ಪಾಕ್‌ಗೆ ಬೆಂಬಲ ವ್ಯಕ್ತಪಡಿಸಿದ 58 ದೇಶಗಳನ್ನು ಹೆಸರಿಸಿ ಎಂದಾಗ ಆಕ್ರೋಶ ವ್ಯಕ್ತಪಡಿಸಿದ ಪಾಕ್ ವಿದೇಶ ಸಚಿವ

Update: 2019-10-04 17:06 GMT

ಇಸ್ಲಾಮಾಬಾದ್, ಅ. 4: ವಿಶ್ವಸಂಸ್ಥೆಯ ಮಾನವಹಕ್ಕುಗಳ ಆಯೋಗದಲ್ಲಿ ಕಾಶ್ಮೀರ ಕುರಿತ ಪಾಕಿಸ್ತಾನದ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ 58 ದೇಶಗಳನ್ನು ಹೆಸರಿಸುವಂತೆ ಕೇಳಿದಾಗ, ಆ ದೇಶದ ವಿದೇಶ ಸಚಿವ ಶಾ ಮೆಹ್ಮೂದ್ ಕುರೇಶಿ ಆಕ್ರೋಶ ವ್ಯಕ್ತಪಡಿಸಿರುವ ಬಗ್ಗೆ ವರದಿಯಾಗಿದೆ.

ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸಿರುವುದಕ್ಕಾಗಿ 58 ದೇಶಗಳಿಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕೃತಜ್ಞತೆ ವ್ಯಕ್ತಪಡಿಸಿದ್ದರು.

ಪಾಕಿಸ್ತಾನದ ಟಿವಿ ವಾಹಿನಿ ‘ಎಕ್ಸ್‌ಪ್ರೆಸ್ ನ್ಯೂಸ್’ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಪಾಕ್ ವಿದೇಶ ಸಚಿವರು, ಕಾಶ್ಮೀರ ವಿಷಯದಲ್ಲಿ 58 ದೇಶಗಳು ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸಿವೆ ಎಂಬ ಇಮ್ರಾನ್ ಖಾನ್‌ರ ಹೇಳಿಕೆಯನ್ನು ಪದೇ ಪದೇ ಉಚ್ಚರಿಸಿದರು. ಆಗ ಅವರಿಗೆ ಆ ದೇಶಗಳನ್ನು ಹೆಸರಿಸುವಂತೆ ಕೇಳಲಾಯಿತು ಎಂದು ಸ್ಪೂತ್ನಿಕ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘‘ನೀವು ಯಾರ ಪರವಾಗಿ ಕೆಲಸ ಮಾಡುತ್ತಿದ್ದೀರಿ?’’ ಎಂದು ಆಕ್ರೋಶಭರಿತ ಕುರೇಶಿ ಕಾರ್ಯಕ್ರಮದ ನಿರೂಪಕ ಜಾವೇದ್ ಚೌಧರಿಯನ್ನು ಕೇಳಿದರು. ‘‘ವಿಶ್ವಸಂಸ್ಥೆಯಲ್ಲಿ ಯಾವ ದೇಶಗಳು ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸಿವೆ ಅಥವ ವ್ಯಕ್ತಪಡಿಸಿಲ್ಲ ಎನ್ನುವುದನ್ನು ನೀವೇ ನಿರ್ಧರಿಸಿದ್ದೀರಾ? ನಿಮಗೆ ಏನು ಬೇಕೋ ಹಾಗೆ ಬರೆಯಬಹುದು!’’ ಎಂದು ಕುರೇಶಿ ಅಬ್ಬರಿಸಿದರು ಎಂದು ‘ಸ್ಪೂತ್ನಿಕ್’ ಹೇಳಿದೆ.

ನಿಮ್ಮ ಟ್ವಿಟರ್ ಖಾತೆಯಲ್ಲಿ ಇಮ್ರಾನ್ ಖಾನ್‌ರ ಹೇಳಿಕೆಯನ್ನು ನೀವು ಅನುಮೋದಿಸಿದ್ದೀರಲ್ಲ ಎಂದು ಕೇಳಿದಾಗ, ‘‘ಇಲ್ಲ.. ಇಲ್ಲ.. ನಾನು ಬರೆದ ಟ್ವೀಟನ್ನು ತೋರಿಸಿ, ಪ್ರಧಾನಿ ಇಮ್ರಾನ್ ಖಾನ್‌ರ ಟ್ವೀಟ್ ಅಲ್ಲ... ನಾನು ಟ್ವೀಟ್ ಮಾಡಿದ್ದೇನೆಂದು ನೀವು ಹೇಳಿದ್ದೀರಿ. ಅದನ್ನು ನನಗೆ ತೋರಿಸಿ. ನನಗೆ ನನ್ನ ಟ್ವೀಟ್ ಬೇಕು’’ ಎಂದು ಹೇಳಿದರು.

ಬಳಿಕ, ಅವರ ಟ್ವೀಟನ್ನು ಅವರಿಗೆ ತೋರಿಸಲಾಯಿತು. ಆಗ, ಈ ಟ್ವೀಟ್‌ನಲ್ಲಿ ನನಗೇನೂ ತಪ್ಪು ಕಾಣುವುದಿಲ್ಲ ಎಂದರು.

‘‘ನಾನು ಏನು ಹೇಳಿದ್ದೇನೋ ಅದಕ್ಕೆ ನಾನು ಬದ್ಧನಾಗಿದ್ದೇನೆ. ಇದರಲ್ಲಿ ಅಂಥ ಅಚ್ಚರಿಯ ಸಂಗತಿ ಏನಿದೆ? ನೀವು ಯಾರ ಕಾರ್ಯಸೂಚಿಯನ್ನು ಅನುಸರಿಸುತ್ತಿದ್ದೀರಿ?’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News