ಸರಕಾರಿ ಬ್ಯಾಂಕ್ ಸಿಬ್ಬಂದಿಗೆ ‘ಭರ್ಜರಿ ದೀಪಾವಳಿ ಕೊಡುಗೆ’ !
ಚೆನ್ನೈ, ಅ.5: ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ನೌಕರರಿಗೆ ಭರ್ಜರಿ ದೀಪಾವಳಿ ಕೊಡುಗೆಯ ಭಾಗ್ಯ ಒಲಿದು ಬಂದಿದೆ. ವೇತನ ಪರಿಷ್ಕರಣೆ ಕುರಿತು ನೌಕರರ ಒಕ್ಕೂಟಗಳು ಮತ್ತು ಬ್ಯಾಂಕ್ ಆಡಳಿತ ವರ್ಗಗಳ ನಡುವೆ ಅಂತಿಮ ಒಪ್ಪಂದವೊಂದು ಮೂಡಿಬರುವ ಮುನ್ನವೇ ಸಿಬ್ಬಂದಿಗಳ ಖಾತೆಗಳಿಗೆ ಭಾಗಶಃ ವೇತನ ಬಾಕಿ ಜಮೆಯಾಗುತ್ತಿದೆ. ಅಂದ ಹಾಗೆ ಇಂತಹ ಬೆಳವಣಿಗೆ ನಡೆಯುತ್ತಿರುವುದು ಭಾರತದ ಬ್ಯಾಂಕಿಂಗ್ ಇತಿಹಾಸದಲ್ಲಿ ಇದೇ ಮೊದಲು. ಸರಕಾರಿ ಬ್ಯಾಂಕುಗಳ ನೌಕರರು ನವೆಂಬರ್, 2017ರಿಂದಲೂ ವೇತನ ಪರಿಷ್ಕರಣೆಗಾಗಿ ಕಾಯುತ್ತಿದ್ದಾರೆ.
ನೌಕರರು ಭಾಗಶಃ ವೇತನ ಬಾಕಿಯನ್ನು ಸ್ವೀಕರಿಸಬಹುದು ಅಥವಾ ಬಿಡಬಹುದು. ಅವರು ಭಾಗಶಃ ವೇತನ ಬಾಕಿ ಗೆ ಒಪ್ಪಿಕೊಂಡರೆ ಅವರ ಖಾತೆಗೆ ಕನಿಷ್ಠ 50,000 ರೂ.ಜಮೆಯಾಗುತ್ತದೆ ಮತ್ತು ಈ ಮೊತ್ತ ಒಂದು ಲ.ರೂ.ಮೀರಲೂಬಹುದು ಎಂದು ಬ್ಯಾಂಕ್ ಉದ್ಯೋಗಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
2017ರಿಂದಲೂ ಸಂಯುಕ್ತ ಬ್ಯಾಂಕ್ ಯೂನಿಯನ್‌ಗಳ ವೇದಿಕೆ (ಯುಎಫ್‌ಬಿಯು) ಮತ್ತು ಭಾರತೀಯ ಬ್ಯಾಂಕುಗಳ ಸಂಘ (ಐಬಿಎ)ದ ನಡುವೆ ಸುಮಾರು 30 ಸುತ್ತು ಮಾತುಕತೆಗಳು ನಡೆದಿವೆಯಾದರೂ ವೇತನ ಒಪ್ಪಂದವೊಂದು ಇನ್ನೂ ಅಂತಿಮಗೊಂಡಿಲ್ಲ.
ಅ.1ರಂದು ಐಬಿಎ ಎಲ್ಲ ಸರಕಾರಿ ಬ್ಯಾಂಕುಗಳು ಮತ್ತು ದ್ವಿಪಕ್ಷೀಯ ಇತ್ಯರ್ಥ ಪ್ರಕ್ರಿಯೆಯ ಭಾಗವಾಗಿರುವ ಖಾಸಗಿ ಬ್ಯಾಂಕುಗಳ ಮುಖ್ಯಸ್ಥರಿಗೆ ಬರೆದಿರುವ ಪತ್ರದಲ್ಲಿ ಒಂದು ತಿಂಗಳ ವೇತನ (ಮೂಲ ವೇತನ ಮತ್ತು ತುಟ್ಟಿಭತ್ಯೆ)ಕ್ಕೆ ಸಮನಾದ ಬಾಕಿ ವೇತನ ಇತ್ಯರ್ಥ ಮೊತ್ತವನ್ನು ನೌಕರರಿಗೆ ಪಾವತಿಸುವಂತೆ ಮತ್ತು ಯೂನಿಯನ್‌ಗಳು ಇತ್ಯರ್ಥಕ್ಕೆ ಬಂದ ಬಳಿಕ ಪಾವತಿಸಲಾಗುವ ಅಂತಿಮ ವೇತನ ಬಾಕಿಯಲ್ಲಿ ಈ ಮೊತ್ತವನ್ನು ಕಡಿತಗೊಳಿಸುವಂತೆ ನಿರ್ದೇಶ ನೀಡಿದೆ.
ವೇತನ ಪರಿಷ್ಕರಣೆ ಮಾತುಕತೆಗಳನ್ನು ಆರಂಭಿಸುವಂತೆ ಮತ್ತು 1-11-2017ಕ್ಕೆ ಮುನ್ನ ಅಂತಿಮಗೊಳಿಸುವಂತೆ ಸರಕಾರವು 2016, ಜನವರಿಯಲ್ಲಿ ಎಲ್ಲ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿತ್ತು.