ್ಯಾಶನಲ್ ವೆಸ್ಟ್‌ಮಿನ್‌ಸ್ಟರ್ ಬ್ಯಾಂಕ್‌ನ ಖಾತೆಯೊಂದರಲ್ಲಿ ಇದೆ.
‘‘ಏಳನೇ ನಿಜಾಮ (ಮಿರ್ ಉಸ್ಮಾನ್ ಅಲಿ ಖಾನ್) ಈ ನಿಧಿಯ ಮಾಲೀಕರು ಹಾಗೂ ಏಳನೇ ನಿಜಾಮರ ವಾರೀಸುದಾರರಾಗಿರುವ ರಾಜಕುಮಾರರು ಮತ್ತು ಭಾರತಕ್ಕೆ ಈ ಹಣ ಸೇರುತ್ತದೆ’’ ಎಂದು ನ್ಯಾಯಮೂರ್ತಿ ಮಾರ್ಕಸ್ ಸ್ಮಿತ್ ತೀರ್ಪು ನೀಡಿದರು.
ಶಸ್ತ್ರಾಸ್ತ್ರಗಳ ಪೂರೈಕೆಗಾಗಿ ಪಾವತಿಯಾಗಿದ್ದ ಹಣ ಎಂದಿದ್ದ ಪಾಕಿಸ್ತಾನ
ಭಾರತ ವಿಭಜನೆಯ ಬಳಿಕ, ಹೈದರಾಬಾದ್‌ನ ಏಳನೇ ನಿಜಾಮ ಮಿರ್ ಉಸ್ಮಾನ್ ಅಲಿ ಖಾನ್ ಭಾರತ ಅಥವಾ ಪಾಕಿಸ್ತಾನಕ್ಕೆ ಸೇರ್ಪಡೆಗೊಳ್ಳಲು ನಿರಾಕರಿಸಿದ್ದರು. ದಾಳಿ ನಡೆಯಬಹುದು ಎಂಬ ಭೀತಿಯಿಂದ ಅವರು ತನ್ನಲ್ಲಿದ್ದ ಒಂದು ಮಿಲಿಯ ಪೌಂಡ್ ಮೊತ್ತವನ್ನು ಜೋಪಾನವಾಗಿ ಇಡುವುದಕ್ಕಾಗಿ ಪಾಕಿಸ್ತಾನ್ ಹೈಕಮಿಶನರ್ ಹಬೀಬ್ ಇಬ್ರಾಹೀಮ್ ರಹೀಮ್‌ತೂಲರ ಲಂಡನ್‌ನಲ್ಲಿರುವ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು.
ನಿಜಾಮರ ಏಳನೇ ಮೊಮ್ಮಗ ಮುಕರ್ರಮ್ ಜಾಹ್, ಆ ಹಣ ತನ್ನ ಕುಟುಂಬಕ್ಕೆ ಸೇರಿದೆ ಎಂಬ ಬೇಡಿಕೆ ಸಲ್ಲಿಸಿದ್ದರು. ಈ ಬೇಡಿಕೆಗೆ ಭಾರತ ಸರಕಾರ ಬೆಂಬಲ ವ್ಯಕ್ತಪಡಿಸಿತ್ತು.
2013ರಲ್ಲಿ, ಈ ಹಣ ತನಗೆ ಸೇರಿದ್ದು ಎಂದು ಪಾಕಿಸ್ತಾನ ಹೇಳಿತು. 1948ರಲ್ಲಿ ಹೈದರಾಬಾದ್ ಭಾರತಕ್ಕೆ ಸೇರ್ಪಡೆಗೊಳ್ಳುವ ಮೊದಲು ಅದಕ್ಕೆ ಪಾಕಿಸ್ತಾನ ಪೂರೈಸಿದ್ದ ಶಸ್ತ್ರಾಸ್ತ್ರಗಳಿಗಾಗಿ ಈ ಹಣವನ್ನು ನೀಡಲಾಗಿದೆ ಎಂದು ಅದು ಹೇಳಿತ್ತು.