×
Ad

ಹೈದರಾಬಾದ್ ನಿಝಾಮರ 306 ಕೋಟಿ ರೂ.ಗೆ 120ಕ್ಕೂ ಅಧಿಕ ಹಕ್ಕುದಾರರು

Update: 2019-10-03 21:17 IST

ಹೈದರಾಬಾದ್, ಅ.3: ಹೈದರಾಬಾದ್ ಪ್ರಾಂತ್ಯದ ಕೊನೆಯ ನಿಝಾಮರು ಇಂಗ್ಲೆಂಡಿನ ನಾಟ್‌ವೆಸ್ಟ್ ಬ್ಯಾಂಕ್‌ನಲ್ಲಿ 1948ರ ಸೆಪ್ಟೆಂಬರ್‌ನಲ್ಲಿ ಜಮೆ ಮಾಡಿದ್ದ ಸುಮಾರು 306 ಕೋಟಿ ರೂ. ಹಣ ಭಾರತ ಸರಕಾರ ಹಾಗೂ ನಿಝಾಮರ ಕಾನೂನುಬದ್ಧ ವಾರಸುದಾರರಿಗೆ ಸಲ್ಲಬೇಕು ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ನಿಝಾಮರ ಕುಟುಂಬದ ಮೂಲಗಳ ಪ್ರಕಾರ ಈ ಹಣ ಭಾರತ ಸರಕಾರ, ನಿಝಾಮರ ಮೊಮ್ಮಕ್ಕಳಾದ ಮುಕರ್ರಂ ಝಾ ಮತ್ತು ಮುಫಕ್ಕಂ ಝಾ ಹಾಗೂ ಎಸ್ಟೇಟ್‌ನ ಭಾಗವಾಗಿರುವ ಇತರ 120 ಮಂದಿಗೆ ಸಲ್ಲಬೇಕಾಗಿದೆ. ಈ ಮೊತ್ತ ತನಗೆ ಸೇರಬೇಕು ಎಂದು ಪಾಕಿಸ್ತಾನ ವಾದಿಸುತ್ತಿತ್ತು. ಇದನ್ನು ವಿರೋಧಿಸಿ ನಿಝಾಮರ ಮೊಮ್ಮಗ ನಜಾಫ್ ಆಲಿ ಖಾನ್ ಹಾಗೂ ಇತರ 120 ಹಕ್ಕುದಾರರು ಅರ್ಜಿ ಸಲ್ಲಿಸಿದ್ದರು. ಇದೀಗ ಬ್ರಿಟನ್ ನ್ಯಾಯಾಲಯ ನೀಡಿರುವ ತೀರ್ಪಿನಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಪಾಕ್‌ಗೆ ಮುಖಭಂಗವಾಗಿದೆ. ಎರಡೂ ರಾಷ್ಟ್ರಗಳಿಗೆ ಇದೊಂದು ಪ್ರತಿಷ್ಠೆಯ ವಿಷಯವಾಗಿತ್ತು.

ನಿಝಾಮರ 120 ಹಕ್ಕುದಾರರು ಈಗ ನಿಝಾಮ್ ಎಸ್ಟೇಟ್‌ನ ಭಾಗವಾಗಿದ್ದು ಇವರು ಬ್ರಿಟನ್ ನ್ಯಾಯಾಲಯದಲ್ಲಿ ಪಾಕ್ ವಿರುದ್ಧ ನಡೆಸಿದ್ದ ಕಾನೂನು ಹೋರಾಟಕ್ಕೆ ಭಾರತ ಸರಕಾರ ನೆರವು ನೀಡಿತ್ತು. ಈ ನಿಧಿಯನ್ನು ಹಂಚಿಕೊಳ್ಳುವ ಬಗ್ಗೆ ನಿಝಾಮ್ ಎಸ್ಟೇಟ್ ಭಾರತ ಸರಕಾರದೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ನಿಝಾಮ್ ವಂಶದ ಬಹುತೇಕ ವಾರಸುದಾರರು ಈಗ ಆರ್ಥಿಕ ಸಂಕಷ್ಟದಲ್ಲಿದ್ದು ಬ್ರಿಟನ್ ನ್ಯಾಯಾಲಯದ ತೀರ್ಪು ಇವರಿಗೆ ಅದೃಷ್ಟದ ರೂಪದಲ್ಲಿ ಒಲಿದು ಬಂದಿದೆ. ನಿಝಾಮರ ನಿಧಿಯನ್ನು ಹಂಚಿಕೊಳ್ಳಲು ನ್ಯಾಯಾಲಯದ ಅನುಮೋದನೆ ಪಡೆಯಬೇಕು ಎಂದು ತೀರ್ಪು ಪ್ರಕಟಿಸಿರುವ ನ್ಯಾಯಾಧೀಶ ಮಾರ್ಕಸ್ ಸ್ಮಿತ್ ಹೇಳಿದ್ದಾರೆ.

ಭಾರತ ಸರಕಾರ ಹಾಗೂ ನಿಝಾಮರ ಕಾನೂನುಬದ್ಧ ಹಕ್ಕುದಾರರು ಸೂಕ್ತ ಹಂಚಿಕೆ ಸೂತ್ರ ರೂಪಿಸಿದರೆ ಅದನ್ನು ಪರಿಶೀಲಿಸಿ ಅನುಮೋದನೆ ನೀಡಬಹುದು ಎಂದವರು ಹೇಳಿದ್ದಾರೆ. ನಿಝಾಮರ ವಾರಸುದಾರರು ನಿಧಿ ಹಂಚಿಕೆ ಸೂತ್ರವನ್ನು ನ್ಯಾಯಾಲಯಕ್ಕೆ ಒಪ್ಪಿಸಿದ ಬಳಿಕವೇ ಯಾರಿಗೆ ಎಷ್ಟು ಮೊತ್ತ ಸಲ್ಲುತ್ತದೆ ಎಂಬ ವಿವರ ದೊರಕಬಹುದು. ಅಲ್ಲದೆ, ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಪಾಕಿಸ್ತಾನ ಮೇಲ್ಮನವಿ ಸಲ್ಲಿಸಿದರೆ ಆಗ ಮತ್ತಷ್ಟು ಸಮಯ ಈ ನಿಧಿ ಬ್ರಿಟನ್‌ನ ನಾಟ್‌ವೆಸ್ಟ್ ಬ್ಯಾಂಕ್‌ನಲ್ಲಿಯೇ ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News