ಅಶಿಸ್ತಿನ ಬ್ಯಾನರ್ ಸಂಸ್ಕೃತಿಗೆ ಅಂತ್ಯ ಹಾಡಿ: ಪ್ರಧಾನಿ ಮೋದಿ ಅವರಲ್ಲಿ ನಟ ಕಮಲ್ ಹಾಸನ್ ಮನವಿ

Update: 2019-10-03 17:07 GMT

ಚೆನ್ನೈ, ಅ. 3: ‘‘ಅಶಿಸ್ತಿನ ಬ್ಯಾನರ್ ಸಂಸ್ಕೃತಿ’’ಗೆ ಅಂತ್ಯ ಹಾಡುವಂತೆ ನಟ, ರಾಜಕಾರಣಿ ಕಮಲ್ ಹಾಸನ್ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಗುರುವಾರ ಮನವಿ ಮಾಡಿದ್ದಾರೆ.

ಈ ತಿಂಗಳ ಅಂತ್ಯದಲ್ಲಿ ಮಹಾಬಲಿಪುರಂನಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸಭೆಯ ಬ್ಯಾನರ್ ಅಳವಡಿಸಲು ಅನುಮತಿ ಕೋರಿ ತಮಿಳುನಾಡು ಸರಕಾರ ಮದ್ರಾಸ್ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. ಬ್ಯಾನರ್ ಬಿದ್ದು 23ರ ಹರೆಯದ ಶುಭಶ್ರೀ ಸಾವನ್ನಪ್ಪಿರುವುದರಿಂದ ಉಂಟಾದ ನಷ್ಟ ಭರಿಸಲು ತಮಿಳುನಾಡು ಹಾಗೂ ತಮಿಳರು ಹೋರಾಟ ನಡೆಸುತ್ತಿರುವಾಗ, ನಿಮ್ಮ ಬ್ಯಾನರ್ ಅಳವಡಿಸಲು ಅನುಮತಿ ಕೋರಿ ತಮಿಳುನಾಡು ಸರಕಾರ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು ಎಂದು ಕಮಲಹಾಸನ್ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ. ಈ ಅಪಾಯಕಾರಿ ಬ್ಯಾನರ್ ಸಂಸ್ಕೃತಿ ಅಂತ್ಯಗೊಳಿಸಲು ನೀವು ಮೊದಲ ಹೆಜ್ಜೆ ಇರಿಸಿ. ಅದು ತಮಿಳರ ಭಾವನೆ ಬಗ್ಗೆ ನಿಮಗಿರುವ ಕಾಳಜಿಯನ್ನು ಪ್ರತಿಬಿಂಬಿಸಬಹುದು ಎಂದು ಕಮಲ್ ಹಾಸನ್ ಹೇಳಿದ್ದಾರೆ.

ಎಐಎಡಿಎಂಕೆ ಪದಾಧಿಕಾರಿಗಳು ಅಳವಡಿಸಿದ್ದ ಕಾನೂನು ಬಾಹಿರ ಹೋರ್ಡಿಂಗ್ ಹಾಗೂ ನೀರಿನ ಟ್ಯಾಂಕ್ ಬಿದ್ದು 23ರ ಹರೆಯದ ಟೆಕ್ಕಿ ಶುಭಶ್ರೀ ಮೃತಪಟ್ಟಿರುವ ಘಟನೆಯನ್ನು ಅವರು ಪ್ರಧಾನಿ ಮೋದಿಗೆ ನೆನಪಿಸಿದರು. ಕಳೆದ ತಿಂಗಳು ನ್ಯಾಯಾಲಯ ಹೋರ್ಡಿಂಗ್ ಅನ್ನು ತೆರವುಗೊಳಿಸದ ಅಧಿಕಾರಿಗಳನ್ನು ಶುಭಶ್ರೀ ಸಾವಿಗೆ ಹೊಣೆಗಾರರನ್ನಾಗಿಸಿತ್ತು. ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ಬ್ಯಾನರ್, ಕಟ್‌ಔಟ್ ಹಾಗೂ ಹೋರ್ಡಿಂಗ್‌ಗಳನ್ನು ಅಳವಡಿಸದಂತೆ ತಮ್ಮ ಪಕ್ಷದ ಸದಸ್ಯರಿಗೆ ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ ಹಾಗೂ ಪ್ರತಿಪಕ್ಷದ ನಾಯಕ ಎಂ.ಕೆ. ಸ್ಟಾಲಿನ್ ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News