18 ಕೋ. ರೂ. ವಂಚನೆ ಪ್ರಕರಣ: ಟಿವಿ9 ಮಾಜಿ ಸಿಇಒ ಬಂಧನ
ಹೈದರಾಬಾದ್, ಅ.5: 18 ಕೋಟಿ ರೂ. ವಂಚನೆ ಆರೋಪದಡಿ ಟಿವಿ9 ಸುದ್ದಿವಾಹಿನಿಯ ಮಾಜಿ ಸಿಇಒ ವಿ.ರವಿಪ್ರಕಾಶ್ ಅವರನ್ನು ಹೈದರಾಬಾದ್‌ನ ಬಂಜಾರಾ ಹಿಲ್ಸ್ ಪೊಲೀಸರು ಶನಿವಾರ ಬಂಧಿಸಿದ್ದಾರೆ. ರವಿಪ್ರಕಾಶ್ ಅವರು ಟಿವಿ9ನ ಮಾಲಕ ಸಂಸ್ಥೆ ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪೆನಿ ಪ್ರೈ.ಲಿ (ಎಬಿಸಿಎಲ್)ನಿಂದ 18 ಕೋಟಿ ರೂ. ಹಿಂಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಕಳೆದ ಆಗಸ್ಟ್‌ನಲ್ಲಿ ಮೈ ಹೋಂ ಗ್ರೂಪ್‌ನ ಜುಪಲ್ಲಿ ರಾಮೇಶ್ವರ ರಾವ್ ಅವರ ಮಾಲಕತ್ವದ ಎಬಿಸಿಎಲ್ ಟಿವಿ9ಅನ್ನು ಖರೀದಿಸಿತ್ತು ಮತ್ತು ಅದರಲ್ಲಿ ಶೇ.8.25 ಪಾಲುದಾರಿಕೆ ಹೊಂದಿದ್ದ ರವಿಪ್ರಕಾಶ್ ಅವರನ್ನು ಸಿಇಒ ಸ್ಥಾನದಿಂದ ವಜಾಗೊಳಿಸಿತ್ತು. ಪ್ರಕಾಶ್ ಮತ್ತು ಮಾಜಿ ನಿರ್ದೇಶಕ ಎಂಕೆವಿಎನ್ ಮೂರ್ತಿ ಸೆಪ್ಟೆಂಬರ್ 2018 ಮತ್ತು ಮೇ 2019ರ ಮಧ್ಯೆ 18,31,75,000ರೂ. ಹಿಂಪಡೆದುಕೊಂಡಿದ್ದಾರೆ ಎಂದು ಮಂಡಳಿಯ ನೂತನ ನಿರ್ದೇಶಕರು ಸೆಪ್ಟಂಬರ್ 24ರಂದು ಆರೋಪ ಮಾಡಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಬಂಜಾರಾ ಹಿಲ್ಸ್ ಠಾಣಾ ಪೊಲೀಸರು ತನ್ನ ಹೇಳಿಕೆಯನ್ನು ದಾಖಲಿಸುವಂತೆ ರವಿಪ್ರಕಾಶ್‌ಗೆ ಎರಡು ಬಾರಿ ನೋಟಿಸ್ ಜಾರಿ ಮಾಡಿದರೂ ಅವರ ಅದಕ್ಕೆ ಪ್ರತಿಕ್ರಿಯಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ ರವಿಪ್ರಕಾಶ್ ಮನೆಗೆ ತೆರಳಿದ ಪೊಲೀಸರು ಅವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಮತ್ತು ಅವರ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.