ವಾಮಾಚಾರ ಆರೋಪ: 6 ಮಂದಿಗೆ ಮಲ ತಿನ್ನಿಸಿ ಹಲ್ಲು ಕಿತ್ತ ದುಷ್ಕರ್ಮಿಗಳು

Update: 2019-10-03 15:43 GMT

ಭುವನೇಶ್ವರ, ಅ.3: ವಾಮಾಚಾರ ಮಾಡುತ್ತಿದ್ದರೆಂದು ಆರೋಪಿಸಿ ಗುಂಪೊಂದು 6 ಮಂದಿಗೆ ಬಲವಂತವಾಗಿ ಮಲ ತಿನ್ನಿಸಿ ಅವರ ಹಲ್ಲನ್ನು ಕಿತ್ತೆಸೆದ ಘಟನೆ ಒಡಿಶಾದ ಗಂಜಾಂ ಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ. ಗ್ರಾಮದಲ್ಲಿ ಇತ್ತೀಚೆಗೆ ಹಲವು ಮಂದಿ ಅಕಾಲಿಕ ಮರಣ ಹೊಂದಿದ್ದು ಇದಕ್ಕೆ ಈ ವ್ಯಕ್ತಿಗಳು ನಡೆಸುತ್ತಿರುವ ವಾಮಾಚಾರ ಪ್ರಯೋಗ ಕಾರಣ ಎಂದು ಗ್ರಾಮಸ್ಥರು ಆಕ್ರೋಶಗೊಂಡಿದ್ದರು ಎನ್ನಲಾಗಿದೆ.

ಅದರಂತೆ ಬುಧವಾರ ಮನೆಗೆ ನುಗ್ಗಿದ ಸ್ಥಳೀಯರ ತಂಡ ಮನೆಯಲ್ಲಿದ್ದ 6 ಮಂದಿಯನ್ನು (ಎಲ್ಲರೂ 60 ವರ್ಷ ಮೀರಿದವರು) ಹೊರಗೆಳೆದುಕೊಂಡು ಬಂದು ಥಳಿಸಿದ್ದಲ್ಲದೆ ಬಲವಂತವಾಗಿ ಮಲ ತಿನ್ನಿಸಿದೆ. ಬಳಿಕ ನೆರೆದ ನೂರಾರು ಜನರೆದುರೇ 6 ಮಂದಿಯ ಎದುರಿನ ಹಲ್ಲನ್ನು ಕಿತ್ತು ಹಾಕಲಾಗಿದೆ.

ಈ ಅಮಾನವೀಯ ದೌರ್ಜನ್ಯವನ್ನು ಯಾರೊಬ್ಬರೂ ತಡೆಯಲು ಮುಂದಾಗಿಲ್ಲ. ಬಳಿಕ ಮಾಹಿತಿ ತಿಳಿದ ಪೊಲೀಸ್ ಅಧೀಕ್ಷಕ ಬೃಜೇಶ್ ರಾಯ್ ತಮ್ಮ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ 6 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ 22 ಮಹಿಳೆಯರ ಸಹಿತ 29 ಮಂದಿಯನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಶಾಮೀಲಾಗಿರುವ ಇತರ ಆರೋಪಿಗಳ ಮಾಹಿತಿ ದೊರಕಿದ್ದು ಅವರನ್ನೂ ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News