ಪ್ರಧಾನಿಗೆ ಪತ್ರ ಹಿನ್ನೆಲೆ ದೇಶದ್ರೋಹ ಪ್ರಕರಣ ದಾಖಲು: ಆಘಾತ ವ್ಯಕ್ತಪಡಿಸಿದ ಅಡೂರು ಗೋಪಾಲಕೃಷ್ಣನ್

Update: 2019-10-04 16:10 GMT

ತಿರುವನಂತಪುರಂ,ಅ.4: ದೇಶದಲ್ಲಿ ಹೆಚ್ಚುತ್ತಿರುವ ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣಗಳು ಮತ್ತು ಜೈಶ್ರೀರಾಂ ಘೋಷಣೆಯನ್ನು ಆಯುಧವಾಗಿ ಬಳಸುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿ ಪ್ರಧಾನಿ ಮೋದಿಗೆ ಬರೆದ ಬಹಿರಂಗ ಪತ್ರದ ಸಹಿದಾರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವ ಬಗ್ಗೆ ಕೇರಳ ಚಿತ್ರತಯಾರಕ ಅಡೂರು ಗೋಪಾಲಕೃಷ್ಣನ್ ಆಘಾತ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎನ್‌ಡಿಟಿವಿ ಜೊತೆ ಮಾತನಾಡಿದ ಗೋಪಾಲಕೃಷ್ಣನ್, ನಮಗೇನಾಗುತ್ತಿದೆ? ನನಗೆ ಈ ಸುದ್ದಿ ಕೇಳಿ ನಂಬಲು ಸಾಧ್ಯವಾಗಲಿಲ್ಲ ಯಾಕೆಂದರೆ ಯಾವುದೇ ನ್ಯಾಯಾಲಯ ಆ ಪತ್ರದ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಆ ಪತ್ರವನ್ನು ದೇಶದ್ರೋಹ ಎಂದು ಭಾವಿಸುವುದು ಆ ಪತ್ರದ ಆಶಯಕ್ಕೆ ವಿರುದ್ಧವಾಗಿದೆ. ಯಾರಾದರೂ ಸರಕಾರವನ್ನು ಟೀಕಿಸಿದರೆ ಅದು ದೇಶದ್ರೋಹವಾಗುವುದಿಲ್ಲ. ನಾವು ಪ್ರಜಾಪ್ರಭುತ್ವದಲ್ಲಿ ಜೀವಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಈ ಪತ್ರವನ್ನು ನಮ್ಮ ಪ್ರಜಾಸತಾತ್ಮಕ ಮೌಲ್ಯಗಳಿಗೆ ಸಂಪೂರ್ಣ ಗೌರವದೊಂದಿಗೆ ಬರೆಯಲಾಗಿದೆ ಮತ್ತು ಇದು ಅಭಿಪ್ರಾಯಗಳ ಬಹುತ್ವವನ್ನು ಪ್ರತಿನಿಧಿಸುತ್ತದೆ ಎಂದು ಗೋಪಾಲಕೃಷ್ಣನ್ ತಿಳಿಸಿದ್ದಾರೆ.

ಕಳೆದ ಜುಲೈಯಲ್ಲಿ ಅಡೂರು ಗೋಪಾಲಕೃಷ್ಣನ್ ಸೇರಿದಂತೆ ಸಮಾಜದ 48 ಪ್ರತಿಷ್ಟಿತ ವ್ಯಕ್ತಿಗಳು ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಜೈಶ್ರೀರಾಂ ಘೋಷಣೆಯನ್ನು ಆಯುಧವಾಗಿ ಬಳಸುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿ ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದಿದ್ದರು. ಈ ಕ್ರಮವನ್ನು ಟೀಕಿಸಿದ್ದ ಬಿಜೆಪಿ ವಕ್ತಾರ ಬಿ. ಗೋಪಾಲಕೃಷ್ಣನ್, ಜೈಶ್ರೀರಾಮ್ ಘೋಷಣೆ ಕೇಳಲು ಬಯಸದವರು ಚಂದ್ರನ ಮೇಲೆ ಸ್ಥಳಾಂತರಗೊಳ್ಳುವಂತೆ ಅಡೂರು ಗೋಪಾಲಕೃಷ್ಣನ್‌ಗೆ ತಿಳಿಸಿದ್ದರು.

ದೇಶದಲ್ಲಿ ಮುಸ್ಲಿಮರು, ದಲಿತರು ಮತ್ತು ಇತರ ಅಲ್ಪಸಂಖ್ಯಾತ ವರ್ಗದ ಜನರನ್ನು ಗುಂಪಿನಿಂದ ಥಳಿಸಿ ಹತ್ಯೆ ಮಾಡುವುದನ್ನು ತಕ್ಷಣ ತಡೆಯಬೇಕು ಮತ್ತು ಭಿನ್ನಾಭಿಪ್ರಾಯವಿಲ್ಲದೆ ಯಾವ ಪ್ರಜಾಪ್ರಭುತ್ವವೂ ಇಲ್ಲ ಎಂದು ಈ ಪತ್ರದಲ್ಲಿ ತಿಳಿಸಲಾಗಿತ್ತು. ಪತ್ರಕ್ಕೆ ಸಹಿ ಹಾಕಿದ್ದ ಅಡೂರು ಗೋಪಾಲಕೃಷ್ಣನ್, ಇತಿಹಾಸಜ್ಞ ರಾಮಚಂದ್ರಗುಹಾ ಮತ್ತು ಚಿತ್ರತಯಾರಕ ಮಣಿರತ್ನಂ ಮತ್ತು ಅಪರ್ಣಾ ಸೇನ್ ಹಾಗೂ ಇತರರ ವಿರುದ್ಧ ಬಿಹಾರದ ಮುಝಫ್ಫರ್‌ಪುರ ಜಿಲ್ಲೆಯ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News