ಜಾರ್ಖಂಡ್: ಮಾವೋವಾದಿಗಳ ದಾಳಿಗೆ ಇಬ್ಬರು ಪೊಲೀಸರು ಬಲಿ

Update: 2019-10-04 16:53 GMT

ರಾಂಚಿ, ಅ.4: ಜಾರ್ಖಂಡ್‌ನ ರಾಂಚಿ ಮತ್ತು ಖುಂಟಿ ಜಿಲ್ಲೆಯ ಅರಣ್ಯಪ್ರದೇಶದಲ್ಲಿ ಶುಕ್ರವಾರ ಪೊಲೀಸರು ಮತ್ತು ಮಾವೋವಾದಿಗಳ ತಂಡದ ಮಧ್ಯ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರು ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ದಕಪಿಢಿ ಅರಣ್ಯ ಹಾಗೂ ಸಮೀಪದ ಗ್ರಾಮದಲ್ಲಿ ಮಾವೋವಾದಿಗಳ ಗುಂಪೊಂದರ ಚಲನವಲನದ ಬಗ್ಗೆ ದೊರೆತ ಖಚಿತ ಮಾಹಿತಿಯ ಬಳಿಕ ಆ ಪ್ರದೇಶಕ್ಕೆ ಜಾರ್ಖಂಡ್ ಪೊಲೀಸರ ಜಾಗ್ವಾರ್ ದಳವನ್ನು ರವಾನಿಸಲಾಗಿದೆ.

ಬೆಳಿಗ್ಗೆ 4ರಿಂದ 5 ಗಂಟೆಯವರೆಗೆ ಆ ಪ್ರದೇಶದಲ್ಲಿ ಜಾಗ್ವಾರ್ ದಳ ಶೋಧ ಕಾರ್ಯಾಚರಣೆ ನಡೆಸಿದ್ದು ಈ ಸಂದರ್ಭ ಅರಣ್ಯದಲ್ಲಿ ಅವಿತು ಕುಳಿತಿದ್ದ ಮಾವೋವಾದಿಗಳು ಏಕಾಏಕಿ ಪೊಲೀಸರತ್ತ ಗುಂಡಿನ ದಾಳಿ ನಡೆಸಿದ್ದಾರೆ. ಓರ್ವ ಪೊಲೀಸ್ ಸಿಬಂದಿ ಸ್ಥಳದಲ್ಲೇ ಮೃತಪಟ್ಟಿದ್ದು ತೀವ್ರ ಗಾಯಗೊಂಡಿದ್ದ ಮತ್ತೊಬ್ಬ ಪೊಲೀಸ್ ರಾಂಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂಎಲ್ ಮೀನ ತಿಳಿಸಿದ್ದಾರೆ.

ಕಾಂಚನಪ್ರಸಾದ್ ಮಹತೊ ಮತ್ತು ಅಖಿಲೇಶ್ ರಾಮ್ ಮೃತಪಟ್ಟವರು. ಪ್ರದೇಶಕ್ಕೆ ಹೆಚ್ಚುವರಿ ಪಡೆಯನ್ನು ರವಾನಿಸಲಾಗಿದ್ದು ಅರಣ್ಯದಲ್ಲಿ ಅಡಗಿರುವ ಮಾವೋವಾದಿಗಳ ವಿರುದ್ಧ ಬಿರುಸಿನ ಕಾರ್ಯಾಚರಣೆ ನಡೆಯುತ್ತಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News