ಜನರಲ್ಲಿ ಮಾದಕ ದ್ರವ್ಯದ ಚಟ ಹತ್ತಿಸಿದ ಆರೋಪ: 145 ಕೋಟಿ ರೂ. ಪರಿಹಾರ ಒಪ್ಪಂದಕ್ಕೆ ಬಂದ ಜಾನ್ಸನ್ ಆ್ಯಂಡ್ ಜಾನ್ಸನ್

Update: 2019-10-02 17:03 GMT

ವಾಶಿಂಗ್ಟನ್, ಅ. 2: ತನ್ನ ಪೇನ್‌ಕಿಲ್ಲರ್ (ನೋವು ನಿವಾರಕ ಗುಳಿಗೆ)ಗಳ ಮೂಲಕ ಜನರಲ್ಲಿ ಮಾದಕ ದ್ರವ್ಯದ ಚಟವನ್ನು ಹತ್ತಿಸಿದೆ ಎಂಬ ಆರೋಪ ಎದುರಿಸುತ್ತಿರುವ ಅಮೆರಿಕದ ಆರೋಗ್ಯ ರಕ್ಷಣೆ ಉತ್ಪನ್ನಗಳ ತಯಾರಕ ಕಂಪೆನಿ ಜಾನ್ಸನ್ ಆ್ಯಂಡ್ ಜಾನ್ಸನ್ ಓಹಿಯೊ ರಾಜ್ಯದೊಂದಿಗೆ 20.4 ಮಿಲಿಯ ಡಾಲರ್ (ಸುಮಾರು 145 ಕೋಟಿ ರೂಪಾಯಿ) ಮೊತ್ತದ ಪರಿಹಾರ ಒಪ್ಪಂದವೊಂದಕ್ಕೆ ಬಂದಿದೆ.

ಈ ಸಂಬಂಧ ಓಹಿಯೊ ರಾಜ್ಯದ ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣೆಯನ್ನು ನಿವಾರಿಸುವುದಕ್ಕಾಗಿ ಅದು ಈ ಕ್ರಮವನ್ನು ತೆಗೆದುಕೊಂಡಿದೆ. ಈ ತಿಂಗಳು ವಿಚಾರಣೆ ಆರಂಭಗೊಳ್ಳಲಿದೆ. ವಿಚಾರಣೆಗೆ ಮುನ್ನ ರಾಜ್ಯದೊಂದಿಗೆ ಒಪ್ಪಂದಕ್ಕೆ ಬರಲು ಹಲವು ಔಷಧ ತಯಾರಿಕಾ ಕಂಪೆನಿಗಳು ಒಪ್ಪಿಕೊಂಡಿವೆ.

ಕಳೆದ ಎರಡು ದಶಕಗಳ ಅವಧಿಯಲ್ಲಿ ಔಷದ ತಯಾರಿಕ ಕಂಪೆನಿಗಳು ಉತ್ಪಾದಿಸಿದ ಹಾಗೂ ವೈದ್ಯರು ಮುಕ್ತವಾಗಿ ಬರೆದುಕೊಟ್ಟ ಓಪಿಯಾಯ್ಡಾ (ಮಾದಕ ದ್ರವ್ಯ ಬೆರೆಸಿದ) ಪೇನ್‌ಕಿಲ್ಲರ್‌ಗಳನ್ನು ಸೇವಿಸಿದ ಬಳಿಕ ಲಕ್ಷಾಂತರ ಅಮೆರಿಕನ್ನರು ಮಾದಕ ದ್ರವ್ಯಗಳ ಚಟಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯು ಓಹಿಯೊ ರಾಜ್ಯದ ಎರಡು ಕೌಂಟಿಗಳಾದ ಕುಯಹೋಗ ಮತ್ತು ಸಮಿಟ್‌ಗಳೊಂದಿಗೆ ಪರಿಹಾರ ಒಪ್ಪಂದ ಮಾಡಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News