ಬಯಲು ಶೌಚ ಮಾಡಿದ ಒಂದೂವರೆ ವರ್ಷದ ಮಗುವನ್ನು ಥಳಿಸಿ ಹತ್ಯೆ
ಭೋಪಾಲ್, ಅ. 3: ಗ್ರಾಮೀಣ ಭಾರತ ತಾವಾಗಿಯೇ ‘ಬಯಲು ಶೌಚ ಮುಕ್ತ’ ಎಂದು ಘೋಷಿಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಒಂದು ದಿನದ ಬಳಿಕ, ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಮನೆಯೊಂದರ ಮುಂದೆ ಶೌಚ ಮಾಡಿರುವುದಕ್ಕೆ ಒಂದೂವರೆ ವರ್ಷದ ಮಗುವನ್ನು ಥಳಿಸಿ ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ಹತ್ಯೆಗೀಡಾದ ಬಾಲಕನನ್ನು ರಾಮ್ ಸಿಂಗ್ ಅವರ ಪುತ್ರ ಭಗವಾನ್ ಸಿಂಗ್ ಎಂದು ಗುರುತಿಸಲಾಗಿದೆ.
ರಾಜ್ಯದಲ್ಲಿ ಕಳೆದ 10 ದಿನಗಳಲ್ಲಿ ಬಯಲು ಶೌಚದ ಹಿನ್ನೆಲೆಯಲ್ಲಿ ನಡೆದ ಮೂರನೇ ಹತ್ಯೆ ಇದಾಗಿದೆ. ಘಟನೆ ಭೋಪಾಲದಿಂದ 170 ಕಿ.ಮೀ. ದೂರದಲ್ಲಿರುವ ಸಾಗರ್‌ನ ಬಿನಾದ ಬಗಾಸ್‌ಪುರ ಗ್ರಾಮದಲ್ಲಿ ನಡೆದಿದೆ. ಬಾಲಕ ಭಗವಾನ್ ಸಿಂಗ್ ಬುಧವಾರ ಬೆಳಗ್ಗೆ ನೆರೆಯ ಮೊಹಾರ್ ಸಿಂಗ್‌ನ ಮನೆಯ ಎದುರು ಶೌಚ ಮಾಡಿದ್ದ. ಇದು ರಾಮ್ ಸಿಂಗ್ ಹಾಗೂ ಮೊಹಾರ್ ಸಿಂಗ್, ಆತನ ಪುತ್ರ ಉಮೇಶ್ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಮೊಹಾರ್ ಸಿಂಗ್ ಹಾಗೂ ಉಮೇಶ್ ಸೇರಿ ರಾಮ್ ಸಿಂಗ್ ಹಾಗೂ ಅವರ ಪುತ್ರ ಭಗವಾನ್ ಸಿಂಗ್‌ಗೆ ದೊಣ್ಣೆಯಿಂದ ಥಳಿಸಿದ್ದರು. ಇದರಿಂದ ಗಂಭೀರ ಗಾಯಗೊಂಡಿದ್ದ ಬಾಲಕ ಭಗವಾನ್ ಸಿಂಗ್ ಅನಂತರ ಮೃತಪಟ್ಟ. ಈ ಹಿನ್ನೆಲೆಯಲ್ಲಿ ಮೊಹಾರ್ ಸಿಂಗ್ ಹಾಗೂ ಆತನ ಪುತ್ರ ಉಮೇಶ್‌ನನ್ನು ಬಂಧಿಸಲಾಗಿದೆ ಎಂದು ಬಿನಾದ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಧ್ರುವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಮಗುವಿನ ಹತ್ಯೆಗೆ ಶೌಚ ಮಾಡಿರುವ ಕಾರಣ ಮಾತ್ರವಲ್ಲದೆ, ಎರಡೂ ಕುಟುಂಬಗಳ ನಡುವಿನ ಹಳೆಯ ದ್ವೇಷದ ಆಯಾಮವನ್ನು ಕೂಡ ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಎರಡೂ ಕುಟುಂಬಗಳು ಕಚ್ಚಾ ಮನೆಯಲ್ಲಿ ವಾಸಿಸುತ್ತಿವೆ. ಈ ಎರಡೂ ಮನೆಗೆ ಶೌಚಾಲಯ ಇಲ್ಲ. ಆದುದರಿಂದ ಅವರು ಬಯಲು ಶೌಚಕ್ಕೆ ಮೊರೆ ಹೋಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಯಲು ಶೌಚ ಮಾಡಿರುವ ಕಾರಣಕ್ಕೆ ಸೆಪ್ಟಂಬರ್ 25ರಂದು ಶಿವಪುರಿ ಜಿಲ್ಲೆಯ ಭಾವ್ಖೇಡಿ ಗ್ರಾಮದಲ್ಲಿ 12 ವರ್ಷದ ಬಾಲಕಿ ಹಾಗೂ 10 ವರ್ಷದ ಬಾಲಕನನ್ನು ಇಬ್ಬರು ವ್ಯಕ್ತಿಗಳು ಥಳಿಸಿ ಹತ್ಯೆಗೈದಿರುವ ಘಟನೆಯ ನೆನಪು ಮಾಸುವ ಮೊದಲೇ ಈ ಘಟನೆ ನಡೆದಿರುವುದು ಆಘಾತ ಉಂಟು ಮಾಡಿದೆ.