×
Ad

14 ವರ್ಷ, ಒಂದು ಕುಟುಂಬದ ಒಂದೇ ರೀತಿಯ 6 ಸಾವುಗಳು !

Update: 2019-10-05 20:29 IST

ತಿರುವನಂತಪುರ, ಅ.5: ಕೊಝಿಕ್ಕೋಡ್ ಪೊಲೀಸರು ಶುಕ್ರವಾರ ಒಂದೇ ಕುಟುಂಬಕ್ಕೆ ಸೇರಿದ ಐವರ ಮೃತದೇಹಗಳನ್ನು ಸಮಾಧಿಗಳಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ. ಈ ಕುಟುಂಬದ ಆರು ಜನರು ಕಳೆದ 14 ವರ್ಷಗಳಲ್ಲಿ ಒಂದೇ ರೀತಿಯ ನಿಗೂಢ ಸನ್ನಿವೇಶಗಳಲ್ಲಿ ಮೃತಪಟ್ಟಿದ್ದರು.

ಮೃತ ದಂಪತಿಯ ಪುತ್ರ ರೋಜೊ ವರ್ಷದ ಹಿಂದೆ ದೂರು ಸಲ್ಲಿಸಿದ ಬಳಿಕ ಪೊಲೀಸರು ತನಿಖೆಯನ್ನು ಆರಂಭಿಸಿದ್ದರು. ಈ ಸಾವುಗಳು ಒಂದೇ ಮಾದರಿಯಲ್ಲಿ ಸಂಭವಿಸಿರುವುದು ಪೊಲೀಸರ ಗಮನವನ್ನು ಸೆಳೆದಿದೆ.

2002ರಲ್ಲಿ ರೋಜೊರ ತಾಯಿ ಅನ್ನಮ್ಮ (57) ನಿಗೂಢ ಸನ್ನಿವೇಶದಲ್ಲಿ ಮೃತಪಟ್ಟಿದ್ದರು. ಆರು ವರ್ಷಗಳ ಬಳಿಕ ರೋಜೊರ ತಂದೆ ಟಾಮ್ ಥಾಮಸ್ (66) ಕೂಡ ಇದೇ ರೀತಿಯಲ್ಲಿ ನಿಗೂಢ ಸಾವನ್ನಪ್ಪಿದ್ದರು. ಪೊಲೀಸರು ಹೇಳಿರುವಂತೆ ಅವರಿಬ್ಬರೂ ಆಹಾರ ಸೇವಿಸಿದ ಬೆನ್ನಿಗೇ ಕುಸಿದು ಬಿದ್ದು ಮೃತರಾಗಿದ್ದರು.

ದಂಪತಿಯ ಸಾವಿನ ಬಳಿಕ ಕುಟುಂಬದಲ್ಲಿ ಸರಣಿ ಸಾವುಗಳು ಸಂಭವಿಸಿದ್ದವು. 2011ರಲ್ಲಿ ರೋಜೊರ ಸೋದರ ರಾಯ್ ಥಾಮಸ್ (40) ಮತ್ತು 2014ರಲ್ಲಿ ರೋಜೊರ ಚಿಕ್ಕಪ್ಪ ಮ್ಯಾಥ್ಯೂ (68) ಕೂಡ ನಿಗೂಢ ಸಾವನ್ನಪ್ಪಿದ್ದರು. ಅದೇ ವರ್ಷ ಎರಡರ ಹರೆಯದ ಆಲ್ಫೈನ್ ಮತ್ತು 2016ರಲ್ಲಿ ಆತನ ತಾಯಿ ಮೃತಪಟ್ಟಿದ್ದರು.

ಎಲ್ಲ ಆರೂ ಜನರು ಸಾಯುವ ಮೊದಲು ಆಹಾರವನ್ನು ಸೇವಿಸಿದ್ದರು ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಕೊಝಿಕ್ಕೋಡ್ ಗ್ರಾಮೀಣ ಎಸ್‌ಪಿ.ಕೆ.ಜಿ.ಸೈಮನ್ ತಿಳಿಸಿದರು.

ಮೃತ ರಾಯ್ ಥಾಮಸ್‌ನ ಪತ್ನಿ ಜೋಲಿ ತನ್ನ ಪತಿ ಮತ್ತು ಆತನ ಹೆತ್ತವರ ಎಲ್ಲ ಆಸ್ತಿಗಳನ್ನು ತನ್ನ ಹೆಸರಿಗೆ ಮಾಡಿಸಿಕೊಂಡಿದ್ದರಿಂದ ಆರಂಭದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿತ್ತು.

ಶುಕ್ರವಾರ ಕಲ್ಲಿಕೋಟೆಯ ವಿವಿಧ ಚರ್ಚ್‌ಗಳಲ್ಲಿ ದಫನ್ ಮಾಡಲಾಗಿದ್ದ ಐದು ಶವಗಳನ್ನು ಪೊಲೀಸರು ಹೊರಗೆ ತೆಗೆದಿದ್ದಾರೆ. ರಾಯ್ ಸಾವಿನ ಬೆನ್ನಿಗೇ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದರಿಂದ ಆತನ ಶವವನ್ನು ಪೊಲೀಸರು ಹೊರಗೆ ತೆಗೆದಿಲ್ಲ.

ಜೋಲಿ ಆಸ್ತಿಗಳನ್ನು ತನ್ನ ಹೆಸರಿಗೆ ಮಾಡಿಕೊಳ್ಳಲು ಫೋರ್ಜರಿ ದಾಖಲೆಗಳನ್ನು ಬಳಸಿದ್ದಳು ಎಂದು ಶಂಕಿಸಿರುವ ಪೊಲೀಸರು ಆಕೆಯನ್ನು ಪ್ರಶ್ನಿಸುತ್ತಿದ್ದಾರೆ. ಈ ಸಾವುಗಳ ಸಂದರ್ಭಗಳಲ್ಲಿ ಆಕೆ ಎಲ್ಲಿದ್ದಳು ಎನ್ನುವುದನ್ನು ಅವರು ದೃಢ ಪಡಿಸಿಕೊಳ್ಳುತ್ತಿದ್ದಾರೆ.

ತನ್ಮಧ್ಯೆ ಜೋಲಿ ರಾಯ್ ಸೋದರ ಸಂಬಂಧಿಯನ್ನು ಎರಡನೇ ಮದುವೆಯಾಗಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News