ಯುದ್ಧದಲ್ಲಿ ಮಡಿದವರ ಕುಟುಂಬಗಳಿಗೆ ಆರ್ಥಿಕ ನೆರವನ್ನು 4 ಪಟ್ಟು ಹೆಚ್ಚಿಸುವ ಪ್ರಸ್ತಾವಕ್ಕೆ ಒಪ್ಪಿಗೆ

Update: 2019-10-05 15:15 GMT

ಹೊಸದಿಲ್ಲಿ, ಅ.5: ಸೇನೆಯ ದೀರ್ಘ ಕಾಲದ ಬೇಡಿಕೆಗೆ ಮಣಿದಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಯುದ್ಧದಲ್ಲಿ ಮಡಿದವರ ಕುಟುಂಬಗಳಿಗೆ ನೀಡಲಾಗುವ ಆರ್ಥಿಕ ನೆರವನ್ನು ಈಗಿನ ಎರಡು ಲ.ರೂ.ಗಳಿಂದ ಎಂಟು ಲ.ರೂ.ಗಳಿಗೆ ಹೆಚ್ಚಿಸಲು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಶನಿವಾರ ಇಲ್ಲಿ ತಿಳಿಸಿದರು.

ಸೇನಾ ಯುದ್ಧ ಹುತಾತ್ಮರ ಕಲ್ಯಾಣ ನಿಧಿ (ಎಬಿಸಿಡಬ್ಲುಎಫ್)ಯಿಂದ ಹಣಕಾಸು ನೆರವನ್ನು ಮಂಜೂರು ಮಾಡಲಾಗುವುದು ಎಂದರು.

ಯುದ್ಧರಂಗದಲ್ಲಿ ಮಡಿದವರಿಗೆ ಮತ್ತು ಇತರ ಹಲವಾರು ವರ್ಗಗಳ ಜೊತೆಗೆ ಶೇ.60ಕ್ಕೂ ಹೆಚ್ಚಿನ ಅಂಗವೈಕಲ್ಯ ಹೊಂದಿದವರಿಗೂ ಎರಡು ಲ.ರೂ.ಗಳ ಹಣಕಾಸು ನೆರವನ್ನು ಒದಗಿಸಲಾಗುತ್ತಿದೆ.

ಉದಾರ ಕುಟುಂಬ ಪಿಂಚಣಿ,ಸೇನೆಯ ಗುಂಪು ವಿಮೆಯಿಂದ ಆರ್ಥಿಕ ನೆರವು,ಆರ್ಮಿ ವೆಲ್ಫೇರ್ ಫಂಡ್‌ನಿಂದ ಹಣ ಮತ್ತು ಪರಿಹಾರ ಮೊತ್ತಕ್ಕೆ ಹೆಚ್ಚುವರಿಯಾಗಿ ಈ ಹಣಕಾಸು ನೆರವನ್ನು ಒದಗಿಸಲಾಗುತ್ತಿದೆ.

2016,ಫೆಬ್ರವರಿಯಲ್ಲಿ ಸಿಯಾಚಿನ್ ಪ್ರದೇಶದಲ್ಲಿ ಸಂಭವಿಸಿದ್ದ ಹಿಮಪಾತದಲ್ಲಿ 10 ಯೋಧರು ಜೀವಂತ ಸಮಾಧಿಯಾಗಿದ್ದ ಘಟನೆಯ ಬಳಿಕ ಭಾರೀ ಸಂಖ್ಯೆಯ ಜನರು ಯುದ್ಧದಲ್ಲಿ ಮಡಿದವರ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸಲು ಮುಂದೆ ಬಂದ ಬಳಿಕ 2017,ಜುಲೈನಲ್ಲಿ ಮಾಜಿ ಯೋಧರ ಕಲ್ಯಾಣ ಇಲಾಖೆಯಡಿ ಎಬಿಸಿಡಬ್ಲುಎಫ್‌ನ್ನು ಸ್ಥಾಪಿಸಲಾಗಿತ್ತು ಮತ್ತು 2016,ಎಪ್ರಿಲ್‌ನಿಂದ ಪೂರ್ವಾನ್ವಯವಾಗಿ ಜಾರಿಗೊಳಿಸಲಾಗಿತ್ತು.

ಎಬಿಸಿಡಬ್ಲುಎಫ್‌ನಡಿ ನೆರವಿನೊಂದಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಹಣಕಾಸು ಅನುದಾನವು ವಿವಿಧ ದರ್ಜೆಗಳಿಗೆ 25 ಲ.ರೂ.ಗಳಿಂದ 45 ಲ.ರೂ.ವರೆಗೆ ಪರಿಹಾರ ಮೊತ್ತ ಮತ್ತು 40 ಲ.ರೂ.ಗಳಿಂದ 75 ಲ.ರೂ.ವರೆಗೆ ಸೇನೆಯ ಗುಂಪು ವಿಮೆ ಸೌಲಭ್ಯವನ್ನು ಒಳಗೊಂಡಿದೆ.

ಸಿಂಗ್ ಹಿಂದಿನ ಸರಕಾರದಲ್ಲಿ ಗೃಹಸಚಿವರಾಗಿದ್ದಾಗ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ ಅಥವಾ ಗಾಯಗೊಂಡ ಅರೆ ಸೇನಾ ಪಡೆಗಳ ಸಿಬ್ಬಂದಿಗಳ ಕುಟುಂಬಗಳಿಗೆ ನೆರವಾಗಲು ‘ ಭಾರತ್ ಕಾ ವೀರ್ ನಿಧಿ ’ಯನ್ನು ಆರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News