ಮಾಜಿ ಸಿಎಂ ಬಿಯಂತ್ ಸಿಂಗ್ ಹತ್ಯೆ: ಆರೋಪಿಯ ಮರಣದಂಡನೆ ಶಿಕ್ಷೆಯನ್ನು ಬದಲಿಸಿದ ಮೋದಿ ಸರಕಾರ

Update: 2019-10-05 17:00 GMT
ಬಲ್ವಂತ್ ಸಿಂಗ್ ರಜೋನಾ

ಹೊಸದಿಲ್ಲಿ,ಅ.5: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಬಿಯಂತ್ ಸಿಂಗ್ ಹತ್ಯೆಯಲ್ಲಿ ಶಿಕ್ಷೆಗೊಳಗಾಗಿರುವ ಬಲ್ವಂತ್ ಸಿಂಗ್ ರಜೋನಾನಿಗೆ ನೀಡಲಾಗಿದ್ದ ಮರಣ ದಂಡನೆ ಶಿಕ್ಷೆಯನ್ನು ಮೋದಿ ಸರಕಾರ ಜೀವಾವಧಿ ಶಿಕ್ಷೆಗೆ ಬದಲಿಸಿದೆ.

ಗುರು ನಾನಕರ 550ನೇ ಜನ್ಮದಿನಾಚರಣೆಯ ಸಮಯದಲ್ಲಿ ಮಾನವೀಯ ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಈ ಕ್ರಮವನ್ನು ಒಂದೊಮ್ಮೆ ಖಾಲಿಸ್ತಾನ ಚಳುವಳಿಯನ್ನು ಹೊಸಕಿ ಹಾಕಿದ್ದ ಕಾಂಗ್ರೆಸ್ ವಿರುದ್ಧ ಜನರ ಭಾವನೆಯನ್ನು ಕೆರಳಿಸಲು ಮೋದಿ ಸರಕಾರ ಹೂಡಿದ ತಂತ್ರ ಎಂದು ಪರಿಗಣಿಸಲಾಗುತ್ತಿದೆ. ಕಾಂಗ್ರೆಸ್ ನಾಯಕರಾಗಿದ್ದ ಮಾಜಿ ಮುಖ್ಯಮಂತ್ರಿ ಬಿಯಂತ್ ಸಿಂಗ್ ಹತ್ಯೆಯ ಸಂಚಿನಲ್ಲಿ ರಜೋನಾ ಎರಡನೇ ಹಂತದ ಆತ್ಮಾಹುತಿ ದಾಳಿಕೋರನಾಗಿ ಸಿದ್ಧವಾಗಿದ್ದ.

1995ರಲ್ಲಿ ಚಂಡಿಗಡದಲ್ಲಿ ನಡೆದ ಸ್ಫೋಟದಲ್ಲಿ ಮೂವರು ಕಮಾಂಡೊಗಳು ಸೇರಿದಂತೆ 16 ಮಂದಿ ಸಾವನ್ನಪ್ಪಿದ್ದರು. ಘಟನೆಯಲ್ಲಿ ಬಂಧಿತ ರಜೋನಾಗೆ ವಿಚಾರಣಾ ನ್ಯಾಯಾಲಯ 2004ರಲ್ಲಿ ಮರಣ ದಂಡೆ ಶಿಕ್ಷೆ ವಿಧಿಸಿತ್ತು. ಆದರೆ ಮಾರ್ಚ್ 28, 2012ರಲ್ಲಿ ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ರಜೋನಾನ ಮರಣ ದಂಡನೆಗೆ ತಡೆ ವಿಧಿಸಿದ್ದರು. ಅಂದಿನಿಂದ ಆತನನ್ನು ಪಟಿಯಾಲದ ಕೇಂದ್ರ ಕಾರಾಗೃಹದಲ್ಲಿ ಕೂಡಿಹಾಕಲಾಗಿತ್ತು. 2012ರ ಮಾರ್ಚ್ 30ರಂದು ರಜೋನಾನನ್ನು ಗಲ್ಲಿಗೇರಿಸುವ ದಿನ ಸಮೀಪಿಸಿದಾಗ ರಾಜ್ಯದಲ್ಲಿ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಮನಮೋಹನ್ ಸಿಂಗ್ ಸರಕಾರ ರಜೋನಾನ ಮರಣ ದಂಡನೆ ಶಿಕ್ಷೆಯನ್ನು ತಡೆಹಿಡಿಯುವಂತೆ ರಾಷ್ಟ್ರಪತಿಗೆ ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News